ಸ್ಥಳ ನಿಯುಕ್ತಿ ಕೌನ್ಸೆಲಿಂಗ್ನಲ್ಲಿ ಗೊಂದಲ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪ್ರಾಥಮಿಕ ಶಾಲೆ ಹೆಚ್ಚುವರಿ ಶಿಕ್ಷಕರ ಪಟ್ಟಿ ಕೊನೇ ಘಳಿಗೆಯಲ್ಲಿ ಮಾರ್ಪಾಡು ಮಾಡಿದ್ದರಿಂದ ಸೋಮವಾರ ಡಿಡಿಪಿಐ ಕಚೇರಿಯಲ್ಲಿ ಆರಂಭಗೊಂಡ ಸ್ಥಳ ನಿಯುಕ್ತಿ ಕೌನ್ಸೆಲಿಂಗ್ನಲ್ಲಿ ಗೊಂದಲ ಉಂಟಾಯಿತು. ಇದಕ್ಕೆ ಅಧಿಕಾರಿಗಳ ನಿರ್ಲಕ್ಷೃವೇ ಕಾರಣ ಎಂದು ಆಕ್ರೋಶ ವ್ಯಕ್ತವಾಯಿತು.

ಜಿಲ್ಲೆಯಲ್ಲಿ 220 ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಲಾಗಿತ್ತು. ಅವರ ಸ್ಥಳ ನಿಯುಕ್ತಿಗೆ ಕೌನ್ಸೆಲಿಂಗ್ ನಡೆಸಲು ಎರಡು ತಿಂಗಳ ಹಿಂದೆ ನಿರ್ಧರಿಸಿ ನೋಟಿಸ್ ನೀಡಲಾಗಿತ್ತು. ಪಟ್ಟಿ ಪ್ರಕಟಿಸಿ ದಿನಾಂಕ ನಿಗದಿಪಡಿಸಿದ ಬಳಿಕ ಕೊನೆಯ ಘಳಿಗೆಯಲ್ಲಿ ಪಟ್ಟಿ ಒಂದು ದಿನ ಹಿಂದಷ್ಟೆ ಬದಲಾವಣೆಯಾಗಿದೆ. ಇದು ಶಿಕ್ಷಕರ ಸಿಟ್ಟಿಗೆ ಕಾರಣವಾಗಿದೆ. ಕೆಲಹೊತ್ತು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಅಧಿಕಾರಿಗಳೇ ಈ ಪಟ್ಟಿ ಬದಲಾಯಿಸಿದ್ದಾರೆ ಎಂದು ದೂರಿದ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ್, ಕೌನ್ಸೆಲಿಂಗ್ನಲ್ಲಿ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಆಗ್ರಹಿಸಿದರು.

ಪಟ್ಟಿಯನ್ನು ಕೇಂದ್ರಿಕೃತ ದಾಖಲಾತಿ ಘಟಕದವರು ಆನ್ಲೈನ್ನಲ್ಲಿ ಮಾಡುವುದು ಪದ್ಧತಿ. ಬೆಂಗಳೂರಿನಲ್ಲಿರುವವರು ಪಟ್ಟಿ ಪರಿಷ್ಕರಿಸಿದ್ದಾರೆ ಎಂದು ಡಿಡಿಪಿಐ ಮಹಾಂತಗೌಡ ಸ್ಪಷ್ಟಪಡಿಸಿದರು. ಆಗಾಗ್ಗೆ ಪಟ್ಟಿ ಪರಿಷ್ಕರಿಸುತ್ತಾರೆ. ಅದಕ್ಕೆ ಶಿಕ್ಷಕರು ಆಕ್ಷೇಪಣೆ ಸಲ್ಲಿಸಿದರೆ, ಅವರ ಗಮನಕ್ಕೆ ತರಲಾಗುವುದು. ಈಗ ಅಲ್ಪ ಪ್ರಮಾಣದಲ್ಲಿ ಪಟ್ಟಿ ಬದಲಾಗಿದ್ದು, ಅದರಂತೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ ಎಂದರು. ಸೋಮವಾರ ಹಾಗೂ ಮಂಗಳವಾರ ಸ್ಥಳ ನಿಯುಕ್ತಿ ಪ್ರಕ್ರಿಯೆ ನಡೆಯಲಿದೆ.