ವಿರಾಜಪೇಟೆ ರಸ್ತೆ ವಿಸ್ತರಣೆ ಮಾಡಿ

ವಿರಾಜಪೇಟೆ: ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಪಟ್ಟಣದ ಮಾರಿಗುಡಿಯಿಂದ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು.
ಸಮಿತಿ ಸಂಚಾಲಕ ಪಟ್ರಪಂಡ ರಘು ನಾಣಯ್ಯ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ವಾಸಿಸುವ ಜನರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದರಿಂದ ದಿನದಿಂದ ದಿನಕ್ಕೆ ವಿಸ್ತಾರ ಹೆಚ್ಚಾಗುತ್ತಿದೆ. ಹೊರ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಬರುತ್ತಿವೆ. 1964ರಲ್ಲಿ ಅಂತಾರಾಜ್ಯ ಹೆದ್ದಾರಿ ಎಂದು ಗುರುತಿಸಲಾಗಿದೆ. ಕೇರಳದ ಮಟ್ಟನೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ರಸ್ತೆ ವಿಸ್ತರಣೆ ಅಗತ್ಯ ಎಂದು ಪ್ರತಿಪಾದಿಸಿದರು.
ರಸ್ತೆ ವಿಸ್ತರಣೆ ಕುರಿತು ಕಳೆದ ವಾರ ಶಾಸಕ ಕೆ.ಜಿ ಬೋಪಯ್ಯ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಸರ್ಕಾರದ ನಿಯಮದ ಪ್ರಕಾರ ರಸ್ತೆಯ ಮಧ್ಯಭಾಗದಿಂದ 40*40 ಅಡಿ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆದು 30*30 ಅಡಿ ವಿಸ್ತರಣೆಗೆ ಸಮ್ಮತ್ತಿಸಿತ್ತು. ಇದೀಗ ಕೆಲವು ಪಟ್ಟಭದ್ರ ಹಿತಾಸಕ್ತಿ ಹೊಂದಿದ ವ್ಯಕ್ತಿಗಳು ಪುನಃ ಸಭೆ ಸೇರಿ ವಿಸ್ತರಣೆ ನಡೆಸದಂತೆ ಹಾಗೂ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಮಾತನಾಡಿ,ರಸ್ತೆ ಅಭಿವೃದ್ಧಿ ವಿರೋಧಿ ಸಮಿತಿ ಬೆಟ್ಟ ಪ್ರದೇಶಗಳನ್ನು ಮುಂದಿಟ್ಟುಕೊಂಡು ವಿಸ್ತರಣೆಗೆ ಅಡ್ಡಗಾಲು ಹಾಕುತ್ತಿದೆ. ಬೆಟ್ಟದ ಬುಡದಲ್ಲೇ ರೆಸಾರ್ಟ್, ಗಣಿಗಾರಿಕೆ ನಡೆಯುತ್ತಿದ್ದರೂ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. 6 ವರ್ಷದ ಹಿಂದೆ ಗೋಣಿಕೊಪ್ಪ ರಸ್ತೆ ವಿಸ್ತರಣೆ ಮಾಡಬೇಕಾದರೆ ಯಾವುದೇ ವಿರೋಧಿ ಸಮಿತಿಗಳಿರಲಿಲ್ಲ. ವಿಸ್ತರಣೆ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲು ಪ್ರತಿ ವರ್ತಕರು ಹಾಗೂ ಕಟ್ಟಡ ಮಾಲೀಕರಿಂದ ಹಣ ವಸೂಲಿ ದಂಧೆಗೆ ಇಳಿದಿದ್ದಾರೆ ಎಂದು ಆರೋಪಿಸಿದರು.
ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಪುರಂದರ ಮಾತನಾಡಿ, ರಸ್ತೆ ವಿಸ್ತರಣೆಗೆ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿದ್ದು, 66 ಅಡಿ ವಿಸ್ತರಣೆಗೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಅನುಮೋದನೆ ಕೋರಲಾಗಿದೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಹೇಳಿದರು.
ಕಾನೂನನ್ನು ಜಾರಿಗೊಳಿಸುವಂತೆ ಶಾಸಕ ಕೆ.ಜಿ ಬೋಪಯ್ಯ ಅವರಿಗೂ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಹೇಶ್ ಗಣಪತಿ, ಭವ್ಯ ಚಿಟ್ಟಿಯಣ್ಣ, ಕೊಡವ ಸಮಾಜದ ಅಧ್ಯಕ್ಷ ಚಾಂಚಿರ ನಾಣಯ್ಯ, ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಂಜಪ್ಪ, ಆಟೋ ಚಾಲಕ, ಮಾಲೀಕರ ಸಂಘದ ಅಧ್ಯಕ್ಷ ಶಶಿಧರನ್, ಜಯ ಕರ್ನಾಟಕ ಸಂಘದ ತಾಲೂಕು ಅಧ್ಯಕ್ಷ ಅನಿಲ್ ಅಯ್ಯಪ್ಪ, ಕರ್ನಾಟಕ ಸಂಘದ ಅಧ್ಯಕ್ಷ ಬೆಲ್ಲು ಬೋಪಯ್ಯ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *