ಗೆಲ್ಲುವುದು ಸಾಧಕನ ಗುರುತು. ಆದರೆ ಬೇರೆಯವರು ಗೆಲ್ಲುವಂತೆ ಮಾಡುವುದು ನಾಯಕನ ಹೆಗ್ಗುರುತು. ಸಾಧಕರಷ್ಟೇ ಆದರೆ ಸಾಲದು. ನಾಯಕನಾಗಿ ದಾರಿ ತೋರಿ ಬಾಳುವುದೂ ಮುಖ್ಯ. ಅನುಭವ ಬದುಕನ್ನು ಬೆಳೆಸಿ, ಅರಳಿಸಿ, ಉಜ್ವಲಗೊಳಿಸುತ್ತದೆ.
ವಿಪತ್ತಿನ ಕಾಲದಲ್ಲೂ ಧರ್ಮವನ್ನು ಬಿಡದಿರುವವನು ನಿಜವಾದ ಧರ್ವತ್ಮನೆನಿಸಿಕೊಳ್ಳುತ್ತಾನೆ. ಸುಖ ಶಾಂತಿದಾಯಕ ಬದುಕಿಗೆ ಧರ್ಮಪಾಲನೆ, ಪೋಷಣೆ ಅವಶ್ಯವಾಗಿದೆ. ಒಳ್ಳೆಯದನ್ನು ಹುಡುಕಬೇಕು. ಹುಡುಕದೆಯೇ ಕೆಟ್ಟದ್ದು ಕಣ್ಣಿಗೆ ಬೀಳುತ್ತದೆ. ಒಳ್ಳೆಯದು ಕೆಟ್ಟದ್ದು ಜೊತೆಜೊತೆಯಾಗಿವೆ. ಒಳ್ಳೆಯದರ ಕಡೆಗೆ ಸಾಗುವುದೇ ಮನುಷ್ಯನ ಗುಣಧರ್ಮವಾಗಬೇಕು. ಮನುಷ್ಯ ಜೀವನದಲ್ಲಿ ಧನಕನಕ, ಸ್ಥಾನಮಾನ ಏನೆಲ್ಲ ಗಳಿಸಬಹುದು. ಅವು ಶಾಶ್ವತವಲ್ಲ ಮತ್ತು ನೆಮ್ಮದಿಯನ್ನು ಉಂಟುಮಾಡಲಾರವು. ಭೌತಿಕ ಸಂಪತ್ತಿನ ಜೊತೆಗೆ ಜ್ಞಾನಸಂಪತ್ತು ಗಳಿಸಿ ಬಾಳಿದರೆ ಜೀವನ ಸಾರ್ಥಕ.
ಬೀಗದ ಕೈ ಇಲ್ಲದ ಬೀಗಗಳನ್ನು ಯಾರೂ ತಯಾರಿಸುವುದಿಲ್ಲ. ಹಾಗೆಯೇ ಪರಿಹಾರವಿಲ್ಲದ ಸಮಸ್ಯೆಗಳು ಇಲ್ಲ. ಆದರೆ ಪರಿಹಾರ ಎಂಬ ಕೀಲಿಕೈಯನ್ನು ನಾವೆಂದಿಗೂ ಕಳೆದುಕೊಳ್ಳಬಾರದು. ಕಲಿಕಾಲದ ಕರಾಳ ದಿನಗಳು ಹೆಚ್ಚುತ್ತಿರುವುದು ಅಶಾಂತಿಗೆ ಕಾರಣ. ಸತ್ಯ, ಧರ್ಮ, ನ್ಯಾಯ, ನೀತಿ ಎತ್ತಿ ಹಿಡಿಯಬೇಕಾದವರೇ ಸ್ವಾರ್ಥಕ್ಕಾಗಿ ಕವಲುದಾರಿ ತುಳಿಯುತ್ತಿರುವುದು ಅಧಃಪತನದ ಸತ್ಯಸಂಗತಿ. ಹೊರಗಿನ ವೈರಿಗಳಿಗಿಂತ ಒಳಗಿರುವ ವೈರಿಗಳೇ ಹೆಚ್ಚಾಗಿ ಉತ್ಕೃಷ್ಟ ಸಂಸ್ಕೃತಿ-ಪರಂಪರೆ ಕೆಡಿಸುತ್ತಿರುವುದು ದುರ್ದೈವದ ವಿಚಾರ. ಕಾಲಜ್ಞಾನ ಬರೆದಿಟ್ಟ ಭೂಗರ್ಭಸಂಜಾತ ಜಗದ್ಗುರು ಶ್ರೀ ರುದ್ರಮುನಿ ಶಿವಾಚಾರ್ಯರ ಭವಿಷ್ಯವಾಣಿ ಸತ್ಯವಾಗಿ ಪರಿಣಮಿಸುತ್ತಿದೆ. ಜೊಳ್ಳು ಜೊಟ್ಟು ಹಾರಿ ಹೋಗಿ ಗಟ್ಟಿ ಕಾಳು ಉಳಿದಾವು. ರಾತ್ರಿ ಕಳೆದ ನಂತರ ಹಗಲು ಬರುವಂತೆ ದುಷ್ಟರ ದರ್ಪ ಅಡಗಿ ಸಜ್ಜನರ ಕಾಲ ಬಂದೇ ಬರುತ್ತದೆ ಎಂಬುದನ್ನು ಮರೆಯಕೂಡದು.