ಶ್ರೀಮಂಗಲ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ಮಕ್ಕಡ ಕೂಟ ಸಹಯೋಗದಲ್ಲಿ ಸೋಮವಾರ ಟಿ.ಶೆಟ್ಟಿಗೇರಿ ರೂಸ್ಟ್ ವಿದ್ಯಾಸಂಸ್ಥೆಯಲ್ಲಿ 5ನೇ ವರ್ಷದ ಮಕ್ಕಳ ಕೊಡವ ಜನಪದ ಸಾಂಸ್ಕೃತಿಕ ನಮ್ಮೆ ನಡೆಯಿತು.
ಎಜುಕೇಷನ್ ಟ್ರಸ್ಟ್‌ನ ಪ್ರಮುಖರಾದ ಮಲ್ಲಂಗಡ ಕೆ.ನಿರನ್‌ಉತ್ತಪ್ಪ ನಮ್ಮೆಗೆ ಚಾಲನೆ ನೀಡಿದರು. ಮಕ್ಕಳಿಗೆ ಕೊಡವ ಸಂಸ್ಕೃತಿ ಪರಿಚಯಿಸುವ ಉದ್ದೇಶದಿಂದ ಕೊಡವ ಮಕ್ಕಡ ಸಾಂಸ್ಕೃತಿಕ ಹಬ್ಬ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಕೊಡವ ಕಲೆ, ಸಂಸ್ಕೃತಿ ಉಳಿಯುತ್ತದೆ. ಮಕ್ಕಳು ಪ್ರಾರಂಭಿಕ ಹಂತದಲ್ಲಿಯೇ ಕೊಡವ ಸಂಸ್ಕೃತಿ, ಆಚಾರ-ವಿಚಾರ ಅರಿಯಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಕೊಡವ ಭಾಷೆಯಲ್ಲಿ ಹೆಚ್ಚಿನ ಪುಸ್ತಕಗಳು ಪ್ರಕಟಗೊಂಡರೆ ಮಾತ್ರ ಕೊಡವ ಸಾಹಿತ್ಯ ಇನ್ನಷ್ಟು ಬೆಳೆಯಲು ಸಾಧ್ಯ ಎಂದರು.
ಕೊಡವ ಸಂಸ್ಕೃತಿಯನ್ನು ಇನಷ್ಟು ಪರಿಚಯಿಸಬೇಕಾದರೆ ಸಂಶೋಧನೆಯ ಅವಶ್ಯಕತೆ ಇದೆ. ಇದಕ್ಕೆ ಸಾಹಿತ್ಯ ಅಕಾಡೆಮಿ ಹೆಚ್ಚು ಒತ್ತು ನೀಡಲಿದೆ. 5 ಕೋಟಿ ರೂ. ವೆಚ್ಚದಲ್ಲಿ ಅಕಾಡೆಮಿಗೆ ಸ್ವಂತ ಕಟ್ಟಡ ನಿರ್ಮಾಣಗೊಳ್ಳಲಿದೆ. ಸಾಂಸ್ಕೃತಿಕ ಸಂಶೋಧನಾ ಕೇಂದ್ರ, ವಸ್ತು ಸಂಗ್ರಹಾಲಯ ರೂಪುಗೊಳ್ಳಲಿದೆ. ಕೊಡವ ಶಬ್ದಕೋಶವನ್ನು ಹಲವು ಭಾಷೆಗೆ ತರ್ಜುಮೆ ಮಾಡುವ ಮೂಲಕ ವಿಶ್ವದ ಎಲ್ಲೆಡೆ ಲಭ್ಯವಿರುವಂತೆ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಅಕಾಡೆಮಿಗೆ ಲಭ್ಯವಿರುವ ಅನುದಾನದಲ್ಲಿ ಭಾಷೆ, ಸಂಸ್ಕೃತಿ, ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕೊಡವ ಮೂಲನಿವಾಸಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಪಾರ್ವತಿ ಅಪ್ಪಯ್ಯ ಕರೆ ನೀಡಿದರು.
ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ಕೂಟವು ಕಳೆದ 7 ವರ್ಷಗಳಿಂದ ಕೊಡವ ಸಂಸ್ಕೃತಿಗೆ ಸಂಬಂಧಿಸಿದ ಆಟ್‌ಪಾಟ್ ಸೇರಿದಂತೆ ಹಲವು ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಆ ಮೂಲಕ ಸಂಸ್ಕೃತಿ ಬೆಳೆವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ತಾವಳಗೇರಿ ಮೂಂದ್‌ನಾಡ್ ಟಿ.ಶೆಟ್ಟಿಗೇರಿ ಕೊಡವ ಸಮಾಜ ಅಧ್ಯಕ್ಷ ಕೊಟ್ರಮಾಡ ಅರುಣ ಅಪ್ಪಣ್ಣ, ವಿರಾಜಪೇಟೆ ಶಿಕ್ಷಣ ಸಂಯೋಜಕ ಪೋಯಂಗಡ ಆರ್. ಅಯ್ಯಪ್ಪ, ಕೊಡಗು ಜಿಲ್ಲಾ ಐರಿ ಕೊಡವ ಸಮಾಜ ಅಧ್ಯಕ್ಷ ಮೇಲತಂಡ ರಮೇಶ್, ಕೊಡಗು ಜಿಲ್ಲಾ ಕೊಯವ ಸಮಾಜ ಅಧ್ಯಕ್ಷ ಚಿಲ್ಲಂಡ ದಾದು ಮಾದಪ್ಪ, ಕಾರ್ಯಕ್ರಮ ಸಂಚಾಲಕ ಪಡಿಞರಂಡ ಪ್ರಭುಕುಮಾರ್, ರೂಟ್ಸ್ ವಿದ್ಯಾಸಂಸ್ಥೆ ಶಿಕ್ಷಕಿ ನಿರ್ಮಲಾ ಹರೀಶ್ ಇದ್ದರು.
ಬೊಳಕಾಟ್, ಉಮ್ಮತಾಟ್, ಕೋಲಾಟ್, ಉರ್‌ಟಿಕೊಟ್ಟ್ ಆಟ್, ಸಂಬಂಧ ಅಡ್‌ಕ್‌ವ, ಬಾಳೋಪಾಟ್, ಕೊಡವಪಾಟ್, ವಾಲಗತಾಟ್,ಪರೆಕಳಿ, ಕೊಡವ ನಾಟಕ, ಕೊಡವ ಕವಿಗೋಷ್ಠಿ, ಕೊಡವ ವಿಚಾರ ಗೋಷ್ಠಿ ಸ್ಪರ್ಧೆ ನಡೆಯಿತು.