ನೆರೆ ಸಂತ್ರಸ್ತರಿಗೆ ಇನ್ಫೋಸಿಸ್​ ಪ್ರತಿಷ್ಠಾನದಿಂದ ಮೂರು ಹಂತದಲ್ಲಿ ಸಹಾಯ ಹಸ್ತ: ಸುಧಾಮೂರ್ತಿ

ಬೆಂಗಳೂರು: ನಮ್ಮ ಇನ್ಫೋಸಿಸ್​ ಪ್ರತಿಷ್ಠಾನದಿಂದ ಹಲವು ಬಾರಿ ನೆರೆ ಸಂತ್ರಸ್ತರು, ಪಾಕೃತಿಕ ವಿಕೋಪಗಳಿಗೆ ತುತ್ತಾದವರಿಗೆ ಸಹಾಯ ಹಸ್ತ ನೀಡಿದ್ದೇವೆ. ಗುಜರಾತ್​ ಭೂಕಂಪ, ಮಹಾರಾಷ್ಟ್ರದಲ್ಲಿ ಬರಗಾಲ ಸಂದರ್ಭದಲ್ಲಿ ನಮ್ಮಲ್ಲಿಂದ ಅಗತ್ಯವಸ್ತುಗಳನ್ನು ಕಳಿಸಿಕೊಟ್ಟಿದ್ದು, ಅದರಂತೆ ಈಗಲೂ ಕೊಡಗು, ಕೇರಳದ ಜನರಿಗೆ ಅಗತ್ಯ ವಸ್ತುಗಳ ಸಹಾಯ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ ಹೇಳಿದರು.

ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಅವರು, ನಮ್ಮ ಪ್ರತಿಷ್ಠಾನದಿಂದ ಮೂರು ಹಂತದಲ್ಲಿ ಸಹಾಯ ಮಾಡುತ್ತೇವೆ. ಮೊದಲನೇ ಬಾರಿಗೆ ಅಕ್ಕಿ, ಬೇಳೆ, ಬೆಂಕಿಪೆಟ್ಟಿಗೆ, ಮಸಾಲೆ ಪೌಡರ್​, ಟವೆಲ್​ ಸೇರಿ ಕೆಲವು ಬಟ್ಟೆಗಳಂತಹ ವಸ್ತುಗಳನ್ನು ನೀಡುತ್ತೇವೆ. ಎರಡನೇ ಹಂತದಲ್ಲಿ ಮಕ್ಕಳ ಬಗ್ಗೆ ಗಮನ ಹರಿಸಿ, ಅವರ ಆಹಾರ, ಶಾಲೆ ಮಕ್ಕಳಿಗೆ ಪುಸ್ತಕ, ನೋಟ್​ಬುಕ್ಸ್​, ಬ್ಯಾಗ್​ಗಳನ್ನು ಕಳಿಸುತ್ತೇವೆ. ಮತ್ತೆ ಮೂರನೇ ಹಂತದಲ್ಲಿ ಯಾರದ್ದಾದರೂ ಮನೆ ರಿಪೇರಿ ಅಗತ್ಯವಿದ್ದರೆ ಮಾಡಿಸಿಕೊಡುತ್ತೇವೆ. ಹೀಗೇ ಮೂರು ನಾಲ್ಕು ತಿಂಗಳವರೆಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತೇವೆ. ನಮ್ಮ ನೆಟ್ವರ್ಕ್​ ದೊಡ್ಡದಾಗಿರುವುದರಿಂದ ನಾವು ಕಳಿಸುವುದೆಲ್ಲ ಸಂತ್ರಸ್ತರಿಗೇ ತಲುಪುತ್ತದೆ ಎಂದಿದ್ದಾರೆ.

ಪ್ರಕೃತಿ ವಿರುದ್ಧ ಸೆಣಸುವುದು ಅಸಾಧ್ಯ

ಪ್ರಕೃತಿ ವಿರುದ್ಧ ಸೆಣೆಸಾಡಲು ಸಾಧ್ಯವಿಲ್ಲ. ಇನ್ನು ಮುಂದೆ ಅವಘಡ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಕೊಡಗು, ಕೇರಳಕ್ಕೆ ಸರ್ಕಾರಗಳು ಸೇರಿ ಹಲವು ಜನ ಸಹಾಯ ಹಸ್ತ ನೀಡಿದ್ದಾರೆ. ಅಲ್ಲಿನ ಜನರು ಆದಷ್ಟು ಸ್ವಚ್ಛತೆ, ಆರೋಗ್ಯ ಕಾಪಾಡಿಕೊಳ್ಳಬೇಕು. ನಮ್ಮಲ್ಲಿಂದ ಬ್ಲೀಚಿಂಗ್​ ಪೌಡರ್​, ರೇನ್​ಬೂಟ್ಸ್​, ಔಷಧಗಳನ್ನು ಕಳಿಸಿಕೊಟ್ಟಿದ್ದೇವೆ. ಆದಷ್ಟು ಸಂತ್ರಸ್ತರೆಲ್ಲ ಒಂದೇ ಕಡೆ ಇದ್ದರೆ ನಾವು ವೈದ್ಯರನ್ನು ಕಳಿಸಿ, ಅವರ ಆರೋಗ್ಯ ಪರಿಶೀಲನೆ ಮಾಡಿಸುತ್ತೇವೆ ಎಂದು ಹೇಳಿದ್ದಾರೆ.

ನೆರೆಗೆ ಸಿಕ್ಕು ಕೆಲಸ, ಶಿಕ್ಷಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕಳೆದುಕೊಂಡವರಿಗೆ ಇನ್ಫೋಸಿಸ್​ನಿಂದ ಉದ್ಯೋಗ ಅವಕಾಶ ಒದಗಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ನಮ್ಮ ಇನ್ಫೋಸಿಸ್​ ಪ್ರತಿಷ್ಠಾನ ಬೇರೆ, ಕಂಪನಿ ಬೇರೆ. ನಮ್ಮ ಕೆಲಸ ಸಮಾಜ ಸೇವೆ. ಸಹಾಯ ಮಾಡುತ್ತೇವೆ. ಏನು ಬೇಕೋ ಅದನ್ನು ಆದಷ್ಟು ಪೂರೈಸುತ್ತೇವೆ ಎಂದರು.

ಹಳೇ ಪಾತ್ರೆ, ಹಳೆ ಬಟ್ಟೆ ಕಳಿಸಬೇಡಿ

ಹಾಗೇ ನೆರೆ ಸಂತ್ರಸ್ತರಿಗೆ ಏನಾದರೂ ಕೊಡಲು ಇಚ್ಛಿಸುವವರು ದಯವಿಟ್ಟು ಹಳೇ ಪಾತ್ರೆ, ನೀವು ಬಳಸಿದ ಬಟ್ಟೆಗಳನ್ನು ಕಳಿಸಬೇಡಿ. ಅಲ್ಲಿನವರು ಒಂದು ಕಾಲದಲ್ಲಿ ಚೆನ್ನಾಗಿ ಬಾಳಿ ಬದುಕಿದವರು. ನಿಮಗೇ ಈ ಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದೀರಿ? ನಿಮಗೆ ಏನು ಕಳಿಸಬೇಕು ಎನಿಸುತ್ತದೆಯೋ ಅದನ್ನು ಕೊಡದೆ, ಅಲ್ಲಿನವರಿಗೆ ಏನು ಬೇಕೋ ಅದನ್ನು ಕೊಡಿ ಎಂದು ಕಿವಿಮಾತು ಹೇಳಿದರು.