ಇರಲು ಸೂರು, ನಿರ್ವಹಣೆಗೆ ಹಣ, ಉಚಿತ ಪಡಿತರ…

ಬೆಂಗಳೂರು: ಜಲಪ್ರಳಯದಿಂದ ಕಂಗೆಟ್ಟು ನೆಲೆ ಕಳೆದುಕೊಂಡವರಿಗೆ ವಿವಿಧ ರೀತಿಯಲ್ಲಿ ನೆರವಾಗುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಲು ರಾಜ್ಯ ಸರ್ಕಾರ ವಿಶೇಷ ಪ್ರಯತ್ನ ನಡೆಸಿದೆ.

ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ಪ್ರತಿ ಕುಟುಂಬಕ್ಕೆ ತಕ್ಷಣವೇ 3800 ರೂ. ವಿತರಿಸಲು ನಿರ್ಧರಿಸಲಾಗಿದೆ. ಜತೆಗೆ ತಾತ್ಕಾಲಿಕ ಮನೆ, ಉಚಿತ ಪಡಿತರ ವಿತರಣೆ, ನರೇಗಾ ಯೋಜನೆ ಅಡಿ ಕೆಲಸ ನೀಡಲು ಸರ್ಕಾರ ತೀರ್ವನಿಸಿದೆ. ಸೋಮವಾರ ಅಧಿಕಾರಿಗಳ ಸಭೆ ಬಳಿಕ ಸಿಎಂ ಎಚ್.ಡಿ. ಕುಮಾರಸ್ವಾಮಿ ಸುದ್ದಿಗಾರರಿಗೆ ಸರ್ಕಾರದ ತೀರ್ಮಾನ ಪ್ರಕಟಿಸಿದರು.

ಕೊಡಗಿನಲ್ಲಿ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ಸೋಮವಾರ ಬೆಳಗ್ಗೆ 10ರ ವರೆಗೆ 4,320 ಜನರನ್ನು ಆಪತ್ತಿನಿಂದ ರಕ್ಷಿಸಲಾಗಿದೆ. ಮಳೆಯ ಭೀಕರತೆ ಸ್ವಲ್ಪ ತಗ್ಗಿದ್ದರಿಂದ, ಪರಿಹಾರ ಕಾರ್ಯ ಚುರುಕುಗೊಂಡಿದೆ. ಪ್ರತಿದಿನ ಅಧಿಕಾರಿಗಳು ಪರಿಸ್ಥಿತಿ ಅವಲೋಕಿಸುತ್ತಿದ್ದು, ನಿರಂತರ ಮಾಹಿತಿ ಒದಗಿಸುತ್ತಿದ್ದಾರೆ. ಅನಾಹುತಕ್ಕೆ ಸರ್ಕಾರ ತಕ್ಷಣ ಸ್ಪಂದಿಸುವಲ್ಲಿ ಯಾವುದೇ ಲೋಪ ಆಗಿಲ್ಲ ಎಂದು ಸ್ಪಷ್ಟ ಪಡಿಸುತ್ತೇನೆ. ಅಧಿಕಾರಿಗಳ ಸ್ಪಂದನೆಗೆ ನಾನು ಆಭಾರಿ ಎಂದು ಹೇಳಿದರು.