ಸೋಮವಾರಪೇಟೆ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ನಿರ್ಧಾರ ಕೈಗೊಂಡರೆ ಕೊಡಗು ಬಂದ್ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಘಟಕ ಎಚ್ಚರಿಸಿದೆ.
ಕೊಡಗು ಗುಡ್ಡಗಾಡು ಪ್ರದೇಶ, ಮಧ್ಯಮ, ಬಡ, ಕೂಲಿ ಕಾರ್ಮಿಕರ ಮಕ್ಕಳಿಗೆ ಹತ್ತಿರದಲ್ಲೇ ಉನ್ನತ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಅಂದಿನ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಅವರ ಶ್ರಮದಿಂದ ಚಿಕ್ಕಅಳವಾರ ಗ್ರಾಮದಲ್ಲಿ ಕೊಡಗು ವಿವಿ ಪ್ರಾರಂಭಿಸಲಾಗಿತ್ತು. ಆದರೆ ಪಂಚ ಗ್ಯಾರಂಟಿಗಳಿಂದ ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರ, ಕೊಡಗಿನಲ್ಲಿ ವಿಶ್ವವಿದ್ಯಾಲಯವನ್ನು ಮುಚ್ಚುವ ಹಂತಕ್ಕೆ ತಲುಪಿರುವುದು ಖಂಡನೀಯ ಎಂದು ಜಿಲ್ಲಾ ಬಿಜೆಪಿ ಕೃಷಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶರತ್‌ಚಂದ್ರ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ವಿಶ್ವವಿದ್ಯಾಲಯ ಕೊಡಗಿನ ಜನರ ಕನಸು.ಅನೇಕ ವಿದ್ಯಾರ್ಥಿಗಳು ಇದೇ ಸಂಸ್ಥೆಯಲ್ಲಿ ಉನ್ನತ ಶಿಕ್ಷಣ ಪೂರೈಸಿದ್ದಾರೆ. ಪ್ರಸಕ್ತ ವರ್ಷವೂ ಅನೇಕರು ಪ್ರವೇಶಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲೇ ಮುಚ್ಚುವ ಪ್ರಸ್ತಾಪ ಬಂದಿರುವುದು ನೋವಿನ ಸಂಗತಿ ಎಂದು ಹೇಳಿದರು.
ಪಕ್ಷದ ತಾಲೂಕು ಕಾರ್ಯದರ್ಶಿ ಎಸ್.ಆರ್.ಸೋಮೇಶ್ ಮಾತನಾಡಿ, ಜನರ ತೆರಿಗೆ ಹಣವನ್ನು ಅಲ್ಪಭಾಗವನ್ನು ಶಿಕ್ಷಣಕ್ಕಾಗಿ ಮೀಸಲಿಡಬೇಕು. ಇಡೀ ಹಣವನ್ನು ಉಚಿತ ಯೋಜನೆಗಳಿಗೆ ಕೊಟ್ಟು, ಅನುದಾನ ಕೊಡದೆ ವಿಶ್ವವಿದ್ಯಾಲಯ ಮುಚ್ಚುವ ಪ್ರಯತ್ನಕ್ಕೆ ಕೈಹಾಕಿದರೆ, ಕೊಡಗಿನ ಎಲ್ಲ ಸಂಘ, ಸಂಸ್ಥೆಗಳ ಸಹಕಾರದಿಂದ ರಾಜಕೀಯ ರಹಿತ ಹೋರಾಟ ಹಮ್ಮಿಕೊಳ್ಳಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿನ ಮೇಲೆ ದ್ವೇಷದ ರಾಜಕಾರಣವನ್ನು ಮುಂದುವರಿಸಿದ್ದಾರೆ. ದೇಶದ ಭದ್ರತೆಗೆ ಸೇನಾನಿಗಳನ್ನು ಕೊಟ್ಟ ಕೊಡಗಿನ ಬಗ್ಗೆ ದ್ವೇಷದ ರಾಜಕಾರಣ ಮಾಡಿದರೆ, ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಯಾವುದೇ ಕಾರಣಕ್ಕೂ ಕೊಡಗು ವಿಶ್ವವಿದ್ಯಾಲಯ ಮುಚ್ಚುವುದಕ್ಕೆ ಕೊಡಗಿನ ಶಾಸಕರು ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಕಿಬ್ಬೆಟ್ಟ ಮಧು, ಬಿ.ಆರ್.ಮಹೇಶ್ ಇದ್ದರು.