ಹುಂಡಿಯಲ್ಲಿನ ಹಣ ಸುರಕ್ಷಿತ

ಕೊಡೇಕಲ್: ಗ್ರಾಮದ ಪ್ಯಾಟಿ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಹುಂಡಿ ಕಳ್ಳತನ ಯತ್ನ ನಡೆದ ಹಿನ್ನೆಯಲ್ಲಿ ಮಂಗಳವಾರ ತಹಸೀಲ್ದಾರ್ ಸುರೇಶ ಚವಲ್ಕರ್ ನೇತೃತ್ವದಲ್ಲಿ ಹುಂಡಿಯಲ್ಲಿನ ಹಣ ಎಣಿಕೆ ಮಾಡಲಾಯಿತು.

ಸೋಮವಾರ ಹುಂಡಿಯ ಪೆಟ್ಟಿಗೆ ಹೊರಭಾಗದ ತಿರುಗುಣಿ ಚಕ್ರವನ್ನು ಮುರಿದು ಕಳ್ಳತನಕ್ಕೆ ಯತ್ನ ಮಾಡಲಾಗಿತ್ತು. ಇದರಿಂದ ಹುಂಡಿಯಲ್ಲಿ ಹಣ ಸುರಕ್ಷಿತವಾಗಿದೆಯಾ ಎಂಬ ಅನುಮಾನ ಮೂಡಿದ್ದವು. ಇದರಿಂದ ಮಂಗಳವಾರ ದೇವಸ್ಥಾನಕ್ಕೆ ಆಗಮಿಸಿದ ತಹಸೀಲ್ದಾರ್ ಮತ್ತು ಪೋಲಿಸರು ಹುಂಡಿ ಪೆಟ್ಟಿಗೆ ತೆರೆಯಲು ಸಿದ್ದತೆಗಳನ್ನು ನಡೆಸಿದ್ದರು.

ಹುಂಡಿ ಪೆಟ್ಟಿಗೆ ಕೀಲಿ ಕೈಗಳು ತಹಸೀಲ್ದಾರ್ ಕಛೇರಿಯಲ್ಲಿರುತ್ತವೆ. ಆದರೂ ಹುಂಡಿ ಪೆಟ್ಟಿಗೆಯ ತಿರುಗುಣಿ ಚಕ್ರ ಮುರಿದ ಕಾರಣ ಹುಂಡಿ ಪೆಟ್ಟಿಗೆ ತಯಾರಕ ಬಂದು ತಿರುಗುಣಿ ಚಕ್ರವನ್ನು ಸರಿಪಡಿಸಿದನು. ನಂತರ ಹಣದ ಹುಂಡಿಯನ್ನು ತೆರೆಯಲಾಯಿತು. ದೇವಸ್ಥಾನದ ಹುಂಡಿ ಪೆಟ್ಟಿಗೆಯಲ್ಲಿ ಹಣ ಸುರಕ್ಷಿತವಾಗಿದ್ದು, ಎಣಿಕೆ ಮಾಡಲಾಗಿ 70,743 ರೂ.ಗಳು ಹುಂಡಿಯಲ್ಲಿವೆ ಎಂದು ತಹಶೀಲ್ದಾರ ಸುರೇಶ ಚವಲ್ಕರ ತಿಳಿಸಿದರು. ಪಿಎಸ್ಐ ಪ್ರದೀಪ ಬಿಸೆ, ಉಪ ತಹಸೀಲ್ದಾರ್ ಮಹಾದೇವಪ್ಪಗೌಡ ಇತರರಿದ್ದರು.

ಕಳೆದ ಅಕ್ಟೋಬರ್ನಲ್ಲಿ ಪ್ಯಾಟಿ ಬಸವೇಶ್ವರ ದೇವಸ್ಥಾನದ ಹುಂಡಿ ಕಳ್ಳತನವಾಗಿತ್ತು. ಮತ್ತೆ ಸೋಮವಾರ ಹೊಸ ಹುಂಡಿಪೆಟ್ಟಿಗೆ ಚಕ್ರ ಮುರಿದು ಕಳ್ಳತನಕ್ಕೆ ಯತ್ನ ನಡೆಸಲಾಗಿದೆ. ಈ ಕುರಿತು ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮಂಗಳವಾರ ಹುಂಡಿ ಪೆಟ್ಟಿಗೆ ತೆರೆಯಲಾಗಿದ್ದು 70,743 ರೂ. ಸಂಗ್ರಹವಾಗಿವೆ. ಸುರಕ್ಷತೆಯ ದೃಷ್ಠಿಯಿಂದ ಗ್ರಾಮದ ಎರಡು ದೇವಸ್ಥಾನಗಳಲ್ಲಿ ಶೀಘ್ರ ಸಿಸಿ ಕ್ಯಾಮರಾ ಅಳವಡಿಸಲಾಗುವುದು.
| ಸುರೇಶ ಚವಲ್ಕರ, ತಹಸೀಲ್ದಾರ್ ಹುಣಸಗಿ