ಕೊಕಟನೂರ: ಅಪ್ರಾಪ್ತೆ ನಿಶ್ಚಿತಾರ್ಥ ತಡೆದ ಪೊಲೀಸರು

ಕೊಕಟನೂರ: ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಕಂಕಣವಾಡಿ ತೋಟದ ವಸತಿ ಬಳಿ ಗುರುವಾರ ನಡೆಯುತ್ತಿದ್ದ ಅಪ್ರಾಪ್ತ ಬಾಲಕಿಯೋರ್ವಳ ವಿವಾಹ ನಿಶ್ಚಿತಾರ್ಥ ತಡೆಯುವಲ್ಲಿ ಪೊಲೀಸ್, ಕಂದಾಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಹಲ್ಯಾಳ ಗ್ರಾಮದ ನಿವಾಸಿ ಕರೆಪ್ಪ ಶಿವಪ್ಪ ನಾಯಿಕ ತಮ್ಮ ಪುತ್ರಿಯ ನಿಶ್ಚಿತಾರ್ಥವನ್ನು ಜಮಖಂಡಿ ತಾಲೂಕಿನ ಕಡಪಟ್ಟಿ ಗ್ರಾಮದ ನಿವಾಸಿ, ಸೋದರತ್ತೆಯ ಮಗನಾದ ಮಹೇಶ ಹನುಮಂತ ಅಕೋಜಿ ಜತೆಗೆ ಸುಟ್ಟಟ್ಟಿ ಗ್ರಾಮದಲ್ಲಿರುವ ಬಾಲಕಿಯ ಅಜ್ಜಿಯ ಮನೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಬಾಲಕಿ 14 ವರ್ಷದವಳಾಗಿದ್ದು, 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ ಆಕೆಗೆ ನಿಶ್ಚಿತಾರ್ಥ ಬೇಡವಾಗಿತ್ತು. ಆದ್ದರಿಂದ ಸ್ವತಃ ಬಾಲಕಿಯೇ 1098 ಮಕ್ಕಳ ಸಹಾಯವಾಣಿಗೆ ಬುಧವಾರವೇ ಕರೆ ಮಾಡಿ ವಿಷಯ ತಿಳಿಸಿದ್ದಳು. ಬಾಲಕಿ ಕರೆಯ ಮೇರೆಗೆ ಕಂದಾಯ, ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿದಾಗ ನಿಶ್ಚಿತಾರ್ಥ ನಡೆಯುವ ಸ್ಥಳಕ್ಕೆ ಅಧಿಕಾರಿಗಳು ಆಗಮಿಸುತ್ತಿರುವುದನ್ನು ಕಂಡು ಬಾಲಕಿಯ ತಂದೆ, ತಾಯಿ ಮತ್ತು ಸಂಬಂಧಿಕರು ಬಾಲಕಿಯ ಸಮೇತ ಪರಾರಿಯಾದರು.

ಆದರೆ ಸುಟ್ಟಟ್ಟಿ ಗ್ರಾಮದಲ್ಲಿರುವ ಬಾಲಕಿಯ ಅಜ್ಜಿ ಮಾಯವ್ವ ಶಿವಪ್ಪ ನಾಯಿಕ ಇವರಿಂದ ಬಾಲಕಿಗೆ 18 ವರ್ಷವಾಗುವವರೆಗೆ ಮುದುವೆ ಮಾಡಬಾರದೆಂದು ಮುಚ್ಚಳಿಕೆ ಪತ್ರ ಬರೆಸಿಕೊಂಡ ಅಧಿಕಾರಿಗಳು ಬಳಿಕ ಬಾಲಕಿಯ ತಂದೆ ಹಾಗೂ ತಾಯಿಯ ಜತೆ ದೂರವಾಣಿ ಕರೆ ಮಾಡಿ ತಿಳಿವಳಿಕೆ ನೀಡುವುದರ ಜತೆಗೆ ಒಂದು ವೇಳೆ ಕಾನೂನು ಬಾಹಿರವಾಗಿ ಮದುವೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಐಗಳಿ ಪಿಎಸ್‌ಐ ರಮೇಶ ಅವಜಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಎಸ್.ಪಿ.ಇಂಗಳೇಶ್ವರ, ಗ್ರಾಮಲೆಕ್ಕಾಧಿಕಾರಿ ಕಲ್ಮೇಶ ಕಲಮಡಿ, ಶಿವಾನಂದ ಮೆಣಸಂಗಿ, ಲಕ್ಷ್ಮೀ ಮಾಳಿ, ರುಕ್ಮೀಣಿ ಮೋರೆ, ಬಸವರಾಜ ಕಂಕಣವಾಡಿ, ಸದಾಶಿವ ಕಂಕಣವಾಡಿ ಇತರರು ಇದ್ದರು.