ಕೊಡಗಿನ ಗಾಯಕ್ಕೆ ಬರೆ

ಮಡಿಕೇರಿ/ಮಂಗಳೂರು: ಸ್ವರ್ಗ ಸದೃಶ ಕೊಡಗು, ದಕ್ಷಿಣ ಕನ್ನಡವನ್ನು ಸೂತಕದ ಮನೆಯಾಗಿಸಿರುವ ಭೀಕರ ಪ್ರವಾಹ, ಭೂ ಕುಸಿತದ ದುರಂತ ವಾಸಯೋಗ್ಯವಲ್ಲದ ಹಲವು ಪ್ರದೇಶಗಳನ್ನು ಸೃಷ್ಟಿಸಿರುವ ಕಳವಳಕಾರಿ ಸಂಗತಿ ಹೊರಬಿದ್ದಿದೆ. ಬುಧವಾರ ಎರಡೂ ಜಿಲ್ಲೆಗಳ ಹಲವೆಡೆ ನೆರೆಪೀಡಿತ ಪ್ರದೇಶಗಳನ್ನು ವೀಕ್ಷಿಸಿದ ಇಸ್ರೋ ಹಾಗೂ ಕೇಂದ್ರ ವಿಜ್ಞಾನಿಗಳ ತಂಡ ಇಂಥದ್ದೊಂದು ಗಂಭೀರ ಎಚ್ಚರಿಕೆಯನ್ನೊಳಗೊಂಡ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಿರುವುದು ಸಂತ್ರಸ್ತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ವರದಿಯಲ್ಲೇನಿದೆ?: ವಿಜ್ಞಾನಿಗಳು ಜೋಡುಪಾಲ, ಅರೆಕಲ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಟ್ಟ, ಗುಡ್ಡ ಪ್ರದೇಶಗಳಲ್ಲಿ ನೀರು ಇಂಗಿ ಸ್ಪೋಟದ ಮೂಲಕ ಹೊರಬಂದಿದೆ. ತೀವ್ರ ಮಳೆಯಿಂದಾಗಿಯೇ ಇಂತಹ ಪರಿಸ್ಥಿತಿ ನಿರ್ವಣವಾಗಿದೆ. ಪ್ರಕೃತಿ ವಿಕೋಪಕ್ಕೆ ಪ್ರಕೃತಿಯಲ್ಲಿ ಸಹಜವಾಗಿ ನಡೆಯುವ ವಿದ್ಯಮಾನಗಳೊಂದಿಗೆ ಮಾನವನ ಕೃತ್ಯಗಳೂ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಹಿಂದಿನಂತೆ ಮಳೆ ಬೀಳುವ ಸಾಧ್ಯತೆ ಇಲ್ಲವಾದರೂ ಈ ಪ್ರದೇಶಗಳಲ್ಲಿ ಮತ್ತೆ ಭೂಕುಸಿತವಾಗಬಹುದು.

ಮದೆನಾಡು, ಜೋಡುಪಾಲ, ಅರೆಕಲ್ ಸೇರಿದಂತೆ ಹಲವು ಪ್ರದೇಶಗಳು ವಾಸಕ್ಕೆ ಯೋಗ್ಯವಾಗಿಲ್ಲ ಎಂಬ ಅಂಶವನ್ನು ಸಹ ಇಸ್ರೋ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.

ಱಪ್ರಸ್ತುತ ಪ್ರಾಥಮಿಕ ವರದಿಯನ್ನಷ್ಟೇ ನೀಡುತ್ತೇವೆ. ಇನ್ನೊಂದು ತಂಡ ಬಂದು ಪೂರ್ಣ ಪರಿಶೀಲನೆ ನಡೆಸಲಿದ್ದು, ಸಮಗ್ರ ಅಧ್ಯಯನದ ಬಳಿಕ ಅಂತಿಮ ವರದಿ ನೀಡುತ್ತೇವೆ’ ಎಂದು ವಿಜ್ಞಾನಿಗಳು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಕೇರಳದಲ್ಲೂ ಸಮೀಕ್ಷೆ

ಇಸ್ರೊ ವಿಜ್ಞಾನಿಗಳ ತಂಡ ಕೇರಳದಲ್ಲೂ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿದೆ.

ಭೂ ವಿಜ್ಞಾನಿಗಳ ಅಧ್ಯಯನ

ಬುಧವಾರ ಹೈದರಾಬಾದ್​ನಿಂದ ಆಗಮಿಸಿದ ತಜ್ಞರ ಮತ್ತೊಂದು ತಂಡ (ಎನ್​ಜಿಆರ್​ಐ) ಕೊಡಗಿನ ವಿವಿಧೆಡೆಯಲ್ಲಿ ಸಂಭವಿಸಿರುವ ಬೆಟ್ಟ, ಗುಡ್ಡ ಕುಸಿತಕ್ಕೆ ಕಾರಣವಾದ ಅಂಶಗಳ ಪತ್ತೆಗೆ ಮುಂದಾಗಿದೆ. ಭೂ ವಿಜ್ಞಾನಿ ರಾಘವನ್ ನೇತೃತ್ವದ ಮೂವರು ವಿಜ್ಞಾನಿಗಳ ತಂಡವು ಭೂಕುಸಿತಕ್ಕೆ ಒಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ನಂತರ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಸೆಸ್ಮೋ ಗ್ರಾಫ್ ಅಳವಡಿಸಿ, ಭೂ ಕುಸಿತದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.


ತಂಬಲಗೇರಿಯಲ್ಲಿ ಭೂ ಕುಸಿತ

ಸಕಲೇಶಪುರ: ತಾಲೂಕಿನ ಯಸಳೂರು ಹೋಬಳಿ ವ್ಯಾಪ್ತಿಯ ತಂಬಲಗೇರಿ ಗ್ರಾಮದಲ್ಲಿ ಬುಧವಾರ ಭೂ ಕುಸಿತ ಸಂಭವಿಸಿದ್ದು, ಮನೆ ಬಿರುಕು ಬಿಟ್ಟಿದ್ದರಿಂದ ನಾಲ್ಕು ಕುಟುಂಬಗಳು ಗ್ರಾಮ ತೊರೆದಿವೆ. ಕೊಡಗು ಜಿಲ್ಲೆಯಲ್ಲಿ ಭಾರಿ ಭೂ ಕುಸಿತ ಸಂಭವಿಸಿ 150 ಕುಟುಂಬಗಳು ಸ್ಥಳಾಂತರಗೊಂಡಿರುವ ಕೂತಿ ಗ್ರಾಮದ ಭತ್ತದ ರಾಶಿ ಗಿರಿಧಾಮದಿಂದ ಕೇವಲ 3 ಕಿಮೀ ದೂರದಲ್ಲಿರುವ ತಂಬಲಿಗೇರಿಯಲ್ಲಿ ಮಂಗಳವಾರ ರಾತ್ರಿ ವಿಚಿತ್ರವಾದ ಶಬ್ದ ಕೇಳಿ ಬಂದಿದ್ದು ಗ್ರಾಮಸ್ಥರು ಭಯಭೀತರಾಗಿದ್ದರು. ಬುಧವಾರ ಬೆಳಗ್ಗೆ ನೋಡಿದಾಗ ಊರಿನಲ್ಲಿ ಭೂಮಿ ಬಿರುಕು ಬಿಟ್ಟಿರುವುದಲ್ಲದೆ ಭೂ ಕುಸಿತ ಸಂಭವಿಸಿರುವುದು ಜನರ ಆತಂಕ ದುಪ್ಪಟ್ಟಾಗಿಸಿದೆ.

ತಂಬಲಗೇರಿ ಗ್ರಾಮದಲ್ಲಿ ಭೂಕುಸಿತದ ಸೂಚನೆ ಸಿಕ್ಕಿದ್ದು, ನದಿ ಭಾಗದ ಗುರನಹಳ್ಳಿಯಲ್ಲಿ ಮನೆ ಕುಸಿತವಾಗಿದೆ. ಅಧಿಕಾರಿಗಳು ಇತ್ತ ಗಮನ ಹರಿಸಬೇಕು.

