ಕೊಡಗು ಜಿಲ್ಲೆಯಾದ್ಯಂತ ರೆಡ್​ ಅಲರ್ಟ್​ ಘೋಷಣೆ: ಭಾರಿ ಮಳೆಯ ಮುನ್ಸೂಚನೆಗೆ ಕ್ರಮ

ಕೊಡಗು: ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಜುಲೈ 23ರ ವರೆಗೆ ಜಿಲ್ಲಾಡಳಿತ ಶುಕ್ರವಾರ ರೆಡ್​ ಅಲರ್ಟ್​ ಘೋಷಣೆ ಮಾಡಿದೆ.

ಕೊಡಗು ಭಾಗದಲ್ಲಿ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜು.೨೩ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜು.೨೦ರಿಂದ ೨೩ರವರೆಗೆ ಸುಮಾರು 204 ಮಿ.ಮೀ. ಗಿಂತ ಹೆಚ್ಚಿನ ಮಳೆಯಾಗುವ ಸಂಭವ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರೆಡ್​ ಅಲರ್ಟ್​ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಯಾವುದೇ ತುರ್ತು ಸೇವೆಗೆ 08272-221077 ಹಾಗೂ 8550001077 ಸಂಖ್ಯೆಗೆ ಕರೆ ಮಾಡಲು ಜಿಲ್ಲಾಡಳಿತ ಕೋರಿದೆ. ಈ ಹಿಂದೆ ಜು.22ರ ವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು.

ಕಳೆದ ವರ್ಷ ಕೇರಳ ಹಾಗೂ ಕೊಡಗಿನಲ್ಲಿ ಸುರಿದ ಭಾರಿ ಮಳೆಯಿಂದ ಸಾಕಷ್ಟು ಅನಾಹುತ ಸಂಭವಿಸಿತ್ತು. ಕೊಡಗು ಜಿಲ್ಲೆಯಂತೂ ಇಂದೆಂದೂ ಕಾಣದಂತಹ ಪ್ರಹಾಹಕ್ಕೆ ತುತ್ತಾಗಿತ್ತು. ಭೀಕರ ಮಳೆಯಿಂದ ಸೃಷ್ಟಿಯಾದ ಪ್ರವಾಹಕ್ಕೆ ಅನೇಕ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಅನೇಕ ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಜಿಲ್ಲೆಯ ಸಾಕಷ್ಟು ಭಾಗದಲ್ಲಿ ಭೂಕುಸಿತ ಉಂಟಾಗಿ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ಪ್ರವಾಹಕ್ಕೆ ನಲುಗಿದ ಅನೇಕರಿಗಾಗಿ ಸರ್ಕಾರ ನಿರಾಶ್ರಿತರ ಶಿಬಿರವನ್ನು ತೆರೆದಿತ್ತು. ಸಂಕಷ್ಟದಲ್ಲಿ ಸಿಲುಕಿದ್ದ ಕೊಡಗು ಜನತೆಯ ಕಣ್ಣೀರನ್ನು ಒರೆಸಲು ಇಡೀ ರಾಜ್ಯವೇ ಮುಂದೆ ಬಂದು ತಮ್ಮ ಕೈಲಾದಷ್ಟು ನೆರವು ನೀಡಿತ್ತು. ಇದೀಗ ಮತ್ತೊಮ್ಮೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುವುದು ಕೊಡಗು ಜನತೆಯನ್ನು ಚಿಂತೆಗೀಡು ಮಾಡಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *