ಕುದುರೆಗೆ ಚಿಕಿತ್ಸೆ ಕೊಡಿಸಿದ ಯುವ ತಂಡ

ಕೊಡೇಕಲ್: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸದೇ ವಿಡೀಯೋ ಮಾಡುವಲ್ಲಿ ನೀರತರಾಗಿರುವ ಈ ಕಾಲದಲ್ಲಿ ಅನಾಥ ಕುದರೆಯೊಂದಕ್ಕೆ ಸೂಕ್ತ ಚಿಕಿತ್ಸೆ ನೀಡಿದ ಕೆಲ ಯುವಕರು ಮಾನವೀಯತೆ ಮೆರೆದಿದ್ದಾರೆ.

ಪಟ್ಟಣದಲ್ಲಿ ಕಳೆದ ಹಲವು ತಿಂಗಳಿಂದ ಕಾಲು ಮುರಿದುಕೊಂಡು ಬಳಲಿ ಬೆಂಡಾಗಿ, ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ಕುದುರೆಯೊಂದಕ್ಕೆ ಗ್ರಾಮದ ಯುವಕರ ತಂಡವೊಂದು ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರಕಿಸಿಕೊಡುವ ಮೂಲಕ ಮಾನವೀಯತೆ ಮೆರೆದು ಎಲ್ಲರ ಜನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಕೆಲ ತಿಂಗಳ ಹಿಂದೆ ನಾಲ್ಕಾರು ಕುದುರೆಗಳು ಹೋಗುತ್ತಿದ್ದ ಸಂದರ್ಭದಲ್ಲಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಒಂದು ಕುದುರೆ ಕಾಲು ಮುರಿದುಕೊಂಡಿತ್ತು. ಇದೀಗ ಆ ಗಾಯ ಉಲ್ಬಣಗೊಂಡು ಗ್ಯಾಂಗರೀನ್ ಆಗಿ ತೀವ್ರ ಅಸ್ವಸ್ತವಾಗಿತ್ತು. ತಿನ್ನಲು ಸೂಕ್ತ ಆಹಾರ ಸಿಗದೇ ನೋವಿನಲ್ಲಿ ಗ್ರಾಮದ ಎಲ್ಲೆಡೆ ಓಡಾಡುತ್ತಲಿತ್ತು.

ಮಾನವೀಯತೆ ಮೆರೆದ ಯುವಕರು: ಬಿಸಿಲಿನಲ್ಲಿ ನರಳುತ್ತಾ ಗ್ರಾಮದ ಗ್ರಾಮದೇವತೆ ಓಣಿಯಲ್ಲಿ ಕುದುರೆ ನಿಂತದನ್ನು ನೋಡಿದ ಯುವಕರ ತಂಡವೊಂದು, ಕುದುರೆ ರಕ್ಷಣೆಗೆ ಮುಂದಾಗಿದೆ. ಕೂಡಲೇ ಕುದುರೆಯನ್ನು ಕಟ್ಟಿಹಾಕಿ ನಂತರ ಪಶುವೈದ್ಯರನ್ನು ಕರೆದುಕೊಂಡು ಬಂದು ಕುದುರೆಗೆ ಸೂಕ್ತ ಚಿಕಿತ್ಸೆ ನೀಡಿಸಲು ಮುಂದಾಗಿದ್ದಾರೆ.

ಯುವಕರ ಮನವಿಗೆ ಸ್ಪಂದಿಸಿದ ಸ್ಥಳೀಯ ಪಶು ಚಿಕಿತ್ಸಾಲಯದ ಪರೀವಿಕ್ಷಕ ಮಹ್ಮದ್ ಚೌಧರಿ, ಚಿಕಿತ್ಸೆಗೆ ಬೇಕಾಗುವ ವೈದ್ಯಕೀಯ ಪರಿಕರಗಳ ಜೊತೆಗೆ ಸ್ಥಳಕ್ಕೆ ಧಾವಿಸಿ ಕುದುರೆ ಪರೀಕ್ಷಿಸಿದ್ದಾರೆ. ಕುದುರೆ ಕಾಲಿಗೆ ಗ್ಯಾಂಗರೀನ್ ಆಗಿದ್ದು, ಈ ಬಗ್ಗೆ ಹಿರಿಯ ಪಶು ವೈದ್ಯರನ್ನು ದೂರವಾಣಿ ಮೂಲಕ ಸಂರ್ಪಕಿಸಿ ಚಿಕಿತ್ಸೆ ನೀಡಿದರು.

