ಏಕಮುಖ ಸಂಚಾರಕ್ಕೆ ಮೆಚ್ಚುಗೆ

ಮುಂದುವರಿಸಲು ಸರ್ಕಲ್ ಇನ್ಸ್‌ಪೆಕ್ಟರ್ ಗೆ ಮನವಿ ಸಲ್ಲಿಕೆ

ಗೋಣಿಕೊಪ್ಪಲು : ಪಟ್ಟಣದ ಮುಖ್ಯರಸ್ತೆಯಲ್ಲಿ ಏಕಮುಖ ಸಂಚಾರ ಅನುಷ್ಠಾನಕ್ಕೆ ಪ್ರಾಯೋಗಿಕವಾಗಿ ಕ್ರಮಕೈಗೊಂಡಿರುವ ಪೊಲೀಸ್ ಇಲಾಖೆ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಮನವಿ ಸಲ್ಲಿಸಲಾಯಿತು.

ಸ್ಥಳೀಯ ವರ್ತಕರು ಹಾಗೂ ಸಾರ್ವಜನಿಕರು ಜಿಪಂ ಸದಸ್ಯ ಸಿ. ಕೆ. ಬೋಪಣ್ಣ ನೇತೃತ್ವದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಅವರಿಗೆ ಮನವಿ ಸಲ್ಲಿಸಿ , ಏಕಮುಖ ಸಂಚಾರವನ್ನು ಮುಂದುವರಿಸುವಂತೆ ಒತ್ತಾಯಿಸಿದರು.ವಾಹನಗಳ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಒತ್ತಾಯಿಸಲಾಯಿತು. ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿ ಕ್ರಮಕೈಗೊಳ್ಳುವುದಾಗಿ ದಿವಾಕರ್ ಭರವಸೆ ನೀಡಿದರು.

ಮೈಸೂರು-ಕೇರಳ ಹೆದ್ದಾರಿಯಾಗಿರುವ ಗೋಣಿಕೊಪ್ಪ ಪಟ್ಟಣದ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಏಕಮುಖ ಸಂಚಾರ ಅನುಷ್ಠಾನದಿಂದ ಸಮಸ್ಯೆ ಬಗೆಹರಿಯುವ ಬಗ್ಗೆ ಚೇಂಬರ್ ಆಫ್ ಕಾಮರ್ಸ್ ಸಲಹೆಯಂತೆ ಜಾರಿ ಗೊಳಿಸಿರುವ ಸಂಚಾರ ವ್ಯವಸ್ಥೆಯಿಂದ ಹೆಚ್ಚು ಅನುಕೂಲವಾಗುತ್ತಿದೆ. ಇದೇ ಸಂಚಾರ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಲಾಯಿತು.

ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಲು ಸಂಬಂಧಪಟ್ಟ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಸುವುದು, ಬೈಪಾಸ್ ಇಕ್ಕೆಲೆಗಳನ್ನು ಸಮತಟ್ಟು ಮಾಡುವುದು, ರೂರಲ್ ಕೋ-ಆಪರೇಟಿವ್ ಬ್ಯಾಂಕ್ ಹಿಂಭಾಗದ ಮಾರುಕಟ್ಟೆ ರಸ್ತೆಯಲ್ಲಿ ವಾರದ ಎಲ್ಲ ದಿನಗಳಲ್ಲೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದು, ಬಸ್ ನಿಲ್ದಾಣದ ಎದುರಿನ ಅರ‌್ವತೋಕ್ಲು ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸುವುದು, ಅದೇ ಮಾರ್ಗದಲ್ಲಿ ಮತ್ತೊಂದು ಸಂಪರ್ಕ ರಸ್ತೆಯನ್ನು ಗುರುತಿಸುವುದು, ಮುಖ್ಯ ರಸ್ತೆಯಲ್ಲಿ ದಿನವಿಡೀ ನಿಲ್ಲಿಸುವ ವಾಹನಗಳನ್ನು ತೆರವುಗೊಳಿಸಲು ಯೋಜನೆ ರೂಪಿಸಲು ಒತ್ತಾಯಿಸಲಾಯಿತು. ವರ್ತಕರಾದ ಸಿ.ಡಿ. ಮಾದಪ್ಪ, ಕೊಲ್ಲೀರ ಉಮೇಶ್, ಶೇಖರ್, ರಿಶೀಮ್, ನವೀನ್, ಸಾರ್ವಜನಿಕರಾದ ಮತ್ರಂಡ ಪ್ರವೀಣ್, ಜಮ್ಮಡ ಅರಸು, ಚೆಪ್ಪುಡೀರ ಮಾಚಯ್ಯ, ಶಂಕರ್ ಹಾಜರಿದ್ದರು.

Leave a Reply

Your email address will not be published. Required fields are marked *