ಮಳೆ ಭೀತಿ, 6 ಜಿಲ್ಲೆಗಳಲ್ಲಿ ರೆಡ್​ಅಲರ್ಟ್: 23ರವರೆಗೆ ಕಟ್ಟೆಚ್ಚರಕ್ಕೆ ಸೂಚನೆ, ದ.ಕನ್ನಡದ ಶಾಲೆ ಕಾಲೇಜು ರಜೆ

ಬೆಂಗಳೂರು: ಕೇರಳದಲ್ಲಿ ಭರ್ಜರಿ ಮಳೆಯಾಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲೂ ಜು.23ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಕಂಡುಬಂದಿದೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜು.23ರವರೆಗೆ ಕನಿಷ್ಠ 20 ಸೆಂ.ಮೀ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶಾಲೆ, ಕಾಲೇಜು ರಜೆ: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಶನಿವಾರ ಜಿಲ್ಲೆಯ ಎಲ್ಲ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜು.20ರಿಂದ 22ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿ ಸಲಾಗಿದ್ದು, ಜಿಲ್ಲಾ, ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿರಲು ಸೂಚಿಸಲಾಗಿದೆ. ಉಡುಪಿ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ. ಮಳೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ವೃತ್ತಿಪರ ಕಾಲೇಜು ಸಹಿತ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಜು.20ರಂದು ಜಿಲ್ಲಾಡಳಿತ ರಜೆ ಘೊಷಿಸಿದೆ.

ಉತ್ತರ ಕನ್ನಡದ ಹೊನ್ನಾವರ ಕೆಳಗಿನಪಾಳ್ಯ, ಭಟ್ಕಳದಲ್ಲಿ ಹಲವು ಮನೆಗಳಿಗೆ, ಕುಮಟಾದಲ್ಲಿ ಗದ್ದೆ ಹಾಗೂ ತೋಟಗಳಿಗೆ ನೀರು ನುಗ್ಗಿದೆ. ಜಿಲ್ಲೆಯಲ್ಲಿ ಸರಾಸರಿ 19.5 ಮಿ.ಮೀ. ಮಳೆಯಾಗಿದೆ. ಜು.22ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇರಳದ ಎರ್ನಾಕುಳಂ ಜಿಲ್ಲೆಯ ವಿಯಿಞದಲ್ಲಿ ಮೀನುಗಾರಿಕಾ ದೋಣಿ ನೀರುಪಾಲಾಗಿದ್ದು, ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ.

ಉತ್ತರದಲ್ಲೂ ಚುರುಕು

ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಬೆಳಗಾವಿ, ವಿಜಯಪುರ, ಗದಗ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಜು.21ರವರೆಗೆ ಭಾರಿ ಮಳೆ ನಿರೀಕ್ಷಿಸಲಾಗಿದೆ.

ನಾಲೆಗೆ ಹರಿದ ಕೆಆರೆಸ್ ನೀರು

ಕೆಆರ್​ಎಸ್ ಅಣೆಕಟ್ಟೆಯಿಂದ ವಿ.ನಾಲೆ ಸೇರಿ ನದಿಪಾತ್ರದ ನಾಲೆಗಳಿಗೂ ಶುಕ್ರವಾರ ಮಧ್ಯಾಹ್ನದಿಂದ ನೀರು ಬಿಡಲು ಆರಂಭಿಸಿದ್ದು, ಹೊರ ಹರಿವು 8064 ಕ್ಯೂಸೆಕ್ ಆಗಿದೆ. ವಿ.ನಾಲೆ ಹೊರತುಪಡಿಸಿ ಮಧ್ಯಾಹ್ನ 12.15ಕ್ಕೆ 2 ಸಾವಿರ ಕ್ಯೂಸೆಕ್ ನೀರನ್ನು ಪ್ಲಸ್ 80 ಅಡಿ ಮಟ್ಟದ 2 ಗೇಟ್​ಗಳ ಮೂಲಕ ಬಿಡಲಾಯಿತು. ಬಳಿಕ ಮತ್ತೆ 3 ಗೇಟ್​ಗಳ ಮೂಲಕ ನೀರು ಹರಿಯಿತು. ಕೆಲವೇ ಹೊತ್ತಿನಲ್ಲಿ ಮೂರು ಗೇಟ್​ಗಳು ಬಂದ್ ಆದವು.

ಆಲಮಟ್ಟಿ ಜಲಾಶಯ ಭರ್ತಿಗೆ ಕ್ಷಣಗಣನೆ

ಮಹಾರಾಷ್ಟ್ರದ ಮಹಾಬಳೇಶ್ವರ, ಸಾಂಗ್ಲಿ ಮತ್ತು ಸಾತಾರ ಜಿಲ್ಲೆಗಳು ಸೇರಿ ಕೃಷ್ಣಾ ಜಲಾಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿರುವ ಪರಿಣಾಮ ಆಲಮಟ್ಟಿ ಜಲಾಶಯ ಭರ್ತಿ ಆಗುವ ಹಂತದಲ್ಲಿದ್ದು, 519.60 ಮೀ. ಎತ್ತರದ ಜಲಾಶಯದಲ್ಲಿ 518.68ಮೀ. ಸಂಗ್ರಹವಾಗಿದೆ.

