ಕೊಡಗಿಗೆ ಕೇರಳ ಅನಾಹುತದ ದುಃಸ್ವಪ್ನ; ಭಾರಿ ಮಳೆ, ಗುಡ್ಡ ಕುಸಿತ, ಪ್ರವಾಹಕ್ಕೆ ತತ್ತರಿಸಿದ ಜನತೆ

ಮಡಿಕೇರಿ: ಭಾರಿ ಮಳೆಯಿಂದಾಗಿ ಕಂಗಟ್ಟಿರುವ ಕೇರಳಕ್ಕೆ ಹೊಂದಿಕೊಂಡೇ ಇರುವ ಕೊಡುಗು ಜಿಲ್ಲೆ ಕೂಡ ಕೇರಳ ಮಾದರಿಯ ಅವಾಂತರಕ್ಕೆ ಗುರಿಯಾಗಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಕೊಡಗಿನಲ್ಲಿ ಗುಡ್ಡ ಕುಸಿತ, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಗುಡ್ಡ ಕುಸಿತದ ಪರಿಣಾಮದಿಂದಾಗಿ ಕೊಡಗು- ಮಂಗಳೂರು ಮಾರ್ಗ ಸಂಪೂರ್ಣ ಸ್ತಬ್ಧವಾಗಿದೆ.

ತೀವ್ರ ಮಳೆಯಿಂದಾಗಿ ಕೊಡಗು – ಮಂಗಳೂರು ಹೆದ್ದಾರಿ ಮಾರ್ಗದ ಮಕಂದೂರು ಎಂಬಲ್ಲಿ ಗುರುವಾರ ಹಲವು ಕಡೆಗಳಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಹೀಗಾಗಿ ಎರಡೂ ಜಿಲ್ಲೆಗಳ ನಡುವೆ ಸಂಪರ್ಕ ಕಡಿತಗೊಂಡಿದೆ. ಒಂದೆಡೆ ವಾಹನ ಸವಾರರು ಮುಂದೆ ಚಲಿಸಲಾಗದೇ, ಮಳೆ ಮತ್ತು ಸಂಚಾರ ದಟ್ಟಣೆಯಿಂದ ಪರದಾಡುತ್ತಿದ್ದರೆ, ಮತ್ತೊಂದೆಡೆ ತೀವ್ರ ಮಳೆಯಿಂದಾಗಿ ಮನೆಯಿಂದ ಹೊರ ಬರಲಾಗದೆ ಜನ ಒದ್ದಾಡುತ್ತಿದ್ದಾರೆ.

ಇನ್ನು ಚಿಕ್ಕೆಂದೂರು ಎಂಬಲ್ಲಿಯೂ ಗುಡ್ಡ ಕುಸಿದಿದ್ದು, ಮಣ್ಣು ತೆರವು ಮಾಡಿ ಸಂಚಾರ ಸುಗಮಗೊಳಿಸಲು ರಕ್ಷಣಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಮಳೆ ಆರ್ಭಟವಂತೂ ಇನ್ನೂ ನಿಂತಿಲ್ಲ. ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಜನ ತತ್ತರಿಸಿದ್ದಾರೆ. ಮುಕ್ಕೋಡ್ಲು ಎಂಬಲ್ಲಿ 40 ಮಂದಿ ನಡುಗಡ್ಡೆಯಲ್ಲಿ ಸಿಲುಕಿದ್ದಾರೆ. ದೇವಸ್ತೂರಿನಲ್ಲಿಯೂ 100 ಮಂದಿ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಗ್ರಾಮಗಳು ಜಲಾವೃತಗೊಳ್ಳುತ್ತಿರುವುದರಿಂದ ಜನ ಗುಡ್ಡವೇರಿ ಕುಳಿತಿದ್ದಾರೆ. ಇವರ ಸಂಪರ್ಕ ಸಾಧ್ಯವಾಗದೇ ಇರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ.

ಇನ್ನು ನಿರಂತರ ಗುಡ್ಡಕುಸಿತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ NH-48(75) ಶಿರಾಡಿ ಘಾಟ್​ ರಸ್ತೆಯನ್ನು ನಿರ್ಬಂಧಿಸುವಂತೆ ಮಂಗಳೂರು ಜಿಲ್ಲಾಧಿಕಾರಿ ಶಶಿಕುಮಾರ್​ ಸೆಂಥಿಲ್​ ಆದೇಶಿಸಿದ್ದಾರೆ.

ಇನ್ನು ಚಿಕ್ಕಮಗಳೂರಿನ ಹಲವೆಡೆಯೂ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಎನ್​ಡಿಆರ್​ಎಫ್​ ತಂಡ ರಸ್ತೆ ಮೇಲೆ ಬಿದ್ದಿದ್ದ ಮಣ್ಣು ತೆರವು ಗೊಳಿಸುತ್ತಿರುವಾಗಲೇ ಮತ್ತೆ ಗುಡ್ಡ ಕುಸಿದಿದೆ. ಪ್ರವಾಹದಲ್ಲಿ ಸಿಲುಕಿದ್ದವರನ್ನ ರಕ್ಷಣೆ ಮಾಡಲಾಗಿದೆ.