ಗೋಣಿಕೊಪ್ಪ ಶೋಭಾಯಾತ್ರೆಗೆ ತೆರೆ

ಗೋಣಿಕೊಪ್ಪ: ಕಥೆಯೊಂದಿಗೆ ಬೆಳಕಿನ ಚಿತ್ತಾರ ಮೂಡಿಸಿ ಮರೆಯಾದ ತೇರುಗಳ ಸಮಾಗಮದ ಮೂಲಕ 41ನೇ ಗೋಣಿಕೊಪ್ಪ ದಸರಾ ಶೋಭಾಯಾತ್ರೆ ತೆರೆ ಕಂಡಿತು. ದೇವಿಯ ರುದ್ರ ನರ್ತನ, ಧಾರ್ಮಿಕ ಹಿನ್ನೆಲೆಯ ಕಥಾನಕ, ಕಲಾಪ್ರಿಯರ ಪ್ರೋತ್ಸಾಹದ ನಡುವೆ ಶೋಭಾಯಾತ್ರೆಯಲ್ಲಿ ತೇರುಗಳು ಬೆಳಕು ಮೂಡಿಸಿದವು.
ಬುಧವಾರ ಮುಂಜಾನೆ ಚಾಮುಂಡೇಶ್ವರಿ ದೇವಿಯ ವಿಸರ್ಜನೆ ಮೂಲಕ ಧಾರ್ಮಿಕ ಕಾರ್ಯ ಸಂಪನ್ನಗೊಂಡಿತು.
ದಶ ಮಂಟಪಗಳ ಬೆಳಕಿನ ಚಿತ್ತಾರ: ಕಾವೇರಿ ದಸರಾ ಸಮಿತಿಯ ಚಾಮುಂಡೇಶ್ವರಿ ದೇವಿಯ ಮೂರ್ತಿ ಹೊತ್ತು ತೇರು ಶೋಭಾಯಾತ್ರೆಯಲ್ಲಿ ಸಾಗಿತು. ಇದರೊಂದಿಗೆ ನವ ಮಂಟಪಗಳು ತನ್ನದೇ ಆದ ಚಿಂತನೆಯಲ್ಲಿ ತೇರು ನಿರ್ಮಿಸಿ ಬೆಳಕು ಹರಿಸಿತು.
ದಸರಾ ನಾಡಹಬ್ಬ ಸಮಿತಿಯಿಂದ ಭಾರತಾಂಬೆ ಪ್ರತಿಮೆ ಚಿತ್ರಣ ಸಾಗಿ ಬಂತು. ಇದರೊಂದಿಗೆ ಕೈಕೇರಿ ಭಗವತಿ ಯುವ ದಸರಾ ಸಮಿತಿ, ಹರಿಶ್ಚಂದ್ರಪುರ ನಮ್ಮ ದಸರಾ ಸಮಿತಿ, ಅರ‌್ವತೋಕ್ಲು ಶಾರದಾಂಬ ದಸರಾ ಸಮಿತಿ, ಕಾಡ್ಲಯ್ಯಪ್ಪ ದಸರಾ ಸಮಿತಿ, ಕೊಪ್ಪದ ಸ್ನೇಹಿತರ ಬಳಗ, ಮಾರುಕಟ್ಟೆಯ ಸರ್ವರ ದಸರಾ ಸಮಿತಿ, ನವಚೇತನಾ ದಸರಾ ಸಮಿತಿ, ಯುವ ದಸರಾ ಸಮಿತಿ ತೇರು ಮುಖ್ಯ ರಸ್ತೆಯಲ್ಲಿ ಸಾಗಿದವು. ಮುಂಜಾನೆವರೆಗೂ ನಡೆದ ಶೋಭಾಯಾತ್ರೆಯಲ್ಲಿ ಸೂರ್ಯನ ಉದಯದೊಂದಿಗೆ ತೇರುಗಳ ಬೆಳಕು ಮರೆಯಾಯಿತು. ಶೋಭಾಯಾತ್ರೆ ಸಂದರ್ಭ ಕಾಡ್ಲಯ್ಯಪ್ಪ ಸಮಿತಿಯ ಕಥಾನಕದಲ್ಲಿ ಈಶ್ವರನ ಶಕ್ತಿಯಿಂದ ವರುಣ ದೇವನ ಆಗಮನದ ಮೂಲಕ ವಿಶೇಷತೆ ಮೂಡಿಸಿತು.
