ಕೊಡಗು ಜಲಪ್ರಳಯ ಮಾನವನಿರ್ವಿುತ!

| ಅಣ್ಣೀರ ಹರೀಶ್ ಮಾದಪ್ಪ ಶ್ರೀಮಂಗಲ

ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ಜಲಪ್ರಳಯಕ್ಕೆ ಸಿಲುಕಿ ತತ್ತರಿಸಿದ ಕೊಡಗು ದುರಂತ ಮಾನವ ನಿರ್ವಿುತವೇ ಹೊರತು ಲಘು ಭೂಕಂಪನದಿಂದಾದ ಪರಿಣಾಮವಲ್ಲ ಎಂದು ಅಧ್ಯಯನ ತಂಡ ವರದಿ ನೀಡಿದೆ.

ಆಗಸ್ಟ್​ನಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತ-ಭೂಕುಸಿತದ ಬಗ್ಗೆ ಅಧ್ಯಯನ ನಡೆಸಿರುವ ಭಾರತೀಯ ಭೌಗೋಳಿಕ ಸರ್ವೆ (ಜಿಎಸ್​ಐ) ಸಂಸ್ಥೆಯ ವಿಜ್ಞಾನಿಗಳು ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆಗಸ್ಟ್​ನಲ್ಲಿ ಪ್ರಾಥಮಿಕ ವರದಿ ಸಲ್ಲಿಸಲಾಗಿತ್ತು.

ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ಕೈಗೊಂಡಿದ್ದ ಜಿಎಸ್​ಐ ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ) ತಂಡಗಳು ಪ್ರಾಥಮಿಕ ವರದಿಯಲ್ಲಿ ಭೂಕುಸಿತ ಮಾನವ ನಿರ್ವಿುತ ಎಂದು ಉಲ್ಲೇಖಿಸಿದ್ದವು.

ಮೊದಲ ಹಂತದಲ್ಲಿ ಮಡಿಕೇರಿ-ಕೊಯನಾಡು- ಸುಳ್ಯ ಮಾರ್ಗ, ವಿರಾಜಪೇಟೆ-ಮಾಕುಟ್ಟ ರಸ್ತೆಯಲ್ಲಿ ಉಂಟಾದ ಭೂಕುಸಿತ ಸ್ಥಳಗಳಿಗೆ ವಿಜ್ಞಾನಿಗಳ ತಂಡ ಭೇಟಿ ನೀಡಿ ಅಧ್ಯಯನ ನಡೆಸಿತ್ತು. ಈ ವ್ಯಾಪ್ತಿಯ ಭೂಕುಸಿತವಾದ 8 ಜಾಗಗಳಿಗೆ ಭೇಟಿ ನೀಡಿ, ಕಾರಣಗಳನ್ನು ಗುರುತಿಸಿದೆ. ಇವುಗಳಲ್ಲಿ ಪ್ರತಿಯೊಂದರಲ್ಲೂ ಭೂಕುಸಿತಕ್ಕೆ ಸರಿಯಾದ ರಸ್ತೆ ನಿರ್ಮಾಣ ತಂತ್ರ ಅನುಸರಿಸದೇ ಇರುವ ಕಾರಣ ಎಂದು ಉಲ್ಲೇಖಿಸಿದೆ.

2ನೇ ಭೂ ಕುಸಿತ ಆಗಸ್ಟ್ 12 ರಿಂದ 18 ರಲ್ಲಿ ನಡೆದಿರುವುದು. ಈ ವ್ಯಾಪ್ತಿಯ 105 ಸ್ಥಳಗಳಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಇದರಲ್ಲಿ ಆಗಸ್ಟ್ 15 ರಿಂದ 17 ರವರೆಗೆ ಹೆಚ್ಚಿನ ಪ್ರದೇಶದಲ್ಲಿ ಭೂ ಕುಸಿತವಾಗಿದೆ. ಭಾರಿ ಮಳೆ ಇಲ್ಲದಿದ್ದರೆ ಕಡಿದಾದ ಇಳಿಜಾರು ಜಾರಿ ಕೊಳ್ಳುವುದಿಲ್ಲ ಎಂದು ವರದಿ ಮಾಡಲಾಗಿದೆ.

ನೈಸರ್ಗಿಕ ಇಳಿಜಾರು ಬದಲಾಯಿಸಿರುವುದು, ರಸ್ತೆ ರಚನೆಗೆ ನೈಸರ್ಗಿಕ ಒಳಚರಂಡಿ ತಡೆಯುವುದು, ಮನೆ, ಹೋಟೆಲ್, ರೆಸಾರ್ಟ್, ಹೋಮ್ ಸ್ಟೇ ಕಟ್ಟಡ ನಿರ್ವಣದಿಂದ ಮತ್ತು ಪ್ಲಾಂಟೇಷನ್​ಗಾಗಿ ಭೌಗೋಳಿಕ ಸ್ವರೂಪ ಬದಲಾಯಿಸಿರುವುದು ಭೂಕುಸಿತಕ್ಕೆ ಕಾರಣವಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.

ಜಿಲ್ಲೆಯ ಹಲವೆಡೆ ಜುಲೈ 9 ರಂದು ಸಂಭವಿಸಿದ 3.4 ಪ್ರಮಾಣದ ಭೂಕಂಪದ ಕಾರಣದ ಬಗ್ಗೆಯೂ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದ್ದು, ಪ್ರಾಕೃತಿಕ ಅನಾಹುತಗಳಿಗೆ ಭೂಕಂಪನದ ಪರಿಣಾಮ ತುಂಬಾ ದೂರದಲ್ಲಿದೆ ಎಂದು ಉಲ್ಲೇಖಿಸಿದೆ.

