ಕೊಡಗಿನ ಜನತೆ ಜತೆ ಸರ್ಕಾರವಿದೆ ಯಾರೂ ಭಯ ಪಡುವ ಅಗತ್ಯವಿಲ್ಲ: ಸಿಎಂ

ಬೆಂಗಳೂರು: ಕೊಡಗಿನಲ್ಲಿ ದೊಡ್ಡಮಟ್ಟದ ಅನಾಹುತ ಉಂಟಾಗಿದೆ. ಸರ್ಕಾರ ತಕ್ಷಣವೇ ಸ್ಪಂದಿಸುವಲ್ಲಿ ಯಾವುದೇ ಲೊಪದೋಷವಾಗಿಲ್ಲ. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದೇನೆ. ಕೊಡಗಿನ ಜನತೆ ಜತೆ ಸರ್ಕಾರವಿದೆ, ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಭರವಸೆ ನೀಡಿದರು.

ಕೊಡಗು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಲವು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದೆ. ಸುಮಾರು 845 ಮನೆಗಳು ಪೂರ್ಣ ಹಾನಿಗೊಳಗಾಗಿದ್ದು, 773 ಭಾಗಶ: ಹಾನಿಯಾಗಿದೆ. 123 ಕಿ.ಮೀ. ರಸ್ತೆ, 58 ಸೇತುವೆ, 278 ಸರ್ಕಾರಿ ಕಟ್ಟಡ ಹಾಗೂ 3800 ವಿದ್ಯುತ್ ಕಂಬಗಳು ಹಾನಿಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಪ್ರತಿ ವರ್ಷ ಭೂ ಕುಸಿತವಾಗುತ್ತೆ. ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ತಜ್ಞರನ್ನು ಕರೆಸುವಂತೆ ಮುಖ್ಯಕಾರ್ಯದರ್ಶಿ ಅವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಕೊಡಗಿನಲ್ಲಿ ಈವರೆಗೆ 7 ಮಂದಿ ಮೃತಪಟ್ಟಿದ್ದು, ರಾಜ್ಯದಲ್ಲಿ ಏಪ್ರಿಲ್​​​ನಿಂದ ಈವರೆಗೆ 152 ಮಂದಿ ಸಾವಿಗೀಡಾಗಿದ್ದಾರೆ. ಕೊಡಗಿನ ಕೆಲ ಬಡಾವಣೆಗಳು ಜಲಾವೃತವಾಗಿದ್ದು, ನೀರು ಹೊರಹಾಕಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಈಗಾಗಲೇ ನೀರು ಹೊರಹಾಕುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ದಿನದ 24 ಗಂಟೆಯೂ ರಕ್ಷಣಾ ತಂಡ ಕೆಲಸ ಮಾಡುತ್ತಿದೆ. 1,720 ತಜ್ಞರ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಹಾರಂಗಿ ಡ್ಯಾಂ ಬಳಿ ವಾಯುಸೇನೆ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಪುನರ್ವಸತಿ ಕಾರ್ಯಕ್ಕೆ ಇಬ್ಬರು ಐಎಎಸ್​ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ನಾನೇ ಕೊಡಗಿಗೆ ಭೇಟಿ ನೀಡಿ, ಅಲ್ಲಿನ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. 100 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದೇನೆ. ಕೊಡಗಿನಲ್ಲಿ ಜಿಲ್ಲಾಧಿಕಾರಿ, ಎಸ್​ಪಿ ಹಾಗೂ ಉಸ್ತುವಾರಿ ಕಾರ್ಯದರ್ಶಿ ಕೂಡ ಮಹಿಳೆ ಆಗಿದ್ದಾರೆ. ಅವರು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಅಪಪ್ರಚಾರ ಕಾರ್ಯವನ್ನು ಮಾಧ್ಯಮದಲ್ಲಿ ಬಿತ್ತರಿಸದಂತೆ ಮನವಿ ಮಾಡಿದರು. (ದಿಗ್ವಿಜಯ ನ್ಯೂಸ್​)