ಹಾಸನ: ನಗರದ ಮಹಾರಾಜ ಉದ್ಯಾನ ರಸ್ತೆಯ ಮಾವಿನಹಣ್ಣು ವ್ಯಾಪಾರಿಗಳಿಗೆ ರಾಸಾಯನಿಕ ಬಳಸದಂತೆ ಗುರುವಾರ ಅರಿವು ಮೂಡಿಸಲಾಯಿತು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ರಾಜಗೋಪಾಲ್, ಆಹಾರ ಸುರಕ್ಷತಾಧಿಕಾರಿ ಅಡಬಸವೇಗೌಡ ಅವರು ಬೆಳಗ್ಗೆ 6.30ಕ್ಕೆ ಸ್ಥಳಕ್ಕೆ ಭೇಟಿ ನೀಡಿ ಮಾವಿನ ಹಣ್ಣುಗಳನ್ನು ಪರಿಶೀಲಿಸಿ, ವ್ಯಾಪಾರಿಗಳಿಗೆ ತಿಳಿವಳಿಕೆ ನೀಡಿದರು.
ಮಾವಿನ ಹಣ್ಣಿಗೆ ರಾಸಾಯನಿಕ ಬಳಸುವುದು ಕಂಡುಬಂದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಅಧಿಕ ಲಾಭಕ್ಕಾಗಿ ಅಡ್ಡದಾರಿ ಹಿಡಿಯುವುದು ಬೇಡ. ರಾಸಾಯನಿಕ ಬಳಸುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ತಪ್ಪು ಸಾಬೀತಾದರೆ ಎರಡು ವರ್ಷ ಕಾರಾಗೃಹ ಶಿಕ್ಷೆ ಹಾಗೂ ದಂಡ ಪಾವತಿಸಬೇಕಾಗುತ್ತದೆ ಎಂದು ಡಿಎಚ್ಒ ಡಾ.ಕೆ.ಎಂ.ಸತೀಶ್ ಎಚ್ಚರಿಕೆ ನೀಡಿದರು.