-ಹೊನ್ನಪ್ಪ, ಸ್ಥಳೀಯ

ಬುಧವಾರದಿಂದ ಸಕಲೇಶಪುರ ತಾಲೂಕಿನ ಮಳೆ ಹಾನಿ ಪ್ರದೇಶದಲ್ಲಿ ಸಮೀಕ್ಷೆ ಆರಂಭವಾಗಲಿದೆ. ತಂಬಲಗೇರಿಗೂ ಭೇಟಿ ನೀಡಿ ಪರಿಶೀಲಿಸಲಾಗುವುದು.

-ಲಕ್ಷ್ಮೀಕಾಂತ್ ರೆಡ್ಡಿ, ಉಪವಿಭಾಗಾಧಿಕಾರಿ, ಸಕಲೇಶಪುರ

 


ಭೂಕಂಪ ಅಲ್ಲ, ಪದರ ಕುಸಿತ

ಮಂಗಳೂರು: ದಕ್ಷಿಣ ಕನ್ನಡದ ಹಲವೆಡೆ ಉಂಟಾಗಿರುವ ಭೂಕುಸಿತಕ್ಕೂ ಜಲ ಸ್ಪೋಟವೇ ಕಾರಣ ಎಂದು ಕೇಂದ್ರದ ಭಾರತೀಯ ಭೂಸರ್ವೆಕ್ಷಣಾಲಯದ ವಿಜ್ಞಾನಿಗಳು ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ. ಜಲಪ್ರಳಯದಿಂದಾಗಿ ಥರಗುಟ್ಟಿರುವ ಕೊಡಗು-ದ.ಕ. ಗಡಿಭಾಗದ ಜೋಡುಪಾಲ, ಅರೆಕಲ್ಲು ಭಾಗಗಳಿಗೆ ಬುಧವಾರ ಭೇಟಿ ಕೊಟ್ಟಿದ್ದ ತಜ್ಞರು ಪ್ರಾಥಮಿಕ ಸಮೀಕ್ಷೆ ನಡೆಸಿದರು.

ಜೋಡುಪಾಲದಲ್ಲಿ ಕೊಚ್ಚಿ ಹೋಗಿರುವ ಮನೆಗಳ ಪ್ರದೇಶ ಹಾಗೂ ಅದಕ್ಕಿಂತ ಮೇಲ್ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿತವಾದ ಕಡೆಗಳಿಗೆ ತೆರಳಿ ಭೂಕುಸಿತದ ಕಾರಣಗಳ ವಿಶ್ಲೇಷಣೆ ನಡೆಸಿದರು.

ಜೋಡುಪಾಲದಲ್ಲಿ ಪರಿಶೀಲನೆ ನಡೆಸಿದ ಬಳಿಕ ಸಂಪಾಜೆ ಸಮೀಪದ ಅರೇಕಲ್ಲಿಗೂ ತೆರಳಿ ಅಲ್ಲಿ ಗುಡ್ಡ ಜರಿದಿರುವುದರ ವೀಕ್ಷಣೆ ನಡೆಸಿದರು. ಜೋಡುಪಾಲದಲ್ಲಿ ಸ್ಥಳೀಯರು ಇರಲಿಲ್ಲ. ಅರೇಕಲ್ಲಿನಲ್ಲಿದ್ದ ಸ್ಥಳೀಯರು ವಿಕೋಪದ ಬಗ್ಗೆ ವಿವರಣೆ ನೀಡಿದರು.

*ಹಲವು ಜಾಗ ವಾಸಕ್ಕೆ ಅಯೋಗ್ಯ

ತಜ್ಞರು ಹಲವು ಕಡೆಗಳಿಗೆ ಭೇಟಿ ನೀಡಿದ್ದು, ದೇವರಕೊಲ್ಲಿ ಸಹಿತ ಕೆಲವು ಜಾಗಗಳು ಜನರ ವಸತಿಗೆ ಅಡ್ಡಿಯೇನಿಲ್ಲ. ಆದರೆ ಅರೆಕಲ್ಲಿನಂತಹ ಕಡೆಗಳಲ್ಲಿ ಮಳೆ ತೀವ್ರಗೊಂಡರೆ ಭೂಮಿ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಹಾಗಾಗಿ ಜನವಸತಿ ಅಸಾಧ್ಯ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.


ಸಾವಿರ ಕೋಟಿ ನಷ್ಟ

ಮಡಿಕೇರಿ: ಪ್ರಕೃತಿ ವಿಕೋಪದಿಂದ ಕೊಡಗಿನಲ್ಲಿ 1 ಸಾವಿರ ಕೋಟಿ ರೂ. ನಷ್ಟವಾಗಿರುವ ಮಾಹಿತಿ ಮೇಲ್ನೋಟಕ್ಕೆ ಲಭ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹೇಳಿದ್ದಾರೆ. ಮಳೆ ನಿಂತ ಬಳಿಕ ನಷ್ಟದ ಬಗ್ಗೆ ಸಮಗ್ರ ಮಾಹಿತಿ ಪಡೆಯಲಾಗುವುದು. ಆ.24 ರಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಅವರು ಬಂದಲ್ಲಿ ಕೇಂದ್ರ ಸರ್ಕಾರದಿಂದ ಆಗಬೇಕಾಗಿರುವ ಕೆಲಸ ಕಾರ್ಯಗಳ ಬಗ್ಗೆ ಗಮನ ಸೆಳೆಯಲಾಗುವುದು ಎಂದರು.


ಕೇರಳದಲ್ಲೀಗ ಸಮಸ್ಯೆಗಳ ಸಾಲು

ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎಂಬಂತೆ ಈಗಷ್ಟೇ ಪ್ರವಾಹದಿಂದ ಚೇತರಿಸಿಕೊಳ್ಳುತ್ತಿರುವ ಕೇರಳದಲ್ಲೀಗ ಸಮಸ್ಯೆಗಳು ಸಾಲು ಸಾಲು ಸಾಲಾಗಿ ಎದುರಾಗುತ್ತಿವೆ. ರಾಜ್ಯದ ಹಲವೆಡೆ ಜಲಾವೃತ ಪ್ರದೇಶಗಳು ಸಹಜ ಸ್ಥಿತಿಗೆ ಬಂದ ಬಳಿಕ ಪಡಿತರ, ಮೊಬೈಲ್ ರೀಚಾರ್ಜ್, ಪೆಟ್ರೋಲ್​ಗಾಗಿ ಜನತೆ ಮುಗಿಬೀಳುತ್ತಿದ್ದಾರೆ. ಕೆಲವೆಡೆ ಅಂಗಡಿಗಳು ಒಂದೇ ದಿನದಲ್ಲಿ ಖಾಲಿಯಾಗಿವೆೆ. ರಸ್ತೆಗಳು ಇನ್ನೂ ಅಸ್ತವ್ಯಸ್ತವಾಗಿರುವುದರಿಂದ ಸಾಮಗ್ರಿ ಪೂರೈಕೆ ವ್ಯತ್ಯಯವಾಗಿದೆ. ಇನ್ನೊಂದು ವಾರದಲ್ಲಿ ಪರಿಸ್ಥಿತಿ ಸುಧಾರಿಸಬಹುದೆಂದು ಅಂದಾಜಿಸಲಾಗಿದೆ.

ಶಾಶ್ವತ ಪರಿಹಾರ ಸಾಧ್ಯವಿಲ್ಲ

ಕೊಡಗು ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಗೆ ಶಾಶ್ವತ ಪರಿಹಾರ ಸಾಧ್ಯವಿಲ್ಲ ಎಂದು ಹೈದರಾಬಾದ್​ನಿಂದ ಆಗಮಿಸಿರುವ ಭೂಗರ್ಭ ವಿಜ್ಞಾನಿ ಎಚ್.ಎಸ್.ಪ್ರಕಾಶ್ ತಿಳಿಸಿದ್ದಾರೆ. ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಸಮಗ್ರ ಅಧ್ಯಯನ ಮಾಡಿದ ಬಳಿಕವೇ ಭೂಕುಸಿತ, ಪ್ರಕೃತಿ ವಿಕೋಪಕ್ಕೆ ನಿಖರ ಕಾರಣ ಏನೆಂದು ಹೇಳಬಹುದು ಎಂದು ಸ್ಪಷ್ಟಪಡಿಸಿದರು.