ಇನ್ನೂ ಚಿಕಿತ್ಸೆ ನಂತರ ಕುದುರೆ ಅನುಭವಿಸುತ್ತಿದ್ದ ಸಂಕಟ ಕಡಿಮೆ ಆದದನ್ನು ಕಂಡ ಯುವಕರ ಮುಖ ಹರ್ಷದಿಂದ ಕೂಡಿತಲ್ಲದೆ ಸಾರ್ಥಕತೆ ಭಾವ ಮನೆ ಮಾಡಿತ್ತು. ಕುದುರೆ ಚಿಕಿತ್ಸೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಡಾ.ಮಹ್ಮದ್ ಚೌಧರಿ, ಪರಶುರಾಮ ಮಡಿವಾಳರ, ರಮೆಶ ಬಿರಾದಾರ, ರಾಮು ಕೋಳಿ, ಶಿವಯ್ಯ ಮಠ, ಸುರೇಶ ಹೂಗಾರ, ದುರಗಪ್ಪ ಬೇರಮಟ್ಟಿ, ಶರಣು ಮುದ್ದೆಬಿಹಾಳ, ಬಾಲಪ್ಪ ಬರದೇವನಾಳ, ಸುಭಾಸ ಹಡಪದ, ಮಹೇಶ ಹೂಗಾರ, ದೇವರಾಜ ಹೂಗಾರ, ಪ್ರಮೋದ ಜೋಶಿ, ವಿಶಾಲ ಅಂಗಡಿ ಇತರರು ಸಾಥ ನೀಡಿದರು.

ಒಂದು ವಾರ ಶೂಶ್ರೂಷೆ: ಕುದುರೆಗೆ ಚಿಕಿತ್ಸೆ ನೀಡಿದ ವೈದ್ಯರು ಒಂದು ವಾರಗಳ ಕಾಲ ಸೂಕ್ತ ಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದರು. ನಂತರ ರೈತ ಶಿವಯ್ಯ ಮಠ ಅವರು ಒಂದು ವಾರದ ಕಾಲ ಕುದುರೆ ಶೂಶ್ರೂಸೆ ಮಾಡುವ ಜವಾಬ್ದಾರಿ ಹೊತ್ತು ಕುದುರೆಯನ್ನು ತಮ್ಮ ಹೊಲಕ್ಕೆ ಕರೆದುಕೊಂಡು ಹೋಗಿದ್ದು ಎಲ್ಲರ ಮೆಚ್ಚುಗೆ ಗಳಿಸಿತು.

ಮಾನವೀಯತೆ ಮರೆಯಾಗಿರುವ ಇಂದಿನ ದಿನಗಳಲ್ಲಿ ಯುವಕರು ಗಾಯಗೊಂಡ ಅನಾಥ ಕುದುರೆಗೆ ಚಿಕಿತ್ಸೆ ಕೊಡಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಕಾಲಿಗೆ ಗ್ಯಾಂಗರೀನ್ ಆಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿರುವ ಕುದುರೆಗೆ ಚಿಕಿತ್ಸೆ ನೀಡಲಾಗಿದೆ. ಒಂದು ವಾರದಲ್ಲಿ ಸರಿಯಾದ ಉಪಚಾರ ನೀಡಿದರೆ ಗುಣಮುಖವಾಗಲಿದೆ.
| ಡಾ.ಮಹ್ಮದ್ ಚೌಧರಿ, ಹಿರಿಯ ಪಶು ವೈದ್ಯಕೀಯ ಪರೀವಿಕ್ಷಕರು.