4600 ಮೆಟ್ರಿಕ್ ಟನ್ ಕಲ್ಲಿನ ಪುಡಿ, ಜೀಪ್ ಜಪ್ತಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪರವಾನಿಗೆ ಪಡೆದುಕೊಳ್ಳದೆ ಅಕ್ರಮವಾಗಿ ಕಲ್ಲು ಪುಡಿ ಮಾಡುವ ಘಟಕಗಳನ್ನು ನಡೆಸಲಾಗುತ್ತಿದೆ ಎಂಬ ಮಾಹಿತಿಯಂತೆ ತಾಲೂಕಿನ ಮೇಳಕುಂದಾ (ಬಿ) ಮತ್ತು ಮಾಚನಾಳ ಗ್ರಾಮಗಳ ಸೀಮಾಂತರದಲ್ಲಿದ್ದ ಅಕ್ರಮ ಕ್ರಷರ್ ಘಟಕಗಳ ಮೇಲೆ ಭಾನುವಾರ ದಾಳಿ ನಡೆಸಲಾಗಿದೆ. ಭಾರಿ ಪ್ರಮಾಣ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಘಟಕಗಳಲ್ಲಿದ್ದ ಯಂತ್ರೋಪಕರಣಗಳು ಸೇರಿದಂತೆ ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾದ 4600 ಮೆಟ್ರಿಕ್ ಟನ್ ಕಲ್ಲಿನ ಪುಡಿ (ಜಲ್ಲಿ ಕಲ್ಲು), ಜೀಪ್ ಇನ್ನಿತರ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಗುತ್ತೇದಾರರು ಸೇರಿ ಐವರ ವಿರುದ್ಧ ಕೇಸು ದಾಖಲಿಸಲಾಗಿದೆ.

ಸಹಾಯಕ ಆಯುಕ್ತ ಎಂ. ರಾಚಪ್ಪ ನೇತೃತ್ವದಲ್ಲಿ ತಹಸೀಲ್ದಾರ್ ಅಶೋಕ ಹಿರೋಳ್ಳಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿದರ್ೇಶಕಿ ರೇಣುಕಾದೇವಿ, ಕಂದಾಯ ನಿರೀಕ್ಷಕ  ಸುನೀಲಕುಮಾರ, ಗ್ರಾಮ ಲೆಕ್ಕಾಧಿಕಾರಿ ಕಾಂತೇಶ, ಎಂ.ಬಿ. ನಗರ ಸಿಪಿಐ ವಾಜೀದ್ ಪಟೇಲ್, ಸಹಾಯಕ ಅಭಿಯಂತರ ಎಂ.ಎಲ್. ಚವ್ಹಾಣ ಸೇರಿ ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ರು ಸೇರಿಕೊಂಡು ಜಂಟಿಯಾಗಿ ದಾಳಿ ನಡೆಸಿದ್ದಾರೆ.

ಜಮೀನುಗಳಲ್ಲಿ ಅಕ್ರಮವಾಗಿ ಜಲ್ಲಿಕಲ್ಲು ಸಂಗ್ರಹ ಮಾಡಿರುವ ಕಾರಣಕ್ಕೆ ಜಮೀನುಗಳ ಮಾಲೀಕರಾದ ಉದ್ಯಮಿ ಸತೀಶ ಗುತ್ತೇದಾರ, ಮೇಳಕುಂದಾ ಗ್ರಾಮದ ಬಂಡವ್ವ ಕಲ್ಯಾಣಿ, ಶರಣಬಸಪ್ಪ ಗುರುಶಾಂತಪ್ಪ ಎಂಬುವರ ವಿರುದ್ಧ ಫರಹತಾಬಾದ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಈ ಜಮೀನುಗಳಲ್ಲಿದ್ದ 4 ಸಾವಿರ ಮೆಟ್ರಿಕ್ ಟನ್ ಕಲ್ಲು ಪುಡಿ ಪತ್ತೆಯಾಗಿದ್ದು, ಅಂದಾಜು 2. 40 ಲಕ್ಷ ರೂ ಮೌಲ್ಯದ್ದು ಪತ್ತೆಯಾಗಿದೆ. ಕ್ರಷರ್ ಬೆಲೆ ಅಂದಾಜು 10 ಲಕ್ಷ ರೂ. ಆಗಿದೆ ಎಂದು ಅಂದಾಜಿಸಲಾಗಿದೆ.

ನಂತರ ಮಾಚನಾಳ ಗ್ರಾಮದ ಸೀಮಾಂತರದಲ್ಲಿ ಕಾಶೀನಾಥ ಗುಂಡಪ್ಪ ದೇವತ್ಕಲ್ ಮತ್ತು ಪ್ರಕಾಶ ಸಿದ್ದರಾಮ ಎಂಬುವರ ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 600 ಮೆಟ್ರಿಕ್ ಟನ್ ಕಲ್ಲಿನ ಪುಡಿ ಹಾಗೂ 5 ಲಕ್ಷ ರೂ ಮೌಲ್ಯದ ಕ್ರಷರ್ ಹಾಗೂ ಜೀಪ್, ಲೋಡರ್ ಮೊದಲಾದ ವಸ್ತುಗಳನ್ನು ಜ್ತು ಮಾಡಿಕೊಳ್ಳಲಾಗಿದೆ. ಜೀಪ ಚಾಲಕ ಪ್ರಕಾಶ ಸಿದ್ರಾಮ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಎನ್. ಚೋಕ್ಕರೆಡ್ಡಿ ದೂರು ನೀಡಿದ್ದಾರೆ. ಫರಹತಾಬಾದ ಠಾಣೆಯಲ್ಲಿ ಕೇಸು ದಾಖಲಾಗಿದ್ದು,ತನಿಖೆ ನಡೆದಿದೆ.