ಸನ್ಮಾರ್ಗದಿಂದ ಸುಖಿ ಸಮಾಜ ಸಾಧ್ಯ

ಮೂರ್ನಾಡು: ಇಲ್ಲಿನ ಪಾಂಡಾಣೆ ಮೈದಾನದಲ್ಲಿ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದಿಂದ 26ನೇ ವರ್ಷದ ಆಯುಧ ಪೂಜಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಆಯುಧ ಪೂಜೆಯನ್ನು ಜಾತಿ, ಧರ್ಮದ ಭೇದವಿಲ್ಲದೆ ಸಾರ್ವಜನಿಕವಾಗಿ ನಡೆಯುವ ಆಚರಣೆಯು ಸಂಘದಲ್ಲಿನ ಸಾಮರಸ್ಯವನ್ನು ಎತ್ತಿ ತೋರಿಸುತ್ತದೆ ಎಂದು ತಿಳಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಕೊಡಗಿನ ಜನರು ಬೌದ್ಧಿಕ ದಿವಾಳಿಯತ್ತ ಸಾಗುತ್ತಿದ್ದಾರೆ. ಜಿಲ್ಲೆಯಲ್ಲಿ ವಿವಾಹ ವಿಚ್ಛೇದನಗಳು ಸಾಮಾನ್ಯವಾಗಿವೆ. ಇದಕ್ಕೆ ಪಾಲಕರು ಪ್ರೋತ್ಸಾಹ ನೀಡಬಾರದು. ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ಸುಖಿ ಸಮಾಜವಾಗಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.
ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪೆಮ್ಮಂಡ ಪವಿತ್ರ ಕುಂಞಪ್ಪ, ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಬಿ.ಆರ್. ಲಿಂಗಪ್ಪ, ಸರ್ವೇ ಅಧಿಕಾರಿ ಬಾನಂಗಡ ಅರುಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿರ್ದೇಶಕ ಗಿರೀಶ್ ಕಿಗ್ಗಾಲು, ಜ್ಞಾನ ಜ್ಯೋತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ. ಕುಂಞಿ ಅಬ್ದುಲ್ಲ, ಮೂರ್ನಾಡು ಗ್ರಾಮ ಲೆಕ್ಕಿಗರಾದ ಅಕ್ಷತಾ ಬಿ. ಶೆಟ್ಟಿ ಮಾತನಾಡಿದರು.
ವಿರಾಜಪೇಟೆಯ ಮುಳುಗು ತಜ್ಞ ಸಿದ್ದಲಿಂಗ ಅವರನ್ನು ಸನ್ಮಾನಿಸಲಾಯಿತು. ಆಯುಧ ಪೂಜೋತ್ಸವದ ಅಂಗವಾಗಿ ಎರಡು ಚಕ್ರ, ಮೂರು ಚಕ್ರ, ನಾಲ್ಕು ಚಕ್ರ ಮತ್ತು ಆರು ಚಕ್ರ ಅಲಂಕೃತ ವಾಹನಗಳು ಮತ್ತು ಅಲಂಕೃತ ಅಂಗಡಿಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಸಿದ ವಾಹನ ಮತ್ತು ಅಂಗಡಿಗಳಿಗೆ ನಗದು ಬಹುಮಾನವನ್ನು ವಿತರಿಸಲಾಯಿತು.
ಸಂಘದ ಗೌರವ ಅಧ್ಯಕ್ಷ ಎನ್.ಕೆ.ಕುಂಞಿರಾಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಬುಟ್ಟಂಡ ಪಿ. ಸುನೀಲ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಬಿ. ಕಲಾವತಿ ಪೂವಪ್ಪ, ಕರ್ನಾಟಕ ಸೆರೊ ಮಲಬಾರ್ ಕ್ಯಾಥೊಲಿಕ್ ಜಿಲ್ಲಾಧ್ಯಕ್ಷ ಎನ್.ಒ. ಮ್ಯಾಥ್ಯು, ಸುಗುಣಬಾರ್ ಮಾಲೀಕ ಅವರೆಮಾದಂಡ ಸುಗುಣ ಸುಬ್ಬಯ್ಯ, ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಗೌರವ ಅಧ್ಯಕ್ಷ ಎನ್.ಕೆ ಕುಂಞಿರಾಮ, ಅಡ್ಡಂಡ ಅನಿತಾ ಕಾರ್ಯಪ್ಪ, ಶಿಕ್ಷಕರಾದ ಚೆಟ್ಟಿಮಾಡ ಗೋಪಾಲ್, ಸಂಘದ ಕಾರ್ಯದರ್ಶಿ ಬಿ. ಅಶ್ವತ್ಥ್ ರೈ, ಉಪಾಧ್ಯಕ್ಷ ಸುಬ್ರಮಣಿ, ಖಜಾಂಚಿ ಎ.ಪಿ. ಲೋಕೇಶ್ ಹಾಗೂ ಸಹ ಕಾರ್ಯದರ್ಶಿ ಎನ್.ಎನ್. ಶರಣು ಹಾಜರಿದ್ದರು.
ಅಲಂಕೃತ ವಾಹನಗಳಿಗೆ ಪೂಜಾ ಕಾರ್ಯಕ್ರಮ ನಡೆಯಿತು. ನಂತರ ಅಂಬಾರಿ ಹೊತ್ತ ಆನೆ, ತೋರ ಗ್ರಾಮದಲ್ಲಿ ಭೂಕುಸಿತ, ಮಹಿಷಾಸುರನ ಮರ್ದನ, ಗಜಾಸುರನ ವಧೆ, ಕೈಲಾಸ ಪರ್ವತ, ಶಬರಿಮಲೆ, ಮದ್ಯಪಾನದಿಂದ ಆದ ಬೈಕ್ ಅಪಘಾತ, ಬಸ್‌ಗೆ ಸಿಲುಕಿ ಮೃತಪಟ್ಟ ಆನೆ ಹೀಗೆ ಹಲವು ಸ್ಥಬ್ಧಚಿತ್ರಗಳಿಂದ ಅಲಂಕೃತಗೊಂಡ ವಾಹನಗಳ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ಸಾಗಿತು.
ಕೇರಳದ ತಂದೋವನಂ ಡಿಜಿಟಲ್ ತಂಬೂಲ ಬ್ಯಾಂಡ್ ವಾದ್ಯಗೋಷ್ಠಿ ಮೆರವಣಿಗೆಗೆ ಸಾಥ್ ನೀಡಿತು. ಮೂರ್ನಾಡಿನ ಇಕ್ಕೆಲಗಳಲ್ಲಿ ನೆರೆದಿದ್ದ ಸಾರ್ವಜನಿಕರು ಮೆರವಣಿಗೆಯನ್ನು ವೀಕ್ಷಿಸಿದರು. ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಧ್ಯರಾತ್ರಿಯವರೆಗೆ ಕೂರ್ಗ್ ಮೆಲೋಡಿಯಸ್ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Leave a Reply

Your email address will not be published. Required fields are marked *