ಮೋದಿ ಭಾವಚಿತ್ರ ದಹಿಸಿ ಆಕ್ರೋಶ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 500 ಮತ್ತು 1000 ರೂ. ಮುಖಬೆಲೆ ನೋಟುಗಳನ್ನು ರದ್ದುಗೊಳಿಸಿದ ಎರಡನೇ ವರ್ಷದ ಕರಾಳ ದಿನದ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಬಳಿಕ ಕೇಂದ್ರ ಸರ್ಕಾರದ ಭೂತ ದಹಿಸಿ, ಮೋದಿ ಭಾವಚಿತ್ರಕ್ಕೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು. 2016ರ ನ.8ರಂದು ಪ್ರಧಾನಿ ನರೇಂದ್ರ ಮೋದಿ ಏಕಪಕ್ಷೀಯವಾಗಿ ನೋಟುಗಳನ್ನು ಅಮಾನ್ಯೀಕರಣಗೊಳಿಸಿದ್ದರಿಂದ ವಿಶ್ವದ ಅಭಿವೃದ್ಧಿಶೀಲ ಬ್ಯಾಂಕುಗಳ ಪಟ್ಟಿಯಿಂದ ಭಾರತವನ್ನು ಹೊರಹಾಕಲಾಯಿತು. ದೇಶದ ಆರ್ಥಿಕ ಸ್ಥಿತಿ ಅಲ್ಲೋಲ ಕಲ್ಲೋಲವಾಗಿ ಶೇ.5 ಆರ್ಥಿಕ ಬೆಳವಣಿಗೆ ದರ ಕುಸಿಯಿತು. ಸಣ್ಣಪುಟ್ಟ ವ್ಯಾಪಾರಿಗಳು ದಿವಾಳಿಯಾದರು ಎಂದು ಆರೋಪಿಸಿದರು. ಚೋರ್ ಹೈ ಚೋರ್ ಎಂದು ಘೋಷಣೆ ಕೂಗಿದರು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಈರಣ್ಣ ಪಾಟೀಲ್ ಝಳಕಿ, ರಾಜ್ಯ ವಕ್ತಾರ ಚೇತನಕುಮಾರ ಗೋನಾಯಕ, ಮುಖಂಡರಾದ ರಾಜೀವ್ ಜಾನೆ, ಪ್ರಶಾಂತ ಪಾಟೀಲ್ ಮಾಹೂರ, ಅಮರ ಶಿರವಾಳ, ಶಕೀಲ್ ಸರಡಗಿ, ಕಾರ್ತಿಕ್ ನಾಟೀಕಾರ, ಶಿವಾನಂದ ಹೊನಗುಂಟಿ, ಭವಾನಿ, ಓಯೇಜ್ ಬಾಬಾ, ಅರುಣ್ ಎಸ್., ಹಣಮಂತ ಚೂರಿ, ವಿಶಾಲ್ ಪಾಟೀಲ್, ಭೀಮು, ಕಿಶೋರ ಕಟ್ಟಿ, ಮಹೇಂದ್ರ ಕೊಲ್ಲೂರ, ಕೃಷ್ಣ ಹಾಬಾಳಕರ್, ಅವಿನಾಶ ಇತರರಿದ್ದರು.