ಭತ್ತದ ಬೆಳೆಗೆ ಸೊಳ್ಳೆಗಳ ಕಾಟ

ಪವನ ದೇಶಪಾಂಡೆ ಕೊಡೇಕಲ್
ಮುಂಗಾರು ಹಂಗಾಮಿನ ಭತ್ತದ ಬೆಳೆಗೆ ಸೊಳ್ಳೆ ಕಾಟ ಕಾಣಿಸಿಕೊಂಡಿದ್ದರಿಂದ ಸೊಳ್ಳೆಗಳ ಹತೋಟಿಗೆ ಎಲ್ಲ ಪ್ರಯತ್ನ ನಡೆಸುತ್ತಿದ್ದರು ಹತೋಟಿಗೆ ಬಾರದೆ ರೈತ ಬೆಳೆಗಾರರಲ್ಲಿ ಆತಂಕ ಹೆಚ್ಚಾಗಿದೆ.

ವಲಯದ ಕೊಡೇಕಲ್, ರಾಜನಕೋಳ್ಳೂರ, ಹಣಮಸಾಗರ, ಗೆದ್ದಲಮರಿ, ಬೈಲಕುಂಟಿ, ಕಡದರಾಳ, ಬೊಮ್ಮನಗುಡ್ಡ, ಮಾಳನೂರ, ಗುಳಬಾಳ ಸೇರಿ ಹತ್ತು ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಭತ್ತಕ್ಕೆ ಸೊಳ್ಳೆಗಳ ಕಾಟ ಉಲ್ಬಣಿಸಿದೆ. ರೈತರು ವಿವಿಧ ರೀತಿಯ ಕ್ರಿಮಿನಾಶಕ ಬಳಸಿದರೂ ಇವುಗಳ ಕಾಟ ತಪ್ಪುತ್ತಿಲ್ಲ. ಇದು ಹೀಗೆ ಮುಂದಿವರಿದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತೆಗೆ ರೈತ ಸಿಲುಕಲಿದ್ದಾನೆ.

ಸೊಳ್ಳೆ ನಿಯಂತ್ರಣಕ್ಕೆ ರೈತರು ದುಬಾರಿ ಬೆಲೆಯ ಕ್ರಿಮಿನಾಶಕಗಳನ್ನು ವಾರದಲ್ಲಿ ಎರಡು ಬಾರಿಯಂತೆ ಸಿಂಪಡಿಸುತ್ತಿದ್ದಾರೆ. ಆದರೆ ಸೊಳ್ಳೆ ಮಾತ್ರ ನಾಶವಾಗುತ್ತಿಲ್ಲ ಎನ್ನತ್ತಾರೆ ಬೊಮ್ಮನಗುಡ್ಡದ ರೈತ ಮಾನಣ್ಣ ಕದರಾಪುರ.

ಭತ್ತ ಜೋಳ್ಳಾಗುವ ಭೀತಿ: ವಲಯದಲ್ಲಿ ಅಂದಾಜು 2ರಿಂದ 3 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ಬೆಳಯಲಾಗುತ್ತಿದೆ. ಸದ್ಯ ಭತ್ತದ ತೆನೆ ಕಾಳು ಕಟ್ಟುತ್ತಿದ್ದು, ಸೊಳ್ಳೆಗಳು ಭತ್ತದ ರಸ ಹೀರುವುದರಿಂದ ಕಾಳು ಜೋಳ್ಳಾಗುವ ಮತ್ತು ಇಳುವರಿ ಕಡಿಮೆ ಬರುವ ಭೀತಿ ಎದುರಾಗಿದೆ.

ಉಷ್ಣಾಂಶ ಹೆಚ್ಚಳ ಕಾರಣ: ಸೊಳ್ಳೆಗಳು ಹೆಚ್ಚಾಗಲು ವಾತಾವರಣದಲ್ಲಿನ ತಾಪಮಾನ ಹೆಚ್ಚಳವೇ ಕಾರಣವಾಗಿದೆ ಎನ್ನುತ್ತಾರೆ ಕೆಲ ರೈತರು, ಮತ್ತು ಈ ಬಾರಿ ಮುಂಗಾರು ಮಳೆ ಸಮರ್ಪಕವಾಗಿ ಬಾರದ ಹಿನ್ನೆಯಲ್ಲಿ ವಾತಾವರಣದಲ್ಲಿ ಬಸಿಲಿನ ಪ್ರಮಾಣ ಏರಿಕೆಯಾಗಿದ್ದು ಸೊಳ್ಳೆಗಳು ಹೆಚ್ಚಾಗಿವೆ. ಒಂದು ವೇಳೆ ಸರಿಯಾದ ಸಮಯದಲ್ಲಿ ಮಳೆ ಆಗಿದ್ದರೆ ವಾತಾವರಣದಲ್ಲಿ ಶೀತ ಇದ್ದು ಸೊಳ್ಳೆಗಳು ಇರುತ್ತಿಲಿಲ್ಲ ಎಂದು ರೈತರು ಹೇಳುತ್ತಾರೆ.

