ಹೃದ್ರೋಗ ಹೆಚ್ಚಳಕ್ಕೆ ಬದಲಾದ ಆಹಾರ ಕಾರಣ

ಕಲಬುರಗಿ: ಹೃದ್ರೋಗಿಗಳ ಸಂಖ್ಯೆ ಕ್ರಮೇಣ ಹೆಚ್ಚಳಕ್ಕೆ ತೀವ್ರಗೊಳ್ಳುತ್ತಿರುವ ನಗರೀಕರಣ, ಬದಲಾದ ಆಹಾರ ಪದ್ಧತಿ, ಒತ್ತಡದ ಜೀವನವಲ್ಲದೆ ತರಕಾರಿ ಮತ್ತು ಹಣ್ಣು ಬಳಕೆ ಕಡಿಮೆಯಾಗಿ ಫಾಸ್ಟ್ ಫುಡ್ ಸೇವನೆ ಹೆಚ್ಚಾಗಿದ್ದೇ ಕಾರಣ ಎಂದು ನೋಯ್ಡಾದ ಕೈಲಾಶ ಹೃದ್ರೋಗ ಆಸ್ಪತ್ರೆ ಖ್ಯಾತ ತಜ್ಞ ಪದ್ಮಶ್ರೀ ಡಾ.ಡಿ.ಎಂ.ಗಂಭೀರ ಹೇಳಿದರು.

ವಿಶ್ವ ಹೃದಯ ದಿನ ನಿಮಿತ್ತ ಬಸವೇಶ್ವರ ಆಸ್ಪತ್ರೆಯಲ್ಲಿ ಶನಿವಾರ ಐಪಿಎ ಹಮ್ಮಿಕೊಂಡಿದ್ದ ಹೃದಯ ದಿನಾಚರಣೆ ಹಾಗೂ ನಿರಂತರ ವೈದ್ಯಕೀಯ ಕಾರ್ಯಾಗಾರ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದ ಅವರು, ತರಕಾರಿ, ಹಣ್ಣುಗಳಿಂದ ಬೀಟಾ ಮತ್ತು ಆ್ಯಂಟಿ ಆಕ್ಸಿಡಂಟ್ಸ್ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಸಿಗುವುದರಿಂದ ಹೃದಯ ಬಲಗೊಳ್ಳುತ್ತದೆ ಎಂದರು.

ಹಳ್ಳಿಗಳಲ್ಲೂ ನಗರೀಕರಣ ಸಂಸ್ಕೃತಿ ಬರುತ್ತಿದೆ. ಪರಿಸರ ಮಾಲಿನ್ಯ, ಶ್ರಮರಹಿತ ಕೆಲಸಗಳ ಜತೆಗೆ ಒತ್ತಡ ಇತ್ಯಾದಿಗಳ ಹತೋಟಿ ಮೀರಿದ್ದರಿಂದ ಹೆಚ್ಚಿನ ಜನರಲ್ಲಿ ಹೃದ್ರೋಗ ಕಾಣಿಸಿಕೊಳ್ಳುತ್ತಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ ಎಂದು ತಿಳಿಸಿದರು.

ಹೃದಯ ಚಿಕಿತ್ಸೆಯಲ್ಲಿ ಸಾಕಷ್ಟು ಸಂಶೋಧನೆಗಳು ಆಗಿದ್ದರಿಂದ ಕ್ಲಿಷ್ಟಕರ ಸ್ಥಿತಿಯಲ್ಲೂ ಎಂಜಿಯೋಪ್ಲಾಸ್ಟಿ ಮಾಡಬಹುದು. ಸ್ಟೆಂಟ್ ಅಳವಡಿಸಬಹುದು. ತಾವು 1986ರಲ್ಲಿ ಗರ್ಭಿಣಿಗೆ ಎಂಜಿಯೋಪ್ಲಾಸ್ಟಿ ಮಾಡಿ ಸ್ಟೆಂಟ್ ಹಾಕಿದ್ದು ವಿಶ್ವದಲ್ಲೇ ಎರಡನೇ ಪ್ರಕರಣ ಎಂದು ಸ್ಮರಿಸಿದರು. ಆದರೀಗ ಪರಿಸ್ಥಿತಿ ಬದಲಾಗಿದೆ. ಸಾಕಷ್ಟು ಅತ್ಯಾಧುನಿಕ ಸಲಕರಣೆ ಬಂದಿವೆ ಎಂದ ಅವರು, ವೈದ್ಯರು ಹಾಗೂ ವೈದ್ಯಕೀಯ ವಿದ್ಯಾಥರ್ಿಗಳ ಜತೆ ಸಂವಾದವನ್ನೂ ನಡೆಸಿದರು.

ಬಸವೇಶ್ವರ ಆಸ್ಪತ್ರೆ ಮತ್ತು ಎಂಆರ್ಎಂಸಿ ಡೀನ್ ಡಾ.ಎಸ್.ಆರ್.ಹರವಾಳ, ವೈದ್ಯಕೀಯ ಅಧೀಕ್ಷಕ ಡಾ.ಶರಣಗೌಡ ಪಾಟೀಲ್, ಹಿರಿಯ ವೈದ್ಯರಾದ ಡಾ.ಮುರುಗೇಶ ಪಸ್ತಾಪುರ, ಡಾ.ಸಂಗ್ರಾಮ ಬಿರಾದಾರ, ಡಾ.ಎಸ್.ಕೆ.ಆಂದೋಲಾ, ಡಾ.ನಾಗರಾಜ ಕೋತ್ಲಿ, ಸಿಎಂಇಯಲ್ಲಿ ಖ್ಯಾತ ವೈದ್ಯರಾದ ಉಮೇಶಚಂದ್ರ, ಮಹಾನಂದ ಮೇಳಕುಂದಿ, ಶಾಂತಾ ಪಾಟೀಲ್ ಕುಳಗೇರಿ, ಸುರೇಶ ಹರಸೂರ, ಅನಿಲಕುಮಾರ ಪಾಟೀಲ್, ಸಂದೀಪ ಬಿಜಾಪುರೆ, ಪ್ರೀತಿ ಕೊಣ್ಣೂರ, ಸದಾನಂದ ಮಹಾಗಾಂವ, ಶ್ರೀಶೈಲ ಘೂಳಿ ಇತರರಿದ್ದರು.

ಮಧುಮೇಹಕ್ಕೆ ವಂಶವಾಹಿನಿ ಕಾರಣ
ಹಾರ್ಟ್​ ಅಟ್ಯಾಕ್ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಂದ ವರ್ಷಕ್ಕೆ ವಿಶ್ವದಲ್ಲಿ 1.75 ಕೋಟಿ ಜನ ಸಾಯುತ್ತಿದ್ದಾರೆ. ಅದರಲ್ಲೂ 40 ವರ್ಷದೊಳಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ ಎಂದು ಡಾ.ಗಂಭೀರ ಕಳವಳ ವ್ಯಕ್ತಪಡಿಸಿದರು. ಯೂರೋಪ್ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಧುಮೇಹಿಗಳ ಪ್ರಮಾಣ ದ್ವಿಗುಣಗೊಂಡಿದೆ. ಇದು ಸಹ ಹೃದಯ ಕಾಯಿಲೆಗಳಿಗೆ ಕಾರಣವಾಗಿದೆ. ವಂಶವಾನಿಯಿಂದಲೂ ಶೇ.90 ಹೃದಯ ಕಾಯಿಲೆ ಬರುತ್ತಿದೆ. ಪೋಷಕರಿಗೆ ಬಂದ ವಯಸ್ಸಿಗಿಂತ ಕೆಲವು ವರ್ಷ ಮೊದಲೇ ಮಕ್ಕಳಲ್ಲಿ ಹೃದಯ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಎಚ್ಚರಿಸಿದರು. ಯೂರೋಪ್ ದೇಶಗಳಲ್ಲಿ ಸಕ್ಕರೆ ಕಾಯಿಲೆಯಿಂದ ಬಳಲುವವರ ಸಂಖ್ಯೆ ಕಮ್ಮಿಯಾಗುತ್ತಿದ್ದರೆ, ನಮ್ಮಲ್ಲಿ ಹೆಚ್ಚುತ್ತಿದೆ. ಕಡಿವಾಣ ಹಾಕಲು ದೈಹಿಕ ಶ್ರಮದ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಡಾ.ಗಂಭೀರ ಕಿವಿಮಾತು ಹೇಳಿದರು.