ಸಮಸ್ಯೆಗಳ ಕೂಪವಾದ ವಸತಿ ಶಾಲೆ

ರವಿ ಸಾವಂದಿಪುರ ಕೆ.ಎಂ.ದೊಡ್ಡಿ
ಇಲ್ಲಿನ ಮಕ್ಕಳಿಗೆ ಸ್ನಾನಕ್ಕೆ ಮನೆಯಿಲ್ಲ. ಊಟಕ್ಕೆ ತರಕಾರಿಯಿಲ್ಲ. ಅಕ್ಕಿ, ಬೇಳೆಯನ್ನು ಸ್ವಚ್ಛಗೊಳಿಸುವುದಿಲ್ಲ. ರಾತ್ರಿ ಬಹಿರ್ದೆಸೆಗೆ ಮಕ್ಕಳ ಪರದಾಟ, ವಾರ್ಡನ್ ಬರೋದೆ ಇಲ್ಲ. ಹಾಗಂತ ಇದು ಅಪರಾಧ ಪ್ರಕರಣಗಳಲ್ಲಿ ಸಿಲುಕಿ ಶಿಕ್ಷೆಗೊಳಗಾಗಿರುವ ಮಕ್ಕಳಿರುವ ಬಾಲಮಂದಿರವಲ್ಲ.

ಕೆ.ಎಂ.ದೊಡ್ಡಿಯಲ್ಲಿ ವರ್ಷದ ಹಿಂದೆ ಆರಂಭವಾದ ಅಂಬೇಡ್ಕರ್ ವಸತಿ ಶಾಲೆ. ಬಾಡಿಗೆ ಮನೆಯಲ್ಲಿ ನಡೆಯುತ್ತಿದೆ. ಇಲ್ಲಿ 6, 7ನೇ ತರಗತಿಯ 50 ಹೆಣ್ಣುಮಕ್ಕಳು ಸೇರಿ 98 ವಿದ್ಯಾರ್ಥಿಗಳಿದ್ದಾರೆ. ವಿಪರ‌್ಯಾಸವೆಂದರೆ, ರಾತ್ರಿ ವೇಳೆ ಸೆಕ್ಯುರಿಟಿ ಹೊರತುಪಡಿಸಿದರೆ, ನಿಯಮಾನುಸಾರ ಇಲ್ಲಿ ಉಳಿಯಬೇಕಾದ ಯಾವ ಶಿಕ್ಷಕ, ಸಿಬ್ಬಂದಿಯೂ ಇರುವುದಿಲ್ಲ.

ಪ್ರಮುಖವಾಗಿ ವಾರ್ಡನ್ ಕೃಷ್ಣಕುಮಾರ್ ಇಲ್ಲಿಗೆ ಅಪರೂಪದ ಅತಿಥಿಯಂತಿದ್ದಾರೆ. ವಿದ್ಯಾರ್ಥಿಗಳಿಗೆ ವಾರಕ್ಕೆ 2 ದಿನ ಮೊಟ್ಟೆ, ಒಂದು ದಿನ ಮಾಂಸಾಹಾರ ನೀಡಬೇಕು. ಇಲ್ಲಿ 1 ಮೊಟ್ಟೆ, 15 ದಿನಕ್ಕೊಮ್ಮೆ ಮಾಂಸಹಾರ ನೀಡುತ್ತಾರೆ. ತರಕಾರಿ, ಕಾಳುಗಳನ್ನು ಕೇಳುವಂತಿಲ್ಲ.

ಜತೆಗೆ ಅಕ್ಕಿ, ಬೇಳೆಯನ್ನು ಸ್ವಚ್ಛಗೊಳಿಸುವ ಪದ್ಧತಿಯೇ ಇಲ್ಲಿಲ್ಲ. ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಹುಳುಗಳು ಸಿಕ್ಕಿ ವಾಂತಿ ಮಾಡಿಕೊಂಡಿದ್ದಾರೆ. ಕಲ್ಲು ಸಿಗುತ್ತವೆಂದು ಮಕ್ಕಳು ಭಯದಿಂದಲೇ ಊಟ ತಿನ್ನುವಂತಾಗಿದೆ ಎನ್ನುತ್ತಾರೆ ಪಾಲಕರು.

ಚಂದ್ರಿಕೆಗಳ ಮರೆಯಲ್ಲಿ ಸ್ನಾನ: ಇನ್ನೂ ವಸತಿ ಶಾಲೆಯ ವಿದ್ಯಾರ್ಥಿಗಳು ಸ್ನಾನ ಮಾಡಲು ಇಲ್ಲಿ ಒಂದೇ ಒಂದು ಸ್ನಾನದ ಮನೆಯಿದೆ. ಆದ್ದರಿಂದ ಒಟ್ಟಿಗೆ ಅಷ್ಟು ವಿದ್ಯಾರ್ಥಿಗಳು ಸ್ನಾನ ಮಾಡಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಚಂದ್ರಿಕೆಗಳಲ್ಲಿ (ರೇಷ್ಮೆ ಹುಳುಗಳು ಗೂಡು ಕಟ್ಟುವ ಸಾಧನ) ಮನೆಯ ರೀತಿ ನಿರ್ಮಿಸಿ, ದೊಡ್ಡ ಪಾತ್ರೆಯಲ್ಲಿ ನೀರನ್ನು ಕಾಯಿಸಿ, ಪ್ರತಿ ಮಕ್ಕಳ ಸ್ನಾನಕ್ಕೆ ಕೇವಲ 2 ಜಗ್ ನೀರನ್ನು ಕೊಡುತ್ತಾರೆಂದು ವಿದ್ಯಾರ್ಥಿಗಳು ಅಂಜಿಕೆಯಿಂದ ಹೇಳುತ್ತಾರೆ.