ತಮಿಳುನಾಡಿಗೆ ಹರಿದ ಕಬಿನಿ

ಮೈಸೂರು: ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ತೀವ್ರ ಬರಗಾಲ ಎದು ರಾಗಿರುವ ಪರಿಸ್ಥಿತಿಯಲ್ಲೇ ಕಬಿನಿ ಜಲಾಶಯದಿಂದ ತಮಿಳುನಾಡಿಗೆ 2,500 ಕ್ಯೂಸೆಕ್ ನೀರು ಹರಿಯಬಿಡಲಾಗಿದೆ. ಜಲಾಶಯ ತುಂಬಲು ಇನ್ನೂ 15ಅಡಿ ಬಾಕಿ ಇರುವಾಗಲೇ ನೀರು ತಮಿಳುನಾಡು ಪಾಲಾಗುತ್ತಿದೆ.

ಕೇರಳದ ವೈನಾಡು ಪ್ರದೇಶದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಬಿನಿ ಅಣೆಕಟ್ಟು ಜುಲೈ ಮೂರನೇ ವಾರ ಮುಗಿಯುತ್ತ ಬಂದರೂ ಭರ್ತಿಯಾಗಿಲ್ಲ. ಆದರೂ, ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಜಲಾಶಯದಿಂದ 500 ಕ್ಯೂಸೆಕ್ ಇದ್ದ ಹೊರ ಹರಿವಿನ ಪ್ರಮಾಣವನ್ನು ಸಂಜೆ ಆಗುತ್ತಿದ್ದಂತೆ 2,500 ಕ್ಯೂಸೆಕ್​ಗೆ ಏರಿಕೆ ಮಾಡಿದ್ದಾರೆ. ಇದು ಕಬಿನಿ ಕಣಿವೆಯ ರೈತರ ಕಣ್ಣು ಕೆಂಪಾಗಿಸಿದೆ.

2,284 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ ಸಂಜೆ 6 ಗಂಟೆ ವೇಳೆಗೆ 2269.59 ಅಡಿ ನೀರಿನ ಸಂಗ್ರಹವಿತ್ತು. 19.52 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 11.48 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯಕ್ಕೆ 4,751 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ನೆರೆಗೆ ಮೂರು ರಾಜ್ಯಗಳು ತತ್ತರ

ನವದೆಹಲಿ: ಬಿಹಾರ, ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ಪ್ರವಾಹ ಉಲ್ಬಣಿಸಿದ್ದು ಒಟ್ಟು 123 ಜನ ಸಾವನ್ನಪ್ಪಿದ್ದಾರೆ. ಬಿಹಾರದ 12 ಜಿಲ್ಲೆಯ 47 ಲಕ್ಷ ಜನರು ಪ್ರವಾಹಕ್ಕೆ ತುತ್ತಾಗಿದ್ದು, 78 ಜನರು ಮೃತಪಟ್ಟಿದ್ದಾರೆ. ಅಸ್ಸಾಂನ 29 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಈವೆರಗೆ 54 ಲಕ್ಷ ಜನರು ನಿರಾಶ್ರಿತರಾಗಿದ್ದು, 36 ಜನರು ಸಾವನ್ನಪ್ಪಿದ್ದಾರೆ. ಬ್ರಹ್ಮಪುತ್ರ ಹಾಗೂ ರಾಜ್ಯದ ಇತರ ನದಿಗಳು ವಾರದಿಂದ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸಾವಿರಾರು ಗ್ರಾಮಗಳು ಜಲಾವೃತವಾಗಿವೆ. ಮಾನಸ ಮತ್ತು ಪೊಬಿಟೋರಾ ವನ್ಯಜೀವಿ ಅಭಯಾರಣ್ಯದ ಹೆಚ್ಚಿನ ಭಾಗ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದೆ. ಇದರಿಂದಾಗಿ ಸುಮಾರು 25 ಲಕ್ಷ ವಿವಿಧ ವನ್ಯಜೀವಿಗಳು ಸಂಕಷ್ಟಕ್ಕೆ ಸಿಲುಕಿವೆ. ಕಾಜಿರಂಗ ರಾಷ್ಟ್ರೀಯ ಅಭಯಾರಣ್ಯದ ಶೇ. 50 ಪ್ರಾಣಿಗಳು ಮೃತಪಟ್ಟಿವೆ. ಇವುಗಳಲ್ಲಿ ಬಹುತೇಕ ಪ್ರಾಣಿಗಳು ಜೀವ ಉಳಿಸಿಕೊಳ್ಳಲು ಅರಣ್ಯದಿಂದ ಹೊರ ಹೋಗುವಾಗ ಹೈವೆಗಳಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿವೆ. ಸರ್ಕಾರ ಸಂತ್ರಸ್ತರಿಗಾಗಿ 1080 ನಿರಾಶ್ರಿತರ ಕೇಂದ್ರಗಳು ಹಾಗೂ 689 ಪರಿಹಾರ ಸಾಮಗ್ರಿ ವಿತರಣಾ ಕೇಂದ್ರಗಳನ್ನು ತೆರೆದಿದೆ. ಮೇಘಾಲಯದಲ್ಲಿ 8 ಜನರು ಮೃತಪಟ್ಟಿದ್ದಾರೆ.

ಭೂಕಂಪ

ಅಸ್ಸಾಂ ಹಾಗೂ ಅರುಣಾಚಲ ಪ್ರದೇಶದಲ್ಲಿ ಶುಕ್ರವಾರ 5.5 ತೀವ್ರತೆಯ ಭೂಕಂಪ ಸಂಭವಿಸಿದೆ. ಅರುಣಾಚಲ ಪ್ರದೇಶದ ಬೊಮ್​ಲಾದಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿದ್ದು, ರಕ್ಷಣಾ ತಂಡಗಳಿಗೆ ಮತ್ತಷ್ಟು ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *