ಕೊಡಗಿನ ಮಹಾ ಮಳೆಯ ಪ್ರವಾಹಕ್ಕೆ ಕೊಚ್ಚಿಹೋಗುತ್ತಿದೆ ಜೀವ, ಜೀವನ

ಕೊಡಗು: ತನ್ನ ವನಸಿರಿ, ಆಹ್ಲಾದಕರ ವಾತಾವರಣದಿಂದ ಪ್ರವಾಸಿಗರನ್ನು ಸದಾ ತನ್ನತ್ತ ಕೈ ಬಿಸಿ ಕರೆಯುವ ಕರ್ನಾಟಕದ ಸ್ಕಾಟ್​ಲೆಂಡ್​…ಅಂದರೆ ಕೊಡಗು ಸದ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುವುದಿರಲಿ ಮಹಾ ಮಳೆಗೆ ಜರ್ಜರಿತಗೊಂಡು, ತನ್ನೊಡಲಲ್ಲಿರುವ ಜನರನ್ನೇ ವರುಣನಿಗೆ ಪಣವಿಟ್ಟು ನಿಸ್ಸಹಾಯಕವಾಕಗೊಂಡಿದೆ.

ಈ ಬಾರಿಯ ಮುಂಗಾರು ಕೊಡಗಿನಲ್ಲಿ ಆರಂಭದಿಂದಲೂ ಅಬ್ಬರಿಸುತ್ತಲೇ ಇತ್ತು. ಆದರೆ, ಇದ್ದಕ್ಕಿದ್ದಂತೆ ಈ ಮಟ್ಟಕ್ಕೆ ರಚ್ಚೆ ಹಿಡಿದು, ಬಿಟ್ಟೂ ಬಿಡದಂತೆ ಸುರಿಯುವ ಸಣ್ಣ ಮುನ್ಸೂಚನೆಯನ್ನೂ ಯಾರೂ ಗ್ರಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಕೊಡಗಿಗೆ ಹೊಂದಿಕೊಂಡೇ ಇರುವ ಕೇರಳದಲ್ಲಿ ಅದಾಗಲೇ ವರುಣ ತಾಂಡವವಾಡಿದ್ದ. ಅದಾಗ್ಯೂ ಕೊಡಗಿನಲ್ಲಿ ಈ ಪ್ರಮಾಣದ ಮಳೆ ಸುರಿಯುವ ಸಾಧ್ಯತೆಯನ್ನು ಯಾರೂ ಊಹಿಸಿಯೂ ಇರಲಿಲ್ಲ. ಒಂದು ವಾರದಿಂದ ಧೋ ಎಂದು ಸುರಿಯುತ್ತಿರುವ ಮಳೆ ಈಗಾಗಲೇ ಹಲವಾರು ಜೀವಗಳನ್ನು ಕಸಿದಿದೆ. ಹಲವು ಮನೆಗಳನ್ನು ಒಡೆದಿದೆ, ಹಲವರನ್ನು ಕಣ್ಮರೆ ಮಾಡಿದೆ. ಹೀಗಿರುವ ಕೊಡಗು ಈಗ ಅಕ್ಷರಶಃ ಪ್ರವಾಹ ಪೀಡಿತ.

