ಮಳೆ ಹಾನಿ ಪರಿಶೀಲಿಸಿದ ಸಂಸದ

ಅಂತರಸಂತೆ: ಕಬಿನಿ ಹಿನ್ನೀರು ನುಗ್ಗಿ ಮತ್ತು ಮಳೆಯಿಂದ ಹಾನಿಗೊಳಗಾದ ಡಿ.ಬಿ.ಕುಪ್ಪೆ ಗ್ರಾಪಂ ವ್ಯಾಪ್ತಿಯ ಹಲವಾರು ಗ್ರಾಮಗಳಿಗೆ ಸಂಸದ ಆರ್.ಧ್ರುವನಾರಾಯಣ್ ಮತ್ತು ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ ಪರಿಶೀಲಿಸಿದರು.
ಮಚ್ಚೂರು, ಆನೆಮಾಳ, ವಡಕನಮಾಳ, ಬಾವಲಿ ಮುಂತಾದ ಗ್ರಾಮಗಳಲ್ಲಿನ ಸಂತ್ರಸ್ತರ ಸಂಕಷ್ಟವನ್ನು ಆಲಿಸಿದ ಬಳಿಕ ಮಾತನಾಡಿದ ಧ್ರುವನಾರಾಯಣ್, ಸರ್ಕಾರ ಮತ್ತು ತಾಲೂಕು ಆಡಳಿತ ನಿಮ್ಮ ಬೆನ್ನ ಹಿಂದೆ ಇದೆ. ಸರ್ಕಾರದಿಂದ ಪರಿಹಾರ ಹಾಗೂ ಅಗತ್ಯ ಸವಲತ್ತು ಕೊಡಿಸುವುದಾಗಿ ಭರವಸೆ ನೀಡಿದರು.
ಡಿ.ಬಿ.ಕುಪ್ಪೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಭೆ ನಡೆಸಿ, ಸಂತ್ರಸ್ತರಿಮದ ಹಾನಿ ಮಾಹಿತಿ ಪಡೆದರು. ಮಳೆಯಿಂದ ಸುಮಾರು 20 ಮನೆಗಳು ನೆಲಕ್ಕುರುಳಿದ್ದು, 40ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ದಾಖಲೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರ ಗುರುತಿನ ಚೀಟಿ ಇನ್ನಿತರ ದಾಖಲೆಗಳನ್ನು ಶೀಘ್ರವಾಗಿ ಒದಗಿಸಿಕೊಡಿ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಆನೆ ಹಾವಳಿ ತಡೆಗೆ ಹಾಡಿ ಸುತ್ತಲೂ ತಂತಿ ಬೇಲಿ ಹಾಕಬೇಕು. ಇನ್ನು ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ ನಿರ್ಮಿಸಲು ತೊಂದರೆ ಕೊಡಬಾರದು ಎಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ 10 ದಿನಗಳ ಒಳಗೆ ಅಧಿಕಾರಿಗಳ ಸಭೆ ಕರೆಯಲಾಗುವುದು. ಆಗ ಪರಿಹಾರಕ್ಕೆ ಸಂಬಂಧಿಸಿದಂತೆ ಎಲ್ಲ ವರದಿಗಳನ್ನು ನೀಡಬೇಕು ಎಂದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, 109 ಮನೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂತ್ರಸ್ತರಿಗೆ ಹೊಸ ಮನೆ ನಿರ್ಮಾಣ ಮಾಡಿಕೊಡಬೇಕಾಗಿದೆ. ಇವರ ನೆರವಿಗೆ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ಉತ್ತಮ ಸಹಕಾರ ಕೊಟ್ಟಿದ್ದಾರೆ ಎಂದರು.
ಗ್ರಾ.ಪಂ. ಅಧ್ಯಕ್ಷ ತಿರುಪತಿ, ಸದಸ್ಯರಾದ ನಾರಾಯಣ, ವೆಂಕಟೇಗೌಡ, ನಾಗರಾಜ್, ದೇವಮ್ಮ, ಗ್ರೇಡ್-2 ತಹಸೀಲ್ದಾರ್ ಆನಂದ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶ್ರೀಕಂಠೇರಾಜೇ ಅರಸ್ ಹಾಜರಿದ್ದರು.