ಜತೆಗೆ ಒಂದು ಶೌಚಗೃಹ ಇಲ್ಲಿದೆ. ಅದನ್ನೇ ವಿದ್ಯಾರ್ಥಿಗಳು ಬಳಸಬೇಕಾಗಿದೆ. ಪರಿಣಾಮ ಒಮ್ಮೆ ಎಲ್ಲ ವಿದ್ಯಾರ್ಥಿಗಳಿಗೂ ಅಲರ್ಜಿ ಉಂಟಾಗಿ ಪರದಾಡುವಂತಾಗಿತ್ತು. ನಂತರ ನಾಲ್ಕು ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಆದರವು ಸುಸಜ್ಜಿತವಾಗಿಲ್ಲ. 3 ತಿಂಗಳಿಗೊಮ್ಮೆಯೂ ಶುಚಿಮಾಡಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.

ನೀರಿಗೆ ಸೇರುತ್ತಿದೆ ತ್ಯಾಜ್ಯ:  ಇಲ್ಲಿ ಅಡುಗೆಗೆ ಬಳಸುತ್ತಿರುವ ಬೋರ್‌ವೆಲ್ ನೀರಿಗೆ ತ್ಯಾಜ್ಯ ಸೇರುತ್ತಿದೆ. ನೀರು ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಕುಡಿಯಲು ಬೇರೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ, ಅಡುಗೆಗೆ ಅದೇ ನೀರನ್ನು ಬಳಸುತ್ತಿರುವುದು ಆತಂಕಕಾರಿಯಾಗಿದೆ.

ಜತೆಗೆ ಇಲ್ಲಿನ ವಾರ್ಡನ್ ರಾತ್ರಿ ಮನೆಗೆ ಹೋಗುವುದಕ್ಕಾಗಿ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಬೀಗ ಹಾಕುತ್ತಾರೆ. ಪರಿಣಾಮ ರಾತ್ರಿ ವೇಳೆ ವಿದ್ಯಾರ್ಥಿಗಳು ಮೂತ್ರ ವಿಸರ್ಜನೆ ಮಾಡಲು ಕಿಟಕಿ ಅವಲಂಬಿಸಬೇಕಾಗಿದೆ. ಹೆಣ್ಣು ಮಕ್ಕಳ ಪಾಡು ದೇವರಿಗೆ ಪ್ರೀತಿ.

ಈ ಎಲ್ಲ ಅವ್ಯವಸ್ಥೆಗಳ ವಿರುದ್ಧ ವಿದ್ಯಾರ್ಥಿಗಳ ಪಾಲಕರು ಶನಿವಾರ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ವಾರ್ಡನ್ ಜತೆ ನೀವು ಶಾಮೀಲಾಗಿದ್ದೀರಿ. ವಾರದೊಳಗೆ ಸರಿಹೋಗದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪಾಲಕರಾದ ವಿಕಾಸ್ ಬೋರೇಗೌಡ, ಶಿವು, ಆನಂದ್, ಸುನೀಲ್, ಮಹೇಶ್, ಮರಿದೇಶಿಗೌಡ, ಮನು ಮೊದಲಾದವರು ಎಚ್ಚರಿಸಿದ್ದಾರೆ.

5 ದಿನ ಮಾತ್ರ ಶಾಲೆ: ಸಾಮಾನ್ಯವಾಗಿ ಎಲ್ಲ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಮನೆಗೆ ಕಳಿಸುವುದು ಹಬ್ಬ ಹರಿದಿನಗಳಲ್ಲಿ ಹಾಗೂ ನಿಗದಿತ ರಜೆಗಳಂದು. ಆದರೆ, ಇಲ್ಲಿ ಪ್ರತಿ ಶನಿವಾರ ಮಕ್ಕಳನ್ನ ಮನೆಗೆ ಕಳಿಸುತ್ತಾರೆ. ಮತ್ತೆ ಮಕ್ಕಳು ಸೋಮವಾರ ಬೆಳಗ್ಗೆ ವಾಪಸಾಗಬೇಕು.

ವಿಪರ‌್ಯಾಸವೆಂದರೆ ಜ.12ರಂದು ಮನೆಗೆ ಬಂದ ಮಕ್ಕಳನ್ನು ಶಾಲೆಗೆ ಮರಳಿದ್ದು, ಜ.16ರಂದು ಸಂಕ್ರಾಂತಿ ಹಬ್ಬ ಮುಗಿಸಿಕೊಂಡು. ಇದು ಶಾಲೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಜತೆಗೆ ಇಲ್ಲಿ ಎಲ್ಲ ಕೆಲಸಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸಬೇಕಾಗಿದೆ.