ಶ್ರೀ ದಂಡಿನ ಮಾರಿಯಮ್ಮ ದೇವಸ್ಥಾನಕ್ಕೆ ಪ್ರಥಮ ಸ್ಥಾನ

ಮಡಿಕೇರಿ: ಮಡಿಕೇರಿ ಜನೋತ್ಸವದ ಶೋಭಾಯಾತ್ರೆಯಲ್ಲಿ ಶ್ರೀ ದಂಡಿನ ಮಾರಿಯಮ್ಮ ದೇವಸ್ಥಾನ ಪ್ರಥಮ ಸ್ಥಾನ ಪಡೆದರೆ, ಶ್ರೀ ಚೌಟಿಮಾರಿಯಮ್ಮ ದೇವಸ್ಥಾನ ದ್ವಿತೀಯ, ಕೋಟೆ ಗಣಪತಿ ದೇವಸ್ಥಾನ ತೃತೀಯ ಸ್ಥಾನ ಪಡೆದುಕೊಂಡಿತ್ತು.
ನಗರದ ಮುಖ್ಯ ಬೀದಿಗಳಲ್ಲಿ 10 ಮಂಟಪಗಳ ಮೆರವಣಿಗೆ ಹಾಗೂ ಪೌರಾಣಿಕ ಕಥಾ ಪ್ರಸಂಗ ಆಧಾರಿತ ಕಲಾಕೃತಿಗಳ ಶೋಭಾಯಾತ್ರೆ ಮಂಗಳವಾರ ರಾತ್ರಿಯಿಂದ ಬೆಳಗಿನ ಜಾವದ ವರೆಗೂ ಜರುಗಿತು. ಪ್ರತಿಯೊಂದು ದೇವಾಲಯ ಸಮಿತಿಗಳು 10 ಕ್ಕೂ ಹೆಚ್ಚಿನ ಕಲಾಕೃತಿಗಳಿಂದ ಪ್ರದರ್ಶನ ನೀಡಿ, ಜನರನ್ನು ತನ್ನತ್ತ ಸೆಳೆಯಿತು. ಉತ್ತಮ ಕಥೆ, ಅಕರ್ಷಣೆ ಹಾಗೂ ಇತ್ಯಾದಿ ಮಾನದಂಡಗಳನ್ನು ಪರಿಗಣನೆಗೆ ತೆಗೆದುಕೊಂಡು ನಗರ ದಸರಾ ಸಮಿತಿ ವತಿಯಿಂದ ಪ್ರತಿವರ್ಷ ಪ್ರಶಸ್ತಿ ಹಾಗೂ ಚಿನ್ನದ ನಾಣ್ಯ ವಿತರಿಸಲಾಗುತ್ತದೆ. ಅಂತೆಯೇ ಪ್ರಸಕ್ತ ವರ್ಷದ ಪ್ರಶಸ್ತಿಯನ್ನು ಕ್ರಮವಾಗಿ ಈ ಮೂರು ದೇವಾಲಯಗಳಿಗೆ ನೀಡಲಾಗಿದೆ.
ನರಸಿಂಹನಿಂದ ಹಿರಣ್ಯ ಕಶಿಪು ವಧೆ: ಉತ್ಸವದಲ್ಲಿ ಶ್ರೀ ದಂಡಿನ ಮಾರಿಯಮ್ಮ ದೇವಸ್ಥಾನ ವತಿಯಿಂದ ನರಸಿಂಹನಿಂದ ಹಿರಣ್ಯ ಕಶಿಪು ವಧೆ ಕಥಾ ಸಾರಾಂಶವನ್ನು ಪ್ರದರ್ಶನ ಮಾಡಲಾಯಿತು. ಸುಮಾರು 12 ರಿಂದ 15 ಲಕ್ಷ ರೂ.ವೆಚ್ಚದಲ್ಲಿ 150 ಸದಸ್ಯರು ರಚಿಸಿದ ಎಂಟು ಕಲಾಕೃತಿಗಳ ಮೂಲಕ ಕಥಾ ಸಾರಾಂಶ ಸಾಧರ ಪಡಿಸಲಾಯಿತು.