ಪರಿಹಾರ ಕ್ರಮಕ್ಕೆ ಸೂಚನೆ

ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಪ್ರದೇಶ ಮತ್ತು ಅಲ್ಲಿನ ಜನರ ಸಾಮಾನ್ಯ ಜೀವನಕ್ಕೆ ಹಿಂತಿರುಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಕೆಲವು ಪ್ರದೇಶಗಳನ್ನು ವಾಸ್ತವವಾಗಿ ಇಳಿಜಾರು ಸರಿಪಡಿಸಲು ಮತ್ತು ಸ್ಥಿರಗೊಳಿಸಲು ದಶಕಗಳ ಕಾಲ ತೆಗೆದುಕೊಳ್ಳಬಹುದು. ಭವಿಷ್ಯದಲ್ಲಿ ವಿಪತ್ತು ಸಂಭವಿಸುವುದನ್ನು ತಡೆಗಟ್ಟಲು ಹಲವು ಪರಿಹಾರ ಕ್ರಮ ತೆಗೆದುಕೊಳ್ಳಬೇಕೆಂದು ವರದಿ ಮಾಡಿದೆ. ಮುಖ್ಯವಾಗಿ ಬೆಟ್ಟ ಪ್ರದೇಶಗಳಲ್ಲಿ ಭೂಬಳಕೆಗಾಗಿ ಕಟ್ಟು ನಿಟ್ಟಿನ ಮಾರ್ಗಸೂಚಿ ಮತ್ತು ನಿಬಂಧನೆಗಳ ಅನುಷ್ಠಾನವಾಗಬೇಕು. ಭೂ ಪ್ರದೇಶಕ್ಕೆ ವಲಯ ನಿಯಮ ನಿಗದಿಯಾಗಿರಬೇಕು. ಎಲ್ಲ ನಿಯಮಗಳು ಭೂ ವಿಜ್ಞಾನಿ ಮತ್ತು ರಚನಾತ್ಮಕ ಇಂಜಿನಿಯರುಗಳ ಸ್ಪಷ್ಟೀಕರಣ ಹೊಂದಿರಬೇಕು. ಎಲ್ಲ ಲಂಬ ಇಳಿಜಾರುಗಳನ್ನು ತಡೆಯಬೇಕು. ಅನಿವಾರ್ಯವಾದರೆ ವೈಜ್ಞಾನಿಕ ಇಳಿಜಾರಿನ ಸ್ಥಿರತೆಗೆ ಪ್ರಾಮುಖ್ಯತೆ ನೀಡಬೇಕು. ಮಳೆ ನೀರಿನ ಸರಿಯಾದ ಚರಂಡಿ ಖಾತ್ರಿಪಡಿಸಬೇಕು. ನೈಸರ್ಗಿಕ ಒಳಚರಂಡಿಗಳಿಗೆ ಅಡೆತಡೆ ತೆರವುಗೊಳಿಸಬೇಕು. ವೆಟಿವರ್ ಎಂಬ ಜಾತಿ ಹುಲ್ಲುನೆಡುವ ಮೂಲಕ ಇಳಿಜಾರಿನ ಸ್ಥಿರತೆ ಸುಧಾರಿಸಬೇಕು ಮತ್ತು ಭೂಕುಸಿತದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಬೇಕೆಂದು ಸೂಚಿಸಲಾಗಿದೆ.

ಜಲಪ್ರಳಯದ ಪರಿಣಾಮಗಳು

# ಸಂಕಷ್ಟಕ್ಕೆ ಸಿಲುಕಿದ 48 ಗ್ರಾಮಗಳು, ಮನೆ ಕಳೆದು ಕೊಂಡ 850 ಕುಟುಂಬ

# 20 ಜನ ಬಲಿ, ಪತ್ತೆಯಾಗದ ಇಬ್ಬರ ಶವ. 3500 ಜನ ಸಂತ್ರಸ್ಥರು

# ಸಂಪರ್ಕ ಕಳೆದುಕೊಂಡು ಗುರುತೇ ಇಲ್ಲದಂತಾದ ಹಲವು ಗ್ರಾಮಗಳು

# 10 ಸಾವಿರ ಕೋಟಿ ರೂ.ಆಸ್ತಿಪಾಸ್ತಿ ಹಾನಿ, 52 ಪರಿಹಾರ ಕೇಂದ್ರ ಸ್ಥಾಪನೆ

ಅಭಿವೃದ್ಧಿ ಯೋಜನೆಗಳ ಮೂಲಕ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶ ನಾಶ ಮಾಡಲಾಗುತ್ತಿದೆ. ಪಶ್ಚಿಮಘಟ್ಟ ನಾಶವಾದಲ್ಲಿ ವಿಶಾಲವಾದ ಭೌಗೋಳಿಕ ಪ್ರದೇಶದ ನೀರು ಮತ್ತು ಆಹಾರ ಭದ್ರತೆ ಮೇಲೆ ಪರಿಣಾಮ ಬೀರುತ್ತದೆ.

| ಟಿ.ವಿ.ರಾಮಚಂದ್ರ ವಿಜ್ಞಾನಿ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು