ಕೊಡಗು ನಿರ್ಮಾಣ ಪ್ರಾಧಿಕಾರ

ಮಡಿಕೇರಿ: ಪ್ರಕೃತಿವಿಕೋಪಕ್ಕೆ ತುತ್ತಾಗಿರುವ ಕೊಡಗಿನಲ್ಲಿ ಪರಿಹಾರ ಕ್ರಮಕ್ಕಾಗಿ ತಮ್ಮ ಅಧ್ಯಕ್ಷತೆಯಲ್ಲಿ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚಿಸಲಾಗುವುದು ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಘೊಷಿಸಿದ್ದಾರೆ.

ಜಿಲ್ಲಾಡಳಿತದಿಂದ ಗಾಂಧಿ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಂತ್ರಸ್ತರೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಪ್ರಾಧಿಕಾರ ರಚಿಸುವಂತೆ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಒಂದು ವಾರದಿಂದ ಹೇಳುತ್ತಿದ್ದಾರೆ. ಸಂವಾದದಲ್ಲಿ ಕೆಲವರು ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರಾಧಿಕಾರ ರಚಿಸುವುದಾಗಿ ಪ್ರಕಟಿಸಿದರು.

ಎನ್​ಡಿಆರ್​ಎಫ್, ಎಸ್​ಜಿಆರ್​ಎಫ್ ಮಾರ್ಗಸೂಚಿ ಅನ್ವಯ ಪರಿಹಾರ ನೀಡಿದರೆ ಸಾಲದೆಂಬ ಕಾರಣಕ್ಕಾಗಿ ಮಾರ್ಗಸೂಚಿ ಬದಿಗಿಟ್ಟು ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ನಿರ್ಧರಿಸಬೇಕಾಗಿದೆ. ಸಂತ್ರಸ್ತರ ಮಕ್ಕಳ 1 ವರ್ಷದ ವಿದ್ಯಾಭ್ಯಾಸ ವೆಚ್ಚ ಸರ್ಕಾರ ಭರಿಸುತ್ತದೆ. ಹಾನಿಗೀಡಾಗಿರುವ ವಿದ್ಯಾಸಂಸ್ಥೆ ಕಟ್ಟಡ ಕಟ್ಟಲಾಗುವುದು.

ಸರ್ಕಾರದ ಖಜಾನೆಯಿಂದ ಮೊದಲ ಹಂತದ ಪರಿಹಾರಕ್ಕಾಗಿ 122 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ 75 ಕೋಟಿ ರೂ. ಸಂಗ್ರಹವಾಗಿದೆ. 25 ಕೋಟಿ ರೂ. ನೀಡುವುದಾಗಿ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಘೊಷಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರು 1 ದಿನದ ವೇತನ ನೀಡಲು ಒಪ್ಪಿದ್ದು, 100 ಕೋಟಿ ರೂ. ಬರಬೇಕಾಗಿದ್ದು, ಒಟ್ಟು 200 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ.

ಸಿಎಂ ಪರಿಹಾರ ನಿಧಿ ಖಾತೆಗೆ ಜಮಾ ಆಗುವ ಹಣ ಪೂರ್ಣ ಪ್ರಮಾಣದಲ್ಲಿ ಕೊಡಗಿಗೆ ವಿನಿಯೋಜಿಸಲಾಗುವುದು. 1 ಪೈಸೆ ಕೂಡ ದುರುಪಯೋಗಕ್ಕೆ ಆಸ್ಪದ ನೀಡುವುದಿಲ್ಲ ಎಂದು ಭರವಸೆ ನೀಡಿದರು.

6 ಲಕ್ಷದಲ್ಲಿ ಮನೆ ನಿರ್ಮಾಣ: ಮನೆ ಕಳೆದುಕೊಂಡಿರುವ 800 ಸಂತ್ರಸ್ತರಿಗೆ ತಲಾ 6 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿಕೊಡಲಾಗುವುದು. ಮನೆ ಕಟ್ಟಲು 10 ತಿಂಗಳು ಬೇಕಾಗಿದ್ದು, ಅಲ್ಲಿಯವರೆಗೂ ಮಾಸಿಕ 10 ಸಾವಿರ ರೂ. ಬಾಡಿಗೆ ಹಣ ನೀಡಲಾಗುವುದು. ಮನೆ ಸಾಮಗ್ರಿ ಕಳೆದುಕೊಂಡಿರುವ ಪ್ರತಿ ಸಂತ್ರಸ್ತರ ಖಾತೆಗೆ 50 ಸಾವಿರ ರೂ. ಜಮಾ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.

ಕಾಫಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್​ಗೆ 34 ಸಾವಿರ ರೂ. ಪರಿಹಾರ ಮೊತ್ತ ಏನೇನೂ ಸಾಲದು. ಅದಕ್ಕಾಗಿ ಮಾರ್ಗಸೂಚಿ ಮಾರ್ಪಡಿಸಿ ಸೂಕ್ತ ಪರಿಹಾರ ನೀಡಲು ಸರ್ಕಾರ ನಿರ್ಧರಿಸಲಿದೆ ಎಂದರು.

ಸಾಲಮನ್ನಾ ತಡೆಗೆ ಬಿಜೆಪಿ ಪಿತೂರಿ

ಸಾಲ ಮನ್ನಾ ಅನುಷ್ಠಾನಕ್ಕೆ ಬಾರದಂತೆ ಬಿಜೆಪಿ ನಾಯಕರು ಪಿತೂರಿ ಮಾಡಿದ್ದಾರೆ. ನಮ್ಮ ವೇಗಕ್ಕೆ ಬ್ಯಾಂಕ್​ಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಇದರ ಹಿಂದೆ ಲೋಕಸಭೆ ಚುನಾವಣೆವರೆಗೂ ಸಾಲ ಮನ್ನಾ ಆಗದಂತೆ ನೋಡಿಕೊಳ್ಳುವ ತಂತ್ರ ನಡೆದಿದೆ ಎಂದು ಸಿಎಂ ಕುಮಾರಸ್ವಾಮಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು. ನವೆಂಬರ್ 1 ರಿಂದ ಸಾಲ ಮನ್ನಾ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಅದಕ್ಕಾಗಿ 6 ಸಾವಿರ ಕೋಟಿ ರೂ. ಘೊಷಿಸಲಾಗಿದೆ ಎಂದರು. ಟಿಪ್ಪು ಜಯಂತಿ ಆಚರಿಸುವ ಬಗ್ಗೆ ಸರ್ಕಾರ ಇನ್ನೂ ನಿರ್ಧರಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿಎಂ ಅವಧಿ ದೇವರಿಗೆ ಬಿಟ್ಟದ್ದು

ದೇವರು ನೀಡಿದ ಅಧಿಕಾರದ ಬಗ್ಗೆ ದೇವರೇ ನಿರ್ಧರಿಸಲಿದ್ದಾರೆ. ನನಗೆ ದೇವರ ಮೇಲೆ ನಂಬಿಕೆ ಇದೆ ಎಂದು ಸಿಎಂ ಹೇಳಿದರು. ತಲಕಾವೇರಿ ಕ್ಷೇತ್ರಕ್ಕೆ ಸಿಎಂ ಭೇಟಿ ನೀಡಿದಲ್ಲಿ ಅಧಿಕಾರ ಹೋಗುತ್ತದೆ ಎಂದು ಮಾಧ್ಯಮಗಳಲ್ಲಿನ ವರದಿ ಗಮನಿಸಿದ್ದೇನೆ ಎನ್ನುತ್ತ ಕಾವೇರಿ ಮಾತೆ, ಚಾಮುಂಡೇಶ್ವರಿ ಕೃಪೆ ನಮ್ಮ ಮೇಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.