ವಿಡಿಯೋ ನೋಡಿ 

ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿದ್ದ ರೌದ್ರ ಮಳೆ ಶುಕ್ರವಾರ ಸ್ವಲ್ಪ ಕಡಿಮೆಯಾಯಿತು. ಆದರೆ, ಶನಿವಾರ ಮತ್ತೆ ತನ್ನ ಅಬ್ಬರ ಮುಂದುವರಿಸಿದೆ. ಹೀಗಾಗಿ ಜಿಲ್ಲೆಗೆ ಮುತ್ತಿಗೆ ಹಾಕಿದ ಪ್ರವಾಹ ಇನ್ನೂ ನಿಂತಿಲ್ಲ. ಮಳೆ ತಂದಿಟ್ಟ ಅವಾಂತರಕ್ಕೆ ಕೊಡಗಿನಲ್ಲಿ ಈ ವರೆಗೆ 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಲವರು ಕಣ್ಮರೆಯಾಗಿದ್ದಾರೆ. ನಾಪತ್ತೆಯಾದವರ ದೇಹವೂ ಸಿಕ್ಕಿಲ್ಲ. ಮಾಹಿತಿಯೂ ಲಭ್ಯವಾಗಿಲ್ಲ. ಹಲವು ಮನೆಗಳು ಕುಸಿದು ಬಿದ್ದಿವೆ. ಗಾಯದ ಮೇಲೆ ಬರೆ ಎಳೆದರು ಎಂಬಂತೆ, ಜೋರು ಮಳೆಯಿಂದಾಗಿ ವಿದ್ಯುತ್​ ಕಂಬಗಳು ನೆಲಕ್ಕೊರಗಿ, ಜಿಲ್ಲೆಯಲ್ಲಿ ವಿದ್ಯುತ್​ ಕಡಿತವಾಗಿದೆ. ಹೀಗಾಗಿ ಕೊಡಗಿಗೆ ಭಾಗಶಃ ಕತ್ತಲೆ ಕವಿದಿದೆ. ಮೊಬೈಲ್​ ರೀಚಾರ್ಜ್​ ಕೂಡ ಆಗದೇ ಸಂಪರ್ಕ ಕಡಿತವಾಗುತ್ತಿದೆ. ಗುಡ್ಡ ಕುಸಿತ ಪ್ರಕರಣಗಳು ಸಾಮಾನ್ಯ ಎಂಬಂತಾಗಿದೆ. ಕುಸಿದ ಒಂದು ಗುಡ್ಡವನ್ನು ತೆರವು ಮಾಡುತ್ತಿರುವಾಗಲೇ ಮತ್ತೆಲ್ಲೋ ಮತ್ತೊಂದು ಗುಡ್ಡ ಜಾರಿಕೊಂಡು ಬೀಳುತ್ತಿದೆ. ಗುರುವಾರ ಕೊಡಗು – ಮಂಗಳೂರು ಮಾರ್ಗದಲ್ಲಿ ಗುಡ್ಡ ಕುಸಿದು ಸಂಚಾರವೇ ಸ್ತಬ್ಧವಾಗಿತ್ತು. ಶುಕ್ರವಾರ ರಾತ್ರಿ ಜೋಡುಪಾಲ ಎಂಬಲ್ಲಿ ಗುಡ್ಡವೊಂದು ಕುಸಿದಿದೆ.

ಕಲ್ಲೂರು ಎಂಬ ಹಳ್ಳಿಯಲ್ಲಿ ಶುಕ್ರವಾರ ದಿಢೀರ್​ ಪ್ರವಾಹ ಉಂಟಾಗಿ ಜನವಸತಿ ಪ್ರದೇಶವೇ ಕೊಚ್ಚಿ ಹೋಗಿದೆ. ಇಲ್ಲಿ ಉಂಟಾದ ಜೀವ ಹಾನಿಯ ಬಗ್ಗೆ ಈ ವರೆಗೆ ಮಾಹಿತಿ ಸಿಕ್ಕಿಲ್ಲ.

ಕೊಡಗಿನಲ್ಲಿ ಉಂಟಾದ ಮಳೆ ಅವಾಂತರ ಪರಿಶೀಲಿಸಲು ರಾಜ್ಯದ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಇಂದು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಮಧ್ಯಾಹ್ನ 2.10 ಗಂಟೆಗೆ ಅವರು ಕೊಡಗಿಗೆ ಆಗಮಿಸುತ್ತಿದ್ದಾರೆ.

