More

    ೨೦ರಂದು ಸಾಮರಸ್ಯ ಬೆಸೆಯುವ ಕೊಡವ ಯುವ ಮೇಳ

    ಮಡಿಕೇರಿ:

    ವಿಭಿನ್ನ ಆಶಯಗಳನ್ನು ಇಟ್ಟುಕೊಂಡು ಮಡಿಕೇರಿಯಲ್ಲಿ ಇದೇ ಮೊದಲ ಬಾರಿಗೆ ಕೊಡವ ಯುವ ಮೇಳ ೨೦೨೩ ಏರ್ಪಡಿಸಲಾಗಿದೆ. ಕೊಡವ ಸಮುದಾಯದ ಅಸ್ಮಿತೆ ಕಾಪಾಡಿಕೊಳ್ಳಲು ಶ್ರಮಿಸುತ್ತಿರುವ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಶನಿವಾರ (ಮೇ೨೦) ಈ ಕಾರ್ಯಕ್ರಮ ನಡೆಯಲಿದೆ. ಕೊಡವ ಯುವ ಸಮುದಾಯವನ್ನು ಪರಸ್ಪರ ಬೆಸೆಯುವ ಪ್ರಮುಖ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ಮೇಳದಲ್ಲಿ ಸುಮಾರು ೪ ಸಾವಿರದಷ್ಟು ಸಂಖ್ಯೆಯಲ್ಲಿ ಕೊಡವ ಯುವಜನತೆ ಪಾಲ್ಗೊಳ್ಳುವ ನಿರೀಕ್ಷೆ ಇದೆ.

    ವಿಶಿಷ್ಟವಾದ ಆಚಾರ, ವಿಚಾರ, ಪರಂಪರೆ, ಭಾಷೆ, ಸಂಸ್ಕೃತಿ ಹೊಂದಿರುವ ಕೊಡವ ಸಮುದಾಯದ ಯುವ ಪೀಳಿಗೆಯಲ್ಲಿ ಸಾಮರಸ್ಯ, ಸಹಬಾಳ್ವೆ ಬೆಳೆಸುವ ನಿಟ್ಟಿನಲ್ಲಿ ಸರಿಯಾದ ಮಾರ್ಗದರ್ಶನ ನೀಡಲು, ಕೊಡವ ಸಾಂಸ್ಕೃತಿಕ ಹಿರಿಮೆಯನ್ನು ಉಳಿಸಿ ಬೆಳೆಸುವಲ್ಲಿ ಅವರ ಜವಾಬ್ದಾರಿ ಬಗ್ಗೆ ಅರಿವು ಮೂಡಿಸಲು ವೇದಿಕೆಯೊಂದನ್ನು ಮನಗಂಡ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಮಡಿಕೇರಿಯಲ್ಲಿ ಕೊಡವ ಯುವ ಮೇಳ ೨೦೨೩ ಆಯೋಜಿಸಿದೆ. ಗಣನೀಯ ಸಾಧನೆ ಮಾಡಿರುವ ಕೊಡವ ಸಮುದಾಯದ ಸಾಧಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಾಧಕರನ್ನು ಮೇಳದಲ್ಲಿ ಸನ್ಮಾನಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೊಡವ ಯುವ ಪೀಳಿಗೆ ಮುಂದಕ್ಕೆ ಬರಲು ಇರುವ ದಾರಿಗಳ ಬಗ್ಗೆ ಸ್ಫೂರ್ತಿದಾಯಕ ಮಾತುಗಳನ್ನೂ ಈ ಸಾಧಕರು ಹಂಚಿಕೊಳ್ಳಲಿದ್ದಾರೆ.

    ಯುವ ಸಮುದಾಯಕ್ಕೆ ಉದ್ಯೋಗವಕಾಶ ಸೇರಿದಂತೆ ವಿವಿಧ ವಿಷಯಗಳ ಬಗ್ಗೆಯೂ ಸಾಧಕರು ಮಾಹಿತಿ ಕೊಡಲಿದ್ದಾರೆ. ಇದಲ್ಲದೆ ಕೊಡವ ಸಂಸ್ಕೃತಿ ಬಿಂಬಿಸುವ ನಾಟಕ ಪ್ರದರ್ಶ, ಗಾಯನ, ರ‌್ಯಾಂಪ್ ವಾಕ್, ಕೊಡವ ಡಿಜೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದೆ. ೧೫ ರಿಂದ ೪೦ರ ವಯೋಮಾನದವರಿಗಾಗಿ ಈ ಮೇಳ ಆಯೋಜಿಸಲಾಗುತ್ತಿದ್ದು, ಹಿರಿಯರು ಕೂಡ ಪಾಲ್ಗೊಂಡು ಯುವ ಪೀಳಿಗೆಗೆ ಆಶೀರ್ವಾದ ಮತ್ತು ಮಾರ್ಗದರ್ಶನ ಮಾಡಬಹುದಾಗಿದೆ. ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ವಿವಿಧ ಕೊಡವ ಸಂಘಟನೆಗಳೂ ಸಹಕಾರ ನೀಡುತ್ತಿದೆ.

    ಕೊಡವ ಯುವ ಜನಾಂಗ ಒಂದೇ ವೇದಿಕೆಯಲ್ಲಿ ಒಟ್ಟಾಗಿ ಸೇರಿ ಒಬ್ಬರನ್ನೊಬ್ಬರು ಅರಿತುಕೊಳ್ಳುವುದು, ಒಗ್ಗಟ್ಟಿನಲ್ಲಿ ಮುಂದಕ್ಕೆ ಸಾಗುವುದಕ್ಕೆ ಇಲ್ಲಿ ಅವಕಾಶ ಮಾಡಿಕೊಡುವ ಉದ್ದೇಶದೊಂದಿಗೆ ಆಯೋಜಿಸಲಾಗುತ್ತಿರುವ ಮೇಳದಲ್ಲಿ ಪ್ರಪಂಚದ ಮೂಲೆ ಮೂಲೆಯಲ್ಲಿರುವ ಕೊಡವ ಯುವ ಪೀಳಿಗೆಯನ್ನು ಒಂದು ಕಡೆ ಸೇರಿಸಬೇಕು, ಪರಸ್ಪರ ಮಾತು ಕತೆ ನಡೆಸಬೇಕು, ಒಬ್ಬರಿಗೊಬ್ಬರು ಪರಿಚಯ ಆಗಲು ವೇದಿಕೆ ಸಿಗಬೇಕು ಎನ್ನುವ ಮುಖ್ಯ ಗುರಿ ಇಟ್ಟುಕೊಳ್ಳಲಾಗಿದೆ. ಕೃಷಿ, ಕಾರ್ಪೊರೇಟ್, ಕೈಗಾರಿಕೆ, ಸರ್ಕಾರಿ ಸೇವೆ, ಸೇನೆ, ಸಿನಿಮಾ, ಕ್ರೀಡಾ ಕ್ಷೇತ್ರದ ಯುವ ಸಾಧಕರು ಮೇಳದಲ್ಲಿ ಪಾಲ್ಗೊಳ್ಳುವರು.

    ಇತ್ತೀಚಿನ ದಿನಗಳಲ್ಲಿ ಜನಾಂಗದ ಬಹುತೇಕ ಕಾರ್ಯಕ್ರಮಗಳಲ್ಲಿ ಕೇವಲ ಹಿರಿಯರು ಮಾತ್ರ ಕಂಡುಬರುತ್ತಿದ್ದಾರೆ. ಯುವ ಜನಾಂಗ ಉದ್ಯೋಗ ಮತ್ತಿತರ ಕಾರಣಗಳಿಂದ ಹಲವೆಡೆ ಹರಡಿ ಹೋಗಿದ್ದು ಕೊಡಗು ಮತ್ತು ಕೊಡವ ಸಂಸ್ಕೃತಿ ಬಗ್ಗೆ, ಆಚಾರ-ವಿಚಾರಗಳ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುತ್ತಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಪ್ರತಿ ವರ್ಷ ಈ ರೀತಿಯಲ್ಲಿ ಯುವ ಮೇಳ ಆಯೋಜಿಸಿ ಯುವ ಸಮುದಾಯ ಪರಸ್ಪರ ಬೆಸೆಯುವಂತೆ ಮಾಡುವುದು ತಮ್ಮ ಉದ್ದೇಶವಾಗಿದ್ದು, ಯಾವುದೇ ರೀತಿಯ ಬಲಪ್ರದರ್ಶನ ಅಥವಾ ಬೇರೆ ಯಾವುದೇ ಸ್ವಾರ್ಥ ಇಲ್ಲ ಎನ್ನುತ್ತಾರೆ ಸಂಘಟಕರು. ಕೊಡಗಿನಲ್ಲೂ ಯುವ ಪೀಳಿಗೆ ಬದುಕು ಕಟ್ಟಿಕೊಳ್ಳಬಹುದು ಎನ್ನುವುನ್ನು ಅರ್ಥೈಸುವುವ ಕೆಲಸವೂ ಈ ಮೇಳದಲ್ಲಿ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts