ಬೇಡುವ ಸ್ಥಿತಿಗೆ ಬಂದಿರುವೆನೆಂದ ಕಾಫಿತೋಟದ ಮಾಲಕಿ!

| ಹಿರಿಕರ ರವಿ ಸೋಮವಾರಪೇಟೆ

ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಗ್ಗೋಡ್ಲು ಗ್ರಾಮದ ಕುಟ್ಟಂಡ ಪೊನ್ನಮ್ಮ ಅವರದು ಕೂಡು ಕುಟುಂಬ. ಮಕ್ಕಳು, ಸೊಸೆಯಂದಿರು ವಿದ್ಯಾವಂತರು. ಇಬ್ಬರು ಪುತ್ರರಿಗೆ ಆಸ್ತಿ ಪಾಲು ಮಾಡಿ ಕೊಡುವ ತಯಾರಿಯಿದ್ದಾಗಲೇ ಇಡೀ ಆಸ್ತಿ ಭೂಸಮಾಧಿಯಾಯಿತು. ಆಗಸ್ಟ್ 16ರಂದು ಬೆಳಗ್ಗೆ 10.30ಕ್ಕೆ ಮನೆಯ ಹಿಂಭಾಗದ ಗುಡ್ಡ ಕುಸಿದ ಪರಿಣಾಮ ಪೊನ್ನಮ್ಮ ಅವರ ತೋಟ, ಗದ್ದೆ ಮಣ್ಣಿನಡಿ ಸೇರಿದೆ. 90 ವರ್ಷದ ಹಿಂದೆ ನಿರ್ವಿುಸಿದ್ದ ಐನ್​ವುನೆಯೂ ನಡುಗಿದ್ದು, ಹಿಂಬದಿಯ ಗೋಡೆಗಳು ಬಿರುಕುಬಿಟ್ಟು ವಾಸ ಮಾಡದ ಸ್ಥಿತಿಗೆ ತಲುಪಿದೆ.

11.50 ಎಕರೆ ಗದ್ದೆ ಹಾಗೂ ಕಾಫಿ ತೋಟದಲ್ಲಿ ಕೃಷಿ ಮಾಡಿ ಕೊಂಡು, ತನ್ನ ಇಬ್ಬರು ಪುತ್ರರು, ಸೊಸೆಯಂದಿರೊಂದಿಗೆ ಪೊನ್ನಮ್ಮ ಜೀವನ ಸಾಗಿಸುತ್ತಿದ್ದರು. ಆದರೆ, ಪ್ರಕೃತಿ ವಿಕೋಪದಿಂದ ಕಾಫಿ ತೋಟ, ಗದ್ದೆ ಸಂಪೂರ್ಣ ನಾಶವಾಗಿದೆ. ಕಾಫಿ ತೋಟದಲ್ಲಿದ್ದ ಕಾಫಿ ಗಿಡ, ಮರಗಳು, ಕಾಳುಮೆಣಸು ಬಳ್ಳಿಗಳು ಕೊಚ್ಚಿಕೊಂಡು ಹೋಗಿದ್ದರೆ, ಗದ್ದೆಯಲ್ಲಿ ಮಣ್ಣು ಮಿಶ್ರಿತ ಮರಳು ನಿಂತು ಮರುಭೂಮಿಯಂತಾಗಿದೆ. ನಾಟಿ ಮಾಡಿದ್ದ ಭತ್ತದ ಗದ್ದೆಯೂ ಸಂಪೂರ್ಣ ನಾಶವಾಗಿದೆ.

