ಅಧಿಕಾರಿಗಳ ಅಟ್ಟಹಾಸ ಗೂಡಂಗಡಿ ತೆರವು

ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಮ ಮಂದಿರ ಸುತ್ತ ಇದ್ದ ಗೂಡಂಗಡಿ, ಬಂಡಿ, ಶೆಡ್ಗಳನ್ನು ಸೋಮವಾರ ಬೆಳಗ್ಗೆ ದಿಢೀರ್ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು. ರಸ್ತೆ ಬದಿ ವ್ಯಾಪಾರವನ್ನೇ ನೆಚ್ಚಿಕೊಂಡು ಸಂಸಾರ ಸಾಗಿಸುತ್ತಿದ್ದ ಬಡ ವ್ಯಾಪಾರಿಗಳ ಪಾಲಿಗೆ ಸೋಮವಾರ ಕಹಿ ಆಗಿ ಪರಿಣಮಿಸಿತು.

ರಾಷ್ಟ್ರೀಯ ಹೆದ್ದಾರಿ, ಮಹಾನಗರ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ಮಧ್ಯೆ ಜೆಸಿಬಿಗಳೊಂದಿಗೆ ಲಗ್ಗೆ ಇಟ್ಟು ನಾಲ್ಕೈದು ಗಂಟೆಗಳಲ್ಲಿ ಎಲ್ಲ ಗೂಡಂಗಡಿಗಳನ್ನು ನೆಲಸಮಗೊಳಿಸಿದರು. ರಾಮ ಮಂದಿರ ಹತ್ತಿರದ ಮಹರ್ಷಿ ವಾಲ್ಮೀಕಿ ವೃತ್ತದಿಂದ ರಿಂಗ್ರೋಡ್ಗೆ ಹೊಂದಿಕೊಂಡಿರುವ ಧನ್ವಂತರಿ ಆಸ್ಪತ್ರೆ ರಸ್ತೆಯಲ್ಲಿದ್ದ ತರಕಾರಿ ಬಂಡಿಗಳನ್ನು ತೆಗೆದು ಹಾಕಿದರೆ, ಕಬ್ಬಿಣದ ಶೆಡ್ಗಳನ್ನು ಮುರಿದು ಹಾಕಲಾಯಿತು.

ಸಿವಿಲ್ ಮತ್ತು ಸಂಚಾರ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಬೆಳಗ್ಗೆ 8ರವರೆಗೆ ನಿರುಮ್ಮಳವಾಗಿ ವ್ಯಾಪಾರ ಮಾಡಿಕೊಂಡಿದ್ದವರಿಗೆ ಒಮ್ಮೆಲೆ ಜೆಸಿಬಿಗಳು ಸದ್ದು ಮಾಡಲಾರಂಭಿಸಿದ್ದು ಕಂಗೆಡಿಸಿತು. ಈ ಮುಂಚೆ ಮುಖ್ಯ ರಸ್ತೆ ಬಳಿ ಬೆಳಗ್ಗೆ ಕೆಲಹೊತ್ತು ವ್ಯಾಪಾರ ಮಾಡಿಕೊಂಡು ಹೋಗುತ್ತಿದ್ದರು. ಇತ್ತೀಚೆಗೆ ಅಲ್ಲಿಂದ ತೆರವುಗೊಳಿಸಿ ಸವರ್ಿಸ್ ರಸ್ತೆಯಲ್ಲಿ ವ್ಯಾಪಾರ ಮಾಡುವಂತೆ ಸೂಚಿಸಲಾಗಿತ್ತು. ಈಗ ಅದಕ್ಕೂ ಕಲ್ಲು ಬಿದ್ದಂತಾಗಿದೆ.

ಪಾಲಿಕೆ ನಿಯಮದಂತೆ ನಿರ್ಮಿಸಿಕೊಂಡಿರುವ ಕಟ್ಟಡಗಳ ಮಾಲೀಕರಿಗೆ ತೆರವುಗೊಳಿಸುವುದಾಗಿ ಹೇಳಿ ಭಯ ಹುಟ್ಟಿಸಲಾಗುತ್ತಿದೆ. ರಾಮ ಮಂದಿರದಿಂದ ಕೋಟನೂರ ಮಠದವರೆಗೆ ಮಾತ್ರ ಈಗ ರಸ್ತೆ ಅಗಲ ಮಾಡಲಾಗುತ್ತಿದೆ ಎಂದು ಹೇಳಿ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಕಟ್ಟಡಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು. ಹೀಗಾಗಿ ಹೆದ್ದಾರಿ ಅಧಿಕಾರಿಗಳು ಮತ್ತು ಮಾಲೀಕರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಧನ್ವಂತರಿ ಆಸ್ಪತ್ರೆ ಕಂಪೌಂಡ್ ಒಡೆದು ಹಾಕಲಾಗಿದೆ. ಇನ್ನೊಂದೆಡೆ ಕಟ್ಟಡ ಮಾಲೀಕರಿಗೆ ಯಾವುದೇ ನೋಟಿಸ್ ನೀಡದೆ ಒಮ್ಮೆಲೆ ಹೀಗೆ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಹೀಗಾಗಿ ಕೆಲವನ್ನು ಬಿಟ್ಟು ಮುಂದೆ ಹೋದರು. ಹೀಗೆ ತಾರತಮ್ಯ ಮಾಡುತ್ತಿರುವುದಕ್ಕೂ ಕೆಲವರಿಂದ ಆಕ್ರೋಶ ವ್ಯಕ್ತವಾಯಿತು.