ಪ್ರತಿ ತೇರಿನ ಸುತ್ತ ಆಯಾ ಭಾಗದ ಜನರು ಹಾಡು, ಮ್ಯೂಸಿಕ್‌ನೊಂದಿಗೆ ಕುಣಿದು ಕುಪ್ಪಳಿಸಿದರು. ಎಲ್ಲ ನೋವುಗಳನ್ನು ಮರೆತು ಕುಣಿದ ಅಭಿಮಾನಿಗಳ ಸಂಭ್ರಮ ರಂಗುಮೂಡಿಸಿತು. ರಾತ್ರಿ 10 ಗಂಟೆ ಸುಮಾರಿಗೆ ಶೋಭಾಯಾತ್ರೆ ಆರಂಭಗೊಂಡು ಮುಖ್ಯರಸ್ತೆಯಲ್ಲಿ ಸಾಗಿತು. ಮುಂಜಾನೆ ಸೀಗೆತೋಡುವಿನಲ್ಲಿರುವ ಕೆರೆಯಲ್ಲಿ ದೇವಿಮೂರ್ತಿ ವಿಸರ್ಜನೆ ಮಾಡಲಾಯಿತು.
ವಿಜೇತರು: ತೇರು ಸ್ಪರ್ಧೆಯಲ್ಲಿ ಕೊಪ್ಪ ಸ್ನೇಹಿತರ ಬಳಗದ ಮೂಷಿಕ ವಾಹನ, ಋಷಿ ಮುನಿಗಳ ಕಥೆ ಪ್ರಥಮ ಸ್ಥಾನ ಪಡೆದುಕೊಂಡಿತು. ಮಾರುಕಟ್ಟೆ 2ನೇ ವಿಭಾಗದ ಯುವ ದಸರಾ ಸಮಿತಿ ಹೊರ ತಂದ ತಾರಕಾಸುರನ ವಧೆ ಕಥಾನಕ ದ್ವಿತೀಯ ಸ್ಥಾನ, ಅರ‌್ವತೋಕ್ಲು ಕಾಡ್ಲಯ್ಯಪ್ಪ ದಸರಾ ಸಮಿತಿ ನಿರ್ಮಿಸಿದ್ದ ಗಜಾಸುರನ ವಧೆ ಚಿತ್ರಣ ಮೂರನೇ ಸ್ಥಾನ ಪಡೆದುಕೊಂಡಿತು.
ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗದು ಹಾಗೂ ಟ್ರೋಫಿ ವಿತರಿಸಲಾಯಿತು. ದಾನಿ ಉಂಬಾಯಿ ಪಾಲ್ಗೊಂಡರು.
ಸಮಾರೋಪ: ಸಮಾರೋಪ ಕಾರ್ಯಕ್ರಮದಲ್ಲಿ ಶೌರ್ಯಚಕ್ರ ಪುರಸ್ಕೃತ ಎಚ್.ಎನ್. ಮಹೇಶ್ ಮತ್ತು ಅವರ ಕುಟುಂಬವನ್ನು ಸನ್ಮಾನಿಸಲಾಯಿತು. ಮಹೇಶ್, ತಂದೆ ನಾಗರಾಜು, ತಾಯಿ ಲಕ್ಷ್ಮೀ ಸನ್ಮಾನ ಸ್ವೀಕರಿಸಿದರು.
ಶಾಸಕ ಕೆ. ಜಿ. ಬೋಪಯ್ಯ ದಸರಾ ಕಾರ್ಯಕ್ರಮಕ್ಕೆ ಸರ್ಕಾರದಿಂದ 30 ಲಕ್ಷ ರೂ. ಅನುದಾನ ತಂದ ಕಾರಣಕ್ಕೆ ಅವರನ್ನು ಸನ್ಮಾನಿಸಲಾಯಿತು. ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ. ಜಿ. ರಾಮಕೃಷ್ಣ, ಕಾರ್ಯಾಧ್ಯಕ್ಷ ಬೋಪಣ್ಣ, ಜಿ.ಪಂ. ಅಧ್ಯಕ್ಷ ಬಿ. ಎ. ಹರೀಶ್, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಆದೇಂಗಡ ವಿನು ಚಂಗಪ್ಪ, ರಾಜ್ಯ ವಾಣಿಜ್ಯ, ಕೈಗಾರಿಕಾ ಸಂಸ್ಥೆ ನಿರ್ದೇಶಕ ಗಿರೀಶ್ ಗಣಪತಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಎನ್. ಪ್ರಕಾಶ್ ಹಾಜರಿದ್ದರು.
ಗೈರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ಸಂಸದ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಸ್ಥಳೀಯ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ ಗೈರಾದರು.
ಬಹುಮಾನ ನಿರಾಕರಣೆ: ತೀರ್ಪಿನಲ್ಲಿ ಪಾರದರ್ಶಕತೆ ಇಲ್ಲ ಎಂದು ಆಕ್ಷೇಪಿಸಿ 2ನೇ ಬಹುಮಾನ ಪಡೆದ ಮಾರುಕಟ್ಟೆ 2 ನೇ ವಿಭಾಗದ ಯುವ ದಸರಾ ಸಮಿತಿ ತಂಡ ಬಹುಮಾನ ನಿರಾಕರಿಸಿತು. ಮುಂಜಾನೆ 6.30ಕ್ಕೆ ಪ್ರತಿಭಟನೆ ನಡೆಸಿತು.
ಕಾವೇರಿ ದಸರಾ ಸಮಿತಿ ಅಧ್ಯಕ್ಷ ಮಾತನಾಡಿ, ಎಲ್ಲವೂ ಪಾರದರ್ಶಕವಾಗಿ ನಡೆದಿದೆ. ಹಸ್ತಕ್ಷೇಪಕ್ಕೆ ಸಮಿತಿ ಅವಕಾಶ ನೀಡಿಲ್ಲ ಎಂದು ಮನವಿ ಮಾಡಿಕೊಂಡರೂ ಬಹುಮಾನ ನಿರಾಕರಿಸಿದರು.
ಸರಳ ತೇರು: ಕಾವೇರಿ ದಸರಾ ಸಮಿತಿಯಿಂದ ಉಪ ಸಮಿತಿಗಳ ನಿರಾಕರಣೆಯಿಂದಾಗಿ ಒಂದಷ್ಟು ಸಮಿತಿಗಳು ಸರಳ ದಸರಾ ತೇರು ಪ್ರದರ್ಶನ ಮಾಡಿತು. ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿ, ಕೈಕೇರಿ ಭಗವತಿ ಸಮಿತಿ, ಮಾರುಕಟ್ಟೆಯ ಸರ್ವರ ಸಮಿತಿ ಮತ್ತು ನವಚೇತನಾ ದಸರಾ ಸಮಿತಿಗಳು ಸರಳವಾಗಿ ಆಚರಿಸಿ ಸರ್ಕಾರದ ಅನುದಾನ ನಮಗೂ ಹೆಚ್ಚು ಸಿಗುವಂತಾಗಬೇಕು ಎಂಬ ಸಂದೇಶ ಸಾರಿದರು.
ಬಹುಮಾನ ವಿತರಣೆ: ದಸರಾ ನಾಡಹಬ್ಬ ಸಮಿತಿಯಿಂದ ಆಯೋಜಿಸಿದ್ದ ಸ್ತಬ್ಧಚಿತ್ರ ಪೈಪೋಟಿ ನಂತರ ಮಂಗಳವಾರ ರಾತ್ರಿ ಬಹುಮಾನ ವಿತರಣೆ ಮಾಡಲಾಯಿತು.
ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ. ರಾಮಕೃಷ್ಣ, ದಸರಾ ನಾಡಹಬ್ಬ ಸಮಿತಿ ಗೌರವ ಅಧ್ಯಕ್ಷ ಪ್ರಭಾಕರ್, ಅಧ್ಯಕ್ಷ ಹೃಷಿ ಕಾವೇರಪ್ಪ, ಕಾರ್ಯದರ್ಶಿ ಕಂಜಿತಂಡ ಪ್ರವೀಣ್, ಮಾಜಿ ಅಧ್ಯಕ್ಷ ಗೋಪಿ ಚಿಣ್ಣಪ್ಪ, ತೀರ್ಪುಗಾರರಾದ ರೀತಾ, ಸಣ್ಣುವಂಡ ಕಿಶೋರ್ ನಾಚಪ್ಪ ಹಾಜರಿದ್ದರು.

Leave a Reply

Your email address will not be published. Required fields are marked *