ಇನ್ನು ಪ್ರವಾಹ ಪೀಡಿತ ಕೊಡಗಿನಲ್ಲಿ ಕೈಗೊಳ್ಳಬೇಕಾದ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಹೆಚ್ಚುವರಿ ಸೇನಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಡಿದ ಮನವಿಗೆ ಸ್ಪಂದಿಸಿದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಗತ್ಯ ಸವಲತ್ತು ಒದಗಿಸಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಚಿವರನ್ನು ಅಭಿನಂದಿಸಿದ್ದಾರೆ. ಜತೆಗೆ, ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸಲು, ವೈಮಾನಿಕ ಸಮೀಕ್ಷೆ ನಡೆಸಲು ವಾಯುಪಡೆಯ ಹೆಲಿಕಾಪ್ಟರ್ ಒಡಗಿಸುವಂತೆಯೂ ಅವರು ಮನವಿ ಮಾಡಿದ್ದಾರೆ.

ಸುಳ್ಯದಲ್ಲಿ 300 ಮಂದಿ ನಿರಾಶ್ರಿತ

ಸುಳ್ಯದ ಜೋಡುಪಾಲ ಗುಡ್ಡ ಕುಸಿತದಿಂದಾಗಿ 300ಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ಅವರಿಗೆಲ್ಲ ಆರಂತೋಡು ತೆಕ್ಕಿಲ ಸಮುದಾಯ ಭವನದಲ್ಲಿ ಆಶ್ರಯ ಒದಗಿಸಲಾಗಿದೆ. ಗುಡ್ಡ ಕುಸಿತವುಂಟಾದ ಪ್ರದೇಶಗಳು ಮತ್ತು ಗಂಜಿಕೇಂದ್ರಗಳಿಗೆ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಎಲ್ಲರ ಯೋಗ ಕ್ಷೇಮ ವಿಚಾರಿಸಿ, ಧೈರ್ಯ ತುಂಬಿದ್ದಾರೆ. ಅಲ್ಲದೆ, ನಿರಾಶ್ರಿತ, ಸಾವಿಗೀಡಾದ ಕುಟುಂಬಕ್ಕೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.

ಕೊಡಗಿನ ಮಳೆಗೆ ಮೈಸೂರಿನಲ್ಲೂ ಹಾನಿ

ಕೊಡಗಿನಲ್ಲಿ ಉಂಟಾಗಿರುವ ಮಹಾ ಮಳೆ ಪಕ್ಕದ ಮೈಸೂರನ್ನೂ ಬಾಧಿಸುತ್ತಿದೆ. ಕೊಡಗಿನ ಮಳೆಗೆ ಕಾವೇರಿ, ಕಪಿಲಾ ನದಿಗಳು ಉಕ್ಕಿ ಹಿರಿಯುತ್ತಿವೆ. ಹೀಗಾಗಿ ತಿ.ನರಸೀಪುರ ಬಳಿಯ ಹೆಮ್ಮಿಗೆ ಗ್ರಾಮದ ಬಳಿ ಸೇತುವೆ ಮುಳುಗಡೆಗೊಂಡಿದೆ. ಹೀಗಾಗಿ ತಲಕಾಡು-ತಿ.ನರಸೀಪುರ‌ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ.

ಕಬಿನಿ ಜಲಾಶಯದಿಂದ ೮೦ ಸಾವಿರ ಕ್ಯೂಸೆಕ್ ನೀರನ್ನು ನಿತ್ಯ ಹೊರಬಿಡುತ್ತಿರುವುದರಿಂದ ನಂಜನಗೂಡಿನ ಮಲ್ಲನಮೂಲೆ ಮಠದ ಬಳಿ ಹೆದ್ದಾರಿ ಮೇಲೆ ನೀರು ಹರಿಯುತ್ತಿದೆ. ಅಲ್ಲಿನ ಬಸವೇಶ್ವರ ದೇವಾಲಯವೂ ಜಲಾವೃತಗೊಂಡಿದೆ.

ಕೊಡಗಿನಲ್ಲಿ ಮಳೆಯಿಂದಾದ ಹಾನಿ ದೃಶ್ಯಗಳು