ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ ಶಿಕ್ಷಣ, ಆರೋಗ್ಯ ಸೇವೆ ಮತ್ತು ಸಂಶೋಧನೆ ವಿಷಯವಾಗಿ ಅಮೆರಿಕದ ಸದರ್ನ್ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಗುರುವಾರ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯಕ್ಕೆ ಆಗಮಿಸಿದ್ದ ಸದರ್ನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಆಯುರ್ವೇದ ಮೆಡಿಸಿನ್ ನಿರ್ದೇಶಕಿ ಡಾ. ಅನುಪಮಾ ಕಿಜಕ್ಕೆವೀಟಿಲ್ ಮತ್ತು ತಜ್ಞರ ತಂಡದೊಂದಿಗೆ ಕಾಹೆರ್ ಉಪಕುಲಪತಿ ಡಾ. ನಿತಿನ್ ಗಂಗಾನೆ, ಕುಲಸಚಿವ ಡಾ. ಎಂ.ಎಸ್. ಗಣಾಚಾರಿ, ಕಂಕಣವಾಡಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಸುಹಾಸಕುಮಾರ್ ಶೆಟ್ಟಿ ಮತ್ತು ಅಧಿಕಾರಿಗಳ ತಂಡ ಒಂಡಬಡಿಕೆಗೆ ಸಹಿ ಹಾಕಿದರು.
ಡಾ. ನಿತಿನ್ ಗಂಗಾನೆ ಮಾತನಾಡಿ, ಕೆಎಲ್‌ಇ ಸಂಸ್ಥೆಯ ಸೇವೆಗಳು ಸಾಗರೋತ್ತರವಾಗಿ ಬೆಳೆದು ಜನಸಾಮಾನ್ಯರ ಜೀವನ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎನ್ನುವ ಡಾ.ಪ್ರಭಾಕರ ಕೋರೆ ಅವರ ಆಶಯದಂತೆ ಒಂಡಂಬಡಿಕೆಯಂತಹ ವಿನೂತನ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮತ್ತು ಆರೋಗ್ಯ ಸೇವೆಗಳ ವಿಸ್ತರಣೆಗೆ ಅನುಕೂಲವಾಗಲಿದೆ ಎಂದರು. ಯೋಜನಾ ಸಂಯೋಜಕರಾದ ಡಾ.ಶ್ರುತಿಕಾ ಕರೋಶಿ, ಡಾ. ಸ್ವರ್ಧಾ ಉಪ್ಪಿನ ಇತರರು ಇದ್ದರು.