ಸುಬ್ರಹ್ಮಣ್ಯನಿಂದ ತಾರಕಾಸುರ ವಧೆ: ಕುಂದೂರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಸ್ಥಾನ ವತಿಯಿಂದ ‘ಸುಬ್ರಹ್ಮಣ್ಯನಿಂದ ತಾರಕಾಸುರ ವಧೆ’ ಕಥಾ ಸಾರಾಂಶವನ್ನು ಪ್ರದರ್ಶನಗೊಳಿಸಲಾಯಿತು. ಒಟ್ಟು 16 ಲಕ್ಷ ರೂ.ವೆಚ್ಚದಲ್ಲಿ ಕಲಾಕೃತಿಗಳನ್ನು ರಚಿಸಲಾಗಿತ್ತು. ಉತ್ಸವದ ಯಶಸ್ಸಿಗಾಗಿ 300 ಸದಸ್ಯರ ತಂಡ ಶ್ರಮಿಸಿದೆ.
ಶ್ರೀ ಮಯೂರೇಶ್ವರನಿಂದ ಶಿಖಂಡಿ ಪಕ್ಷಿಯು ಮಯೂರ ನಾದ’: ಶ್ರೀ ಕೋಟೆ ಮಹಾಗಣಪತಿ ದೇವಸ್ಥಾನ ವತಿಯಿಂದ ‘ಶ್ರೀ ಮಯೂರೇಶ್ವರನಿಂದ ಶಿಖಂಡಿ ಪಕ್ಷಿಯು ಮಯೂರ ನಾದ’ ಕಥಾ ಸಾರಾಂಶವನ್ನು ಪ್ರದರ್ಶನಗೊಳಿಸಿತು. ಕಥಾ ನಿರ್ವಹಣೆಯನ್ನು ಆರ್.ಬಿ.ರವಿ ವಹಿಸಿದ್ದರು. ಒಟ್ಟು 19.50 ಲಕ್ಷ ರೂ. ವೆಚ್ಚದಲ್ಲಿ ಒಟ್ಟು 23 ಕಲಾಕೃತಿಗಳನ್ನು ಬಳಸಿಕೊಳ್ಳಲಾಗಿತ್ತು. ಒಟ್ಟು 365 ಸದಸ್ಯರು ಶ್ರಮಿಸಿದ್ದರು.
ಪ್ರಥಮಸ್ಥಾನ 20 ಗ್ರಾಂ ಚಿನ್ನ: ನಗರ ದಸರಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಬುಧವಾರ ಆಯೋಜಿಸಿದ್ದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮೊದಲ ಸ್ಥಾನ ಪಡೆದ ದೇವಸ್ಥಾನ ಸಮಿತಿಗೆ 20 ಗ್ರಾಂ ಚಿನ್ನ, ದ್ವಿತೀಯ ಬಹುಮಾನ ಪಡೆದ ದೇವಸ್ಥಾನ ಸಮಿತಿಗೆ 16 ಗ್ರಾಂ ಹಾಗೂ ತೃತೀಯ ಬಹುಮಾನ ಪಡೆದ ದೇವಸ್ಥಾನ ಸಮಿತಿಗೆ 10 ಗ್ರಾಂ ಚಿನ್ನ ವಿತರಿಸಲಾಯಿತು.
ಹಾಗೂ ಉಳಿದ ಎಲ್ಲಾ ದೇವಸ್ಥಾನ ಸಮಿತಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ದಸರಾ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ, ಅಧ್ಯಕ್ಷ ರವಿ, ಪ್ರಧಾನ ಕಾರ್ಯದರ್ಶಿ ಜಗದೀಶ್, ಖಜಾಂಚಿ ಉಮೇಶ್ ಸುಬ್ರಮಣಿ ಹಾಗೂ ನಗರ ದಸರಾ ಸಮಿತಿಯ ಪದಾಧಿಕಾರಿಗಳು ಇದ್ದರು.
ಪಂಚಮುಖಿ ಆಂಜನೇಯ’: ದೇಚೂರು ಶ್ರೀ ರಾಮ ಮಂದಿರ ವತಿಯಿಂದ ಪಂಚಮುಖಿ ಅಂಜನೇಯ ಕಥಾ ಸಾರಾಂಶವನ್ನು ಪ್ರದರ್ಶನ ಮಾಡಲಾಯಿತು. ಸುಮಾರು 15.50 ಲಕ್ಷ ರೂ. ವೆಚ್ಚದಲ್ಲಿ 13 ಕಲಾಕೃತಿಗಳನ್ನು ಬಳಸಿಕೊಂಡು ಕಥಾ ಸಾರಾಂಶವನ್ನು ಪ್ರದರ್ಶನ ಮಾಡಲಾಯಿತು.
