ಕೊಕ್ಕರ್ಣೆ ಸರ್ಕಾರಿ ಶಾಲೆಗೆ ಹಳದಿ ಶಾಲೆ ಪ್ರಶಸ್ತಿ

<ಪಠ್ಯ ಜತೆಗೆ ಪರಿಸರ ಪ್ರೇಮದ ಜಾಗೃತಿಗೆ ಸಂದ ಸನ್ಮಾನ * ಕಳೆದ ಬಾರಿ ಕಿತ್ತಳೆ ಪ್ರಶಸ್ತಿ> 

ಅನಂತ ನಾಯಕ್ ಮುದ್ದೂರು, ಕೊಕ್ಕರ್ಣೆ

ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳಿಗೆ ವರದಾನವಾಗಿರುವ ಕೊಕ್ಕರ್ಣೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಡಿಗೆ ಉಡುಪಿ ಜಿಲ್ಲಾಮಟ್ಟದ ಪರಿಸರ ಮಿತ್ರ ಜಿಲ್ಲಾ ಹಳದಿ ಶಾಲೆ ಪ್ರಶಸ್ತಿ ಗರಿ ಲಭಿಸಿದೆ.
ಶಾಲಾ ಕೈತೋಟ ರಚನೆ, ಪೈಪ್ ಕಾಂಪೋಸ್ಟ್, ಕೈತೋಟಕ್ಕೆ ಬಟ್ಟೆ ಚೀಲ ಅಳವಡಿಕೆ, ತ್ಯಾಜ್ಯದ ಸಮರ್ಪಕ ವಿಲೇವಾರಿ, ಪ್ಲಾಸ್ಟಿಕ್ ನಿಷೇಧ ಜಾಗೃತಿ ಅಭಿಯಾನ ಇತ್ಯಾದಿ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ವಿದ್ಯಾರ್ಥಿಗಳು ತೊಡಗಿಸಿಕೊಂಡ ಮಕ್ಕಳಿಗೆ ಬೆಂಬಲವಾಗಿ ನಿಂತವರು ಇಲ್ಲಿನ ಶಿಕ್ಷಕ ವೃಂದ. ಶಾಲೆ ಎಲ್ಲ ಪೂರಕ ಚಟುವಟಿಕೆಗಳಿಗೆ ಸದಾ ಸಾಥ್ ನೀಡುತ್ತಿರುವುದು ಹಳೇ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ ಶಿಕ್ಷಕ ಸಂಘ.

ವಾರ್ಷಿಕ ಮತ್ತು ಮಧ್ಯಂತರ ರಜಾದಿನಗಳಲ್ಲಿ ಗಿಡಗಳ ಪೋಷಣೆಯನ್ನು ಅಡುಗೆ ಸಿಬ್ಬಂದಿ ಮತ್ತು ನೆರೆ ಹೊರೆಯವರು ನೋಡಿಕೊಳ್ಳುತಾರೆ.

ಸುಮಾರು 65 ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಅನ್ನದಾಸೋಹಕ್ಕೆ ಬೇಕಾಗುವ ತರಕಾರಿಗಳು ಈ ಕೈತೋಟದಿಂದಲೆ ಪೂರೈಕೆಯಾಗುತ್ತದೆ.

ತರಕಾರಿ ಬೀಜಗಳು, ಸಾವಯವ ಗೊಬ್ಬರ, ಬೇಲಿ ಮುಂತಾದವು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನೆಯಿಂದಲೇ ದೊರಕುತ್ತದೆ. ಕೃಷಿ ಕೈತೋಟದಲ್ಲಿ ಬೆಂಡೆ, ಹರಿವೆ, ಬಸಳೆ, ಅಲಸಂಡೆ, ತೊಂಡೆ, ನುಗ್ಗೆ ಹಾಗೂ ಔಷಧೀಯ ಗಿಡಗಳಿವೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಉಡುಪಿ ಕೊಡಮಾಡುವ ಪ್ರಶಸ್ತಿ ಇದಾಗಿದೆ. ಮುಖ್ಯಶಿಕ್ಷಕ ಭಾಸ್ಕರ ಪೂಜಾರಿ,ಶಿಕ್ಷಕಿ ಗುಲಾಬಿ ಅವರು ಜಿಪಂ ಅಧ್ಯಕ್ಷ ದಿನಕರ ಬಾಬು ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಕೊಕ್ಕರ್ಣೆ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಅನೇಕ ಮೌಲ್ಯಯುತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉತ್ತಮ ಶಿಕ್ಷಕ ವೃಂದ, ಪಾಲಕರು, ಹಳೇ ವಿದ್ಯಾರ್ಥಿಗಳು, ರಕ್ಷಕ-ಶಿಕ್ಷಕ ಸಂಘದವರು ಪ್ರೋತ್ಸಾಹ ನೀಡುತ್ತಿದ್ದಾರೆ. ಮಕ್ಕಳು ಕೂಡ ಪರಿಸರ ಪ್ರಜ್ಞೆ ಅಳವಡಿಸಿಕೊಂಡಿದ್ದಾರೆ.
ಭಾಸ್ಕರ ಪೂಜಾರಿ, ಪ್ರಭಾರ ಮುಖ್ಯಶಿಕ್ಷಕ

ವಿದ್ಯಾರ್ಥಿಗಳು ಶಾಲಾ ಪರಿಸರವನ್ನು ಒಪ್ಪವಾಗಿಟ್ಟು, ಪಂಚಾಯಿತಿ ಸ್ವಚ್ಛತಾ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ಪರಿಸರ ಜಾಗೃತಿಯ ಅನೇಕ ಚಟುವಟಿಕೆಗಳು ನಡೆದಿದೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಲು ಗ್ರಾಪಂ ಪ್ರಯತ್ನಿಸುತ್ತಿದೆ. ಈ ಶಾಲೆಗೆ ಪ್ರಶಸ್ತಿ ಬಂದಿರುವುದು ಪ್ರಶಂಸನೀಯ.
ಪ್ರದೀಪ್ ಕೊಕ್ಕರ್ಣೆ, ಪಿಡಿಒ