ಆ.16ರಂದು ಭೂಕುಸಿತ ಪ್ರಾರಂಭವಾಗುತ್ತಿದ್ದಂತೆ ಸುಮಾರು 5 ಕುಟುಂಬವನ್ನು ಇದೇ ಪೊನ್ನಮ್ಮ ರಕ್ಷಿಸಿದ್ದರು. ಬೆಟ್ಟ ಕುಸಿಯುತ್ತಿದ್ದಂತೆ ಮನೆಯ ಹಿಂಬದಿಯಿರುವ ದೇವಯ್ಯ, ಪೂವಯ್ಯ, ಪಾರ್ವತಿ ಅವರಿಗೆ ಮೊಬೈಲ್ ಕರೆ ಮಾಡಿ ತಕ್ಷಣ ಮನೆಯಿಂದ ಹೊರಬರುವಂತೆ ತಿಳಿಸಿದ್ದರು. ಇದರೊಂದಿಗೆ ಪೂಣಚ್ಚ, ಜ್ಯೋತಿ ಅವರ ಕುಟುಂಬಸ್ಥರಿಗೂ ನೆರವಾಗಿದ್ದರು. ಈ ಸಮಯದಲ್ಲೇ ಇವರ ಮನೆಯೂ ನಡುಗಿದ್ದು, ಎಲ್ಲರೊಂದಿಗೆ ಪೊನ್ನಮ್ಮ ಮನೆ ತೊರೆಯಬೇಕಾಯಿತು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಈ ಮನೆ ವಾಸಕ್ಕೆ ಯೋಗ್ಯವಾಗಿಲ್ಲ ಎಂದಿದ್ದಾರೆ. ಕಾಫಿ ಬೆಳೆಗಾರರು ಎನಿಸಿಕೊಂಡಿದ್ದ ಕುಟುಂಬ ಈಗ ಅತಂತ್ರವಾಗಿದೆ.

ಇರುವ ಇಬ್ಬರು ಮಕ್ಕಳೂ ಕೃಷಿಯನ್ನೇ ನಂಬಿಕೊಂಡಿದ್ದರು. ಇಬ್ಬರು ಮಕ್ಕಳಿಗೆ ತಲಾ 5 ಎಕರೆ ಬದಲಿ ಕೃಷಿ ಭೂಮಿ ನೀಡಬೇಕು. ಮೊದಲನೇ ಸೊಸೆ ಶ್ವೇತಾ ಬಿ.ಕಾಂ., ದ್ವಿತೀಯ ಸೊಸೆ ಪೂರ್ಣಾ ಬಿಸಿಎ ವ್ಯಾಸಂಗ ಮಾಡಿದ್ದು, ಇಬ್ಬರಿಗೆ ಯಾವುದಾದರೂ ಸಂಸ್ಥೆಯಲ್ಲಿ ಉದ್ಯೋಗ ನೀಡಿದರೆ ಮತ್ತೆ ಬದುಕು ಕಟ್ಟಿಕೊಳ್ಳಬಹುದು.

| ಕುಟ್ಟಂಡ ಪೊನ್ನಮ್ಮ

ನೊಂದವರ ನೋವಿಗೆ ಸ್ಪಂದನೆ

ಮಡಿಕೇರಿ: ಕೌಟುಂಬಿಕ ಕಲಹದ ಬೇಸರದ ಜತೆ ಪ್ರಕೃತಿ ವಿಕೋಪದಿಂದ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಇಬ್ಬರು ಮಹಿಳೆಯರಿಗೆ ತುಮಕೂರು ಜಿಲ್ಲೆಯ ಗುಬ್ಬಿಯ ನಾಲ್ವರು ಸ್ನೇಹಿತರು ಆರ್ಥಿಕ ನೆರವು ನೀಡಿದ್ದಾರೆ. ‘ಕೌಟುಂಬಿಕ ನೋವಿನ ನಡುವೆ ಪ್ರಕೃತಿ ವಿಕೋಪ ಸಂಕಷ್ಟ’ ಶೀರ್ಷಿಕೆಯಲ್ಲಿ ಅ.6 ರಂದು ‘ವಿಜಯವಾಣಿ’ ಪ್ರಕಟಿಸಿದ್ದ ವರದಿ ಓದಿದ ಇವರು, ಮಕ್ಕಳೊಂದಿಗೆ ಆತಂಕದಲ್ಲಿ ದಿನದೂಡುತ್ತಿರುವ ಉದಿಯಂಡ ಕೆ. ಕವಿತಾ, ಕನ್ನಿಕಂಡ ಪಿ. ಕುಸುಮಾ ಅವರ ಮನೆಗೆ ತೆರಳಿ, ತಲಾ 25 ಸಾವಿರ ರೂ. ನೆರವು ನೀಡಿ ಧೈರ್ಯ ತುಂಬಿದರು. ಗುಬ್ಬಿಯ ಜಿ.ಸಿ. ಪ್ರಮೋದ್, ರೋಹಿತ್, ಜಿ.ಸಿ. ಹೇಮಂತ್, ಶಂಕರ್ ಪ್ರಸಾದ್ ಮಾನವೀಯತೆ ಮೆರೆದಿದ್ದಾರೆ. ಸೋಮವಾರಪೇಟೆ ತಾಲೂಕಿನ ಶಿರಂಗಳ್ಳಿ ಗ್ರಾಮದಲ್ಲಿರುವ ಕವಿತಾ ಅವರ ಪಾಲಕರ ಮನೆಯಲ್ಲಿ ಪರಿಹಾರ ಮೊತ್ತ ವಿತರಿಸಿದರು.

