ಬೌಲಿಂಗ್ನಲ್ಲಿ ಮಿಂಚಿದ ಕಲಬುರಗಿ ಹುಡುಗ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಿಂದ ಆಯೋಜಿಸಿರುವ ಅಂಡರ್-16 ವಿಜಯ ಮರ್ಚಂಟ್ ಟ್ರೋಫಿ- 2018-19ರಲ್ಲಿ ಕರ್ನಾಟಕ ತಂಡ ಪ್ರತಿನಿಧಿಸುತ್ತಿರುವ ನಗರದ ಯುವ ಪ್ರತಿಭೆ ಶಶಿಕುಮಾರ ಕಾಂಬ್ಳೆ ಆಡಿದ 4 ಪಂದ್ಯಗಳಲ್ಲಿ 19 ವಿಕೆಟ್ ಪಡೆಯುವ ಮೂಲಕ ಭರ್ಜರಿ ಬೌಲಿಂಗ್ನೊಂದಿಗೆ ರಾಷ್ಟ್ರದ ಗಮನ ಸೆಳೆದಿದ್ದಾನೆ.

ಅ.21ರಂದು ತಮಿಳುನಾಡು ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 3 ವಿಕೆಟ್ ಪಡೆದಿದ್ದು, ಇಲ್ಲಿ ಕರ್ನಾಟಕ ಡ್ರಾ ಸಾಧಿಸುವಲ್ಲಿ ಶ್ರಮಿಸಿದ್ದಾನೆ. ಅ.27ರಂದು ನಡೆದ ಆಂಧ್ರದ ವಿರುದ್ಧ ನಡೆದ 2ನೇ ಪಂದ್ಯದಲ್ಲಿ 2 ವಿಕೆಟ್ ಪಡೆದರೆ, ನ.2ರಂದು ಹೈದರಾಬಾದ್ ವಿರುದ್ಧ ನಡೆದ 3ನೇ ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದ್ದಾನೆ.

ನ.12ರಂದು ಮಾರ್ಗೋವಾದಲ್ಲಿ ಆಯೋಜಿಸಿದ್ದ ಪಂದ್ಯದಲ್ಲಿ ಶಶಿಕುಮಾರ ಶ್ರೇಷ್ಠ ಸಾಧನೆ ಮಾಡಿದ್ದಾನೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ 78 ಓವರ್ನಲ್ಲಿ 5 ವಿಕೆಟ್ಗೆ 371 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಸ್ಮರಣ್ ಆರ್. (203 ರನ್) ಡಬ್ಬಲ್ ಸೆಂಚುರಿ ಬಾರಿಸಿದರೆ, ಚೈತನ್ಯ 74, ಸಂಜಯ ಕೃಷ್ಣಮೂರ್ತಿ 33 ರನ್ ಗಳಿಸಿದ್ದಾರೆ. ಗೋವಾ ಪರ ಬೌಲಿಂಗ್ನಲ್ಲಿ ಸುಜಯ್ ನಾಯ್ಕ 3, ಪ್ರದ್ನೇಶ್ ಗೌಂವಕರ್ 2 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್ ಆರಂಭಿಸಿದ ಗೋವಾ 64.4 ಓವರ್ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 164 ರನ್ಗಳಿಸಿ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿತು. ದೀಪ ಕಸ್ವಂಕರ್ 70, ಕೌಶಲ್ ಹತ್ತಂಗಡಿ 44 ರನ್ಗಳಿಸಿದರು. ಕರ್ನಾಟಕ ಪರ ಶಶಿಕುಮಾರ ಮಾರಕ ಬೌಲಿಂಗ್ ಮಾಡಿದರು. 22.4 ಓವರ್ ಬೌಲಿಂಗ್ ಮಾಡಿದ ಶಶಿ 8 ಓವರ್ ಮೇಡನ್ನೊಂದಿಗೆ ಕೇವಲ 46 ರನ್ ಬಿಟ್ಟು ಕೊಟ್ಟು 5 ವಿಕೆಟ್ ಪಡೆದು ಗಮನಸೆಳೆದಿದ್ದಾರೆ.

ಇನ್ನಿಂಗ್ಸ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಗೋವಾ ಪ್ರದ್ನೇಶ ಗೌಂವಕರ್ 33 ರನ್ ಹೊರತುಪಡಿಸಿ ಉಳಿದೆಲ್ಲ ಬ್ಯಾಟ್ಸ್ಮನ್ಗಳು ಕಳಪೆ ಪ್ರದರ್ಶನ ನೀಡಿದರು. ಈ ಮೂಲಕ ಗೋವಾ 53 ಓವರ್ನಲ್ಲಿ 97 ರನ್ಗಳಿಸಿ 110 ರನ್ಗಳೊಂದಿಗೆ ಸೋಲನುಭವಿಸಿತು. 2ನೇ ಇನ್ನಿಂಗ್ಸ್ನಲ್ಲಿ 15 ಓವರ್ ಬೌಲಿಂಗ್ ಮಾಡಿದ ಕರ್ನಾಟಕದ ಶಶಿಕುಮಾರ ಕಾಂಬ್ಳೆ 7 ಮೇಡನ್ನೊಂದಿಗೆ ಕೇವಲ 18 ರನ್ನೀಡಿ 5 ವಿಕೆಟ್ ಪಡೆದಿದ್ದಾನೆ.

ಕರ್ನಾಟಕ ತಂಡಕ್ಕೆ ಮುಂದೆ
ಪಾಂಡಿಚೇರಿ, ಕೇರಳ ಎದುರಾಳಿ
ಕರ್ನಾಟಕ ತಂಡ ಮುಂದೆ 18 ರಂದು ಪಾಂಡಿಚೇರಿ ಹಾಗೂ 24 ರಂದು ಕೇರಳ ಜತೆ ಪಂದ್ಯಗಳಾಡಲಿದೆ. ಈ ಪಂದ್ಯಗಳಲ್ಲು ಭರ್ಜರಿ ಪ್ರದರ್ಶನ ನೀಡುವ ಭರವಸೆ ಶಶಿಕುಮಾರ ಮೂಡಿಸಿದ್ದಾನೆ. ಕರ್ನಾಟಕ ತಂಡ ಸೌತ್ ಝೋನ್ ಪಟ್ಟಿಯಲ್ಲಿದೆ. ಇಲ್ಲಿವರೆಗೂ ಒಟ್ಟು 4 ಪಂದ್ಯಗಳನ್ನು ಆಡಿದ್ದು, 3 ಡ್ರಾ ಸಾಧಿಸಿದರೆ, ಒಂದರಲ್ಲಿ ಗೆಲುವು ಪಡೆದಿದೆ.