ಇವರಿಗಿಲ್ಲ ವಿಜಯದಶಮಿ ಸಂಭ್ರಮ: ಅವರೆಲ್ಲ ವಿಜಯದಶಮಿ ಸಂಭ್ರಮದಲ್ಲಿದ್ದರು. ರಾಮಮಂದಿರ ಬಳಿ ತರಕಾರಿ ಮಾರುತ್ತ ಹಬ್ಬಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅವರ ಮುಖದಲ್ಲಿ ಹಬ್ಬದ ಸಂಭ್ರಮ ಇಲ್ಲದಂತೆ ಮಾಡಿದ ಕೀರ್ತಿ ಅಧಿಕಾರಿಗಳಿಗೆ ಸಲ್ಲುತ್ತದೆ.  ಸೋಮವಾರ ಬೆಳಗ್ಗೆ ಮಹಾನಗರ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾನವೀಯತೆ ಮರೆತು ಜೆಸಿಬಿ ಮೂಲಕ ಎಲ್ಲ ಗೂಡಂಗಡಿಗಳನ್ನು ನೆಲಸಮ ಮಾಡಿ ಅಟ್ಟಹಾಸ ಮೆರೆದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟರು.

ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ ಗೂಡಂಗಡಿಗಳನ್ನು ತೆರೆಯುವಂತೆ ಎಂಟು ದಿನ ಹಿಂದೆಯೇ ಅಧಿಕಾರಿಗಳು ಹೇಳಿದ್ದರಂತೆ. ಆದರೆ ತರಕಾರಿ ಮಾರುವವರು ತಮ್ಮ ಅಂಗಡಿಗಳನ್ನು ತೆಗೆಯಲು ನಿರ್ಧರಿಸಿದ್ದರೂ ಬೇರೆಡೆ ಸ್ಥಳವಿಲ್ಲದೆ ಪರದಾಡುತ್ತಿದ್ದರು. ವಿಜಯದಶಮಿ ನಂತರ ಗೂಡಂಗಡಿ ತೆರವಿಗೆ ಮುಂದಾಗಿದ್ದರೆ ಚೆನ್ನಾಗಿತ್ತು. ಆದರೆ ಹಬ್ಬ ಇದೆ ಎನ್ನುವುದನ್ನು ಬಿಟ್ಟು ದಿಢೀರ್ ಎಲ್ಲ ಅಂಗಡಿಗಳನ್ನು ಕಿತ್ತು ಹಾಕಿ ಅಧಿಕಾರಿಗಳು ಅಟ್ಟಹಾಸ ಮೆರೆದರು.

ತರಕಾರಿ ಮಾರಾಟ ಚಿಕ್ಕ ವ್ಯಾಪಾರಿಗಳಿಗಷ್ಟೇ ಲಾಭ ತಂದುಕೊಡುತ್ತದೆ ಎಂದು ಊಹಿಸಿದರೆ ಸಾಲದು. ರಾಮ ಮಂದಿರ ಹತ್ತಿರ ಬೆಳೆಯುತ್ತಿರುವ ಸಾವಿರಾರು ಮನೆಗಳವರಿಗೂ ಅನುಕೂಲವಾಗಿತ್ತು. ಮುಖ್ಯ ರಸ್ತೆ ಬಳಿ ಎಷ್ಟು ಹೋಟೆಲ್, ವಾಣಿಜ್ಯ ಕೇಂದ್ರಗಳು ಅಕ್ರಮವಾಗಿ ತಲೆ ಎತ್ತಿಲ್ಲ? ಇದನ್ನು ಪತ್ತೆ ಹಚ್ಚಿ ಕ್ರಮ ಕೈಕೊಳ್ಳುವ ಧೈರ್ಯ ಈ ಅಧಿಕಾರಿಗಳಿಗೆ ಇದೆಯೇ?

ಗೂಡಂಗಡಿಗಳವರು ಕಣ್ಣೀರು ಹಾಕುತ್ತ ಮತ್ತೆಲ್ಲಿ ತರಕಾರಿ ಮಾರಬೇಕು ಎನ್ನುತ್ತ ತೆರಳುತ್ತಿರುವುದನ್ನು ನೋಡಿದರೆ ಕರಳು ಕಿತ್ತಿ ಬರುವಂತಿತ್ತು. ಏನೇ ಇರಲಿ, ಬಡಪಾಯಿಗಳ ಮೇಲೆ ವಿಜಯ ಸಾಧಿಸಿದೆವು ಎಂದು ಅಧಿಕಾರಿಗಳು ಬೆನ್ನು ಚಪ್ಪರಿಸಿಕೊಂಡರೆ ಎಂಬುದನ್ನು ಅಲ್ಲಗಳೆಯಲಾಗದು. ವಿಚಿತ್ರವೆಂದರೆ, ಬಡವರ ಮತ ಬಯಸುವ ಒಬ್ಬನೇ ಒಬ್ಬ ರಾಜಕಾರಣಿ ಇವರ ಕಣ್ಣೀರು ಒರೆಸಲು ಬರಲಿಲ್ಲ.