ಕೃತಜ್ಞತೆ

ನಮಗೆ ಇದುವರೆಗೂ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ವಿಜಯವಾಣಿ ವರದಿ ಬಳಿಕ ನಮ್ಮ ಸಮಸ್ಯೆ ಬಗ್ಗೆಯೂ ಸಮಾಜ ಗಮನ ಹರಿಸುವಂತಾಗಿದೆ. ಅದಕ್ಕಾಗಿ ಪತ್ರಿಕೆಗೆ ಕೃತಜ್ಞತೆ ಸಲ್ಲಿಸುತ್ತೇವೆ. ಮಕ್ಕಳಿಗಾಗಿ ಬದುಕುತ್ತಿರುವ ನಮಗೆ ವಾಸಿಸಲು ಮನೆಯ ಅಗತ್ಯವಿದ್ದು, ಅದನ್ನು ಮಾಡಿಕೊಟ್ಟಲ್ಲಿ ಉಪಕಾರ ಆಗುತ್ತದೆ ಎಂದು ಕವಿತಾ, ಕುಸುಮಾ ಹೇಳಿಕೊಂಡರು.

ಮನೆ ಕಳೆದುಕೊಂಡ ವ್ಯಕ್ತಿ ನಾಲೆಗೆ ಬಿದ್ದು ಆತ್ಮಹತ್ಯೆ

ಕುಶಾಲನಗರ: ಪ್ರಕೃತಿ ವಿಕೋಪಕ್ಕೆ ಮನೆ, ಜಮೀನು ಕಳೆದುಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು ಭಾನುವಾರ ರಾತ್ರಿ ವಿಷ ಕುಡಿದು ನಂತರ ಬಸವನಹಳ್ಳಿ ಗ್ರಾಮದಲ್ಲಿ ಚಿಕ್ಲಿಹೊಳೆ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೂರ್ಲಬ್ಬಿ ಗ್ರಾಮದ ಅಪ್ಪುಡ ವಿ.ಜಿ.ಭೀಮಯ್ಯ (42) ಆತ್ಮಹತ್ಯೆ ಮಾಡಿಕೊಂಡವರು. ಇವರು ಆಗಸ್ಟ್​ನಲ್ಲಿ ಸುರಿದ ಭಾರಿ ಮಳೆಗೆ ಸೂರ್ಲಬ್ಬಿ ಗ್ರಾಮದಲ್ಲಿದ್ದ ಮನೆ, ತೋಟ ಕಳೆದುಕೊಂಡಿದ್ದು, ಬಸವನಹಳ್ಳಿ ಗ್ರಾಮದಲ್ಲಿ ಪತ್ನಿ ಜಾನಕಿ ಚಿತ್ರಾ ಮತ್ತು ನಾಲ್ವರು ಹೆಣ್ಣು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಗುಡ್ಡೆಹೊಸೂರಿನಲ್ಲಿ ಸಿಮೆಂಟ್ ಉತ್ಪನ್ನಗಳ ತಯಾರಿಕಾ ಕೇಂದ್ರದಲ್ಲಿ ಕಾರ್ವಿುಕರಾಗಿದ್ದರು. ಪ್ರಕರಣ ದಾಖಲಾಗಿದೆ.?