ಒಣಗುತ್ತಿರುವ ಬೆಳೆಗಳು: ವಲಯದಲ್ಲಿ ಕೆಲವು ಭಾಗಗಳಲ್ಲಿ ಭತ್ತದ ಬೆಳೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದರಿಂದ ಇನ್ನೂ ಕೆಲವು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರ ಜಮೀನುಗಳಿಗೆ ಸರಿಯಾಗಿ ಕಾಲುವೆ ನೀರು ಹರಿಯದೆ ಕಡದರಾಳ ಮತ್ತು ಬೊಮ್ಮನಗುಡ್ಡ ವ್ಯಾಪ್ತಿಯಲ್ಲಿ ಭತ್ತದ ಬೆಳೆ ನೀರಿಲ್ಲದೆ ಒಣಗುವ ಹಂತಕ್ಕೆ ತಲುಪಿವೆ.

ಮಳೆ ಇಲ್ಲದೆ ಕಷ್ಟ ಅನುಭವಿಸುತ್ತಿರುವ ರೈತನಿಗೆ, ಇದೀಗ ಸೋಳ್ಳೆಯ ಕಾಟ ಕೂಡ ಬೆನ್ನತ್ತಿದ್ದರಿಂದ ರೈತ ಒಂದಿಲ್ಲೊಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿದಂತಾಗಿದೆ.

ಕಾಳು ಕಟ್ಟುವ ಹಂತದಲ್ಲಿ ಭತ್ತಕ್ಕೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, 5 ಬಾರಿ ಕ್ರಿಮಿನಾಶಕ ಸಿಂಪಡಿಸಿ ಫಸಲು ಪಡೆಯುತ್ತಿದ್ದೆವು. ಆದರೆ ಈ ಬಾರಿ 7 ರಿಂದ 8 ಬಾರಿ ಕ್ರಿಮಿನಾಶಕ ಸಿಂಪರಣೆ ಮಾಡಿದರೂ ಸೊಳ್ಳೆಗಳು ನಿಯಂತ್ರಣಕ್ಕೆ ಬಾರದಂತಾಗಿವೆ.
| ಸಂಗು ಜುಮ್ಮರ, ರೈತ ಕೊಡೇಕಲ್

ಭತ್ತದ ಬೆಳೆಗೆ ಬಳಸಲಾಗುವ ರಸಗೊಬ್ಬರಗಳ ಪ್ರಮಾಣದಲ್ಲಿ ಏರುಪೇರಾದಾಗ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಭತ್ತ ನಾಟಿ ಮಾಡಿದ 20ರಿಂದ 30 ದಿನಗಳಲ್ಲಿ ಸೊಳ್ಳೆಗಳು ಕಾಣಿಸಿಕೊಳ್ಳುತ್ತವೆ. ಆರಂಭದ ಹಂತದಲ್ಲಿಯೇ ಸರಿಯಾದ ಪ್ರಮಾಣದಲ್ಲಿ ಕ್ರಿಮಿನಾಶಕ ಸಿಂಪಡಿಸಬೇಕು. ಅಲ್ಲದೆ ಕ್ರಿಮಿನಾಶಕ ಸಿಂಪರಣೆಯಲ್ಲಿ ಕೆಲವು ವೈಜ್ಞಾನಿಕ ಪದ್ಧತಿ ಅನುಸರಿಸಬೇಕು.
| ಡಾ.ಮಲ್ಲಿಕಾರ್ಜುನ ಕೆಂಗನಾಳ, ಹಿರಿಯ ವಿಜ್ಞಾನಿಗಳು, ಕೃಷಿ ಸಂಶೋಧನಾ ಕೇಂದ್ರ ಕವಡಿಮಟ್ಟಿ