‘ಉಗ್ರ ನರಸಿಂಹನಿಂದ ಹಿರಣ್ಯ ಕಶಿಪುವಿನ ವಧೆ’: ಶ್ರೀ ಕಂಚಿ ಕಾಮಾಕ್ಷಿ ಬಾಲಕ ಮಂಡಳಿ ವತಿಯಿಂದ ಉಗ್ರ ನರಸಿಂಹನಿಂದ ಹಿರಣ್ಯ ಕಶಿಪುವಿನ ವಧೆ’ ಕಥಾ ಸಾರಾಂಶವನ್ನು ಪ್ರದರ್ಶನ ಮಾಡಲಾಯಿತು. ಒಟ್ಟು 15 ಲಕ್ಷ ರೂ. ವೆಚ್ಚದಲ್ಲಿ ಸುಮಾರು 22 ಕಲಾಕೃತಿಗಳನ್ನು ಬಳಸಿಕೊಳ್ಳಲಾಗಿತ್ತು. ಅದಕ್ಕಾಗಿ 300 ಸದಸ್ಯರು ಶ್ರಮಿಸಿದ್ದರು.
‘ಅರ್ಧನಾರೀಶ್ವರ ದರ್ಶನ’: ಪೇಟೆ ಶ್ರೀರಾಮ ಮಂದಿರ ವತಿಯಿಂದ ಒಟ್ಟು 4.50 ಲಕ್ಷ ರೂ. ವೆಚ್ಚದಲ್ಲಿ ‘ಅರ್ಧನಾರೀಶ್ವರ ದರ್ಶನ’ ಕಥಾ ಸಾರಾಂಶವನ್ನು ಪ್ರದರ್ಶನ ಮಾಡಲಾಯಿತು.
ತ್ರಿಪುರಾಸುರ ವಧೆ : ಶ್ರೀ ಕೊದಂಡರಾಮ ದೇವಾಲಯದ ಉತ್ಸವ ಸಮಿತಿ ವತಿಯಿಂದ ‘ತ್ರಿಪುರಾಸುರ ವಧೆ’ ಕಥಾ ಸಾರಾಂಶ ಪ್ರದರ್ಶನ ಮಾಡಲಾಯಿತು. ಒಟ್ಟು 12 ಲಕ್ಷ ರೂ. ವೆಚ್ಚದಲ್ಲಿ 21 ಕಲಾಕೃತಿಗಳನು ಬಳಸಿಕೊಳ್ಳಲಾಗಿತ್ತು. 360 ಸದಸ್ಯರು ಇದಕ್ಕಾಗಿ ಶ್ರಮಿಸಿದ್ದಾರೆ.
‘ಹಯಗ್ರೀವನಿಂದ ಹಯಗ್ರೀವ ದಾನವನ ಸಂಹಾರ’: ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಸಮಿತಿ ವತಿಯಿಂದ 15 ಲಕ್ಷ ರೂ. ವೆಚ್ಚದಲ್ಲಿ ‘ಹಯಗ್ರೀವನಿಂದ ಹಯಗ್ರೀವ ದಾನವನ ಸಂಹಾರ’ ಕಥಾ ಸಾರಾಂಶವನ್ನು ಪ್ರದರ್ಶನ ಮಾಡಲಾಯಿತು. ಒಟ್ಟು 15 ಲಕ್ಷ ರೂ. ವೆಚ್ಚದಲ್ಲಿ 17 ಕಲಾಕೃತಿಗಳ ಮೂಲಕ ಪ್ರದರ್ಶನ ಮಾಡಲಾಯಿತು.
’ಭ್ರಮರಾಂಬಿಕೆಯಿಂದ ಅರುಣಾಸುರ ವಧೆ’: ಕರವಲೆ ಭಗವತಿ ಮಹಿಷಾ ಮರ್ಧಿನಿ ದೇವಾಲಯ ಸಮಿತಿ ವತಿಯಿಂದ ‘ಭ್ರಮರಾಂಬಿಕೆಯಿಂದ ಅರುಣಾಸುರ ವಧೆ’ ಕಥಾ ಸಾರಾಂಶವನ್ನು ಪ್ರದರ್ಶನ ಮಾಡಲಾಯಿತು. ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ 12 ವಿಶೇಷ ಕಲಾಕೃತಿಗಳನ್ನು ಬಳಸಲಾಗಿತ್ತು.

Leave a Reply

Your email address will not be published. Required fields are marked *