ಕೊಡಗು ನೆರೆ ಸಂತ್ರಸ್ತರಿಗೆ 50 ಸಾವಿರ ರೂ. ಹೆಚ್ಚಿನ ಪರಿಹಾರ: ದೇಶಪಾಂಡೆ

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಬಿದ್ದ ಭಾರಿ ಮಳೆ, ಭೂಕುಸಿತದಿಂದ ಹಾನಿಗೊಳಗಾಗಿರುವ ಕುಟುಂಬಗಳಿಗೆ ಬಟ್ಟೆಬರೆ ಮತ್ತು ಅಗತ್ಯ ದಿನಬಳಕೆ ವಸ್ತುಗಳಿಗೆಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 50 ಸಾವಿರ ರೂ. ಹೆಚ್ಚುವರಿ ಪರಿಹಾರ ಕೊಡಲು ಸರ್ಕಾರ ತೀರ್ಮಾನಿಸಿದೆ ಎಂದು ಕಂದಾಯ ಮತ್ತು ಕೌಶಲಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಪ್ರಕೃತಿ ವಿಕೋಪದಿಂದ ಹಾನಿಹೊಂಡಿರುವ ಮನೆಗಳಿಗೆ ಎಸ್.ಡಿ.ಆರ್.ಎಫ್/ ಎನ್.ಡಿ.ಆರ್.ಎಫ್ ಮಾರ್ಗಸೂಚಿಯ ಪ್ರಕಾರ ಬಟ್ಟೆಬರೆ ನೆರವಿಗೆಂದು 1,800 ರೂ. ಮತ್ತು ದಿನಬಳಕೆ ವಸ್ತುಗಳಿಗೆಂದು 2,000 ರೂ. ಒಟ್ಟು 3,800 ರೂ. ಕೊಡಲು ಅವಕಾಶವಿದೆ. ಆದರೆ ಈ ಪರಿಹಾರ ಮೊತ್ತ ಸಾಕಾಗುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಈಗ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೇಶಪಾಂಡೆ ಹೇಳಿದ್ದಾರೆ.

ಕೊಡಗಿಗೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಚಿವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕೆಂದು ಸಂತ್ರಸ್ತರು ಮನವಿ ಮಾಡಿಕೊಂಡಿದ್ದರು. ಅವರ ಮನವಿಗೆ ಸ್ಪಂದಿಸಿ ಪರಿಹಾರ ಮೊತ್ತ ಹೆಚ್ಚಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸಚಿವ ಸಂಪುಟದ ಒಪ್ಪಿಗೆಯೂ ದೊರೆತಿದೆ ಎಂದು ದೇಶಪಾಂಡೆ ತಿಳಿಸಿದರು.

ಕೊಡಗಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ 1,156 ಮನೆಗಳು ತೀವ್ರ ಹಾನಿಗೊಳಗಾಗಿವೆ. ಇಷ್ಟೂ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 50 ಸಾವಿರ ರೂ. ಪರಿಹಾರ ನೀಡಲಾಗುವುದು. ಇದಕ್ಕಾಗಿ 5.78 ಕೋಟಿ ರೂ. ವೆಚ್ಚವಾಗಲಿದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.