ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನಿಸಿದವರ ಸೆರೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕರ್ನಾಟಕ ಏಕೀಕರಣಗೊಂಡ ದಿನವೇ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ ನೆರವೇರಿಸಲು ಹೊರಟವರನ್ನು ಪೊಲೀಸರು ಮಧ್ಯದಲ್ಲಿಯೇ ಬಂಧಿಸಿದರು. ಈ ಮೂಲಕ ಪ್ರತ್ಯೇಕ ಕೂಗು ಹಾಕಿದವರ ಹೋರಾಟ ಅಷ್ಟಕ್ಕೆ ಮುಗಿದು ಹೋಯಿತು.

ನಗರದ ಸರ್ದಾರ್ ವಲ್ಲಭಬಾಯಿ ವೃತ್ತದಲ್ಲಿ ಗುರುವಾರ ಬೆಳಿಗ್ಗೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೊರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ಇನ್ನಿತರರು ಕೂಡಿಕೊಂಡು ಕೋರ್ಟ್​ ವೃತ್ತದಿಂದ ಮೆರವಣಿಗೆ ಮೂಲಕ ಬರುತ್ತಿರುವಾಗ ಪೊಲೀಸರು ಅವರನ್ನು ತಡೆದರು. ಮುಂದೆ ಹೋಗುತ್ತೇವೆ ಎಂದು ಪ್ರತ್ಯೇಕತಾವಾದಿಗಳು ಪಟ್ಟು ಹಿಡಿದಾಗ ಪೊಲೀಸರು ಇಬ್ಬರು ಸ್ವಾಮೀಜಿಗಳು ಹಾಗೂ ಪಾಟೀಲ್ ಸೇರಿದಂತೆ ಸುಮಾರು 15ಕ್ಕೂ ಜನರನ್ನು ಸ್ಟೆಷನ್ ಬಜಾರ ಇನ್ಸ್ಪೆಕ್ಟರ್ ಶಕೀಲ್ ಅಂಗಡಿ ಹಾಗೂ ಸಿಬ್ಬಂದಿ ಬಂಧಿಸುತ್ತಲೇ ಉಳಿದವರೆಲ್ಲರು ಚೆಲ್ಲಾಪಿಲ್ಲೆಯಾದರು. ವಶಕ್ಕೆ ತೆಗೆದುಕೊಂಡವರನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋದರು. ನಂತರ ಮುಚ್ಚಳಿಕೆ ಬರೆಯಿಸಿಕೊಂಡು ಬಿಡುಗಡೆ ಮಾಡಿದರು.

ಹೈಕ ಭಾಗದ ಅಭಿವೃದ್ಧಿಗೆ ಸರ್ಕಾರ ನಿರ್ಲಕ್ಷೃ ಮಾಡಲಾಗುತ್ತಿದೆ, 371(ಜೆ) ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿಲ್ಲ. ಜನಪ್ರತಿನಿಧಿಗಳು ಈ ಭಾಗದ ಪ್ರಗತಿಗೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಲು ಹೊರಟವರನ್ನು ಪೊಲೀಸರು ತಡೆದರು ಎಂದು ಪಾಟೀಲ್ ಆರೋಪಿಸಿದರು. ಹೈಕ ಹೊರಗಡೆ ಶೇ.8ರಷ್ಟು ಮಿಸಲಾತಿ ಸಿಗುತ್ತಿಲ್ಲ ಇದರ ಬಗ್ಗೆ ಸಚಿವರು ಗಮನ ಹರಿಸುತ್ತಿಲ್ಲ ಎಂದು ದೂರಿದರು. ಮುಂಬಯಿ ಕರ್ನಾಟಕದವರು ಹೈ.ಕ ಮೇಲೆ ಸವಾರಿ ಮಾಡುತ್ತಿದ್ದು, ಅವರ ಉಕ ರಾಜ್ಯ ಬೇಡಿಕೆಗೆ ನಮ್ಮ ಬೆಂಬಲವಿಲ್ಲ, ನಮ್ಮದು ಕಲ್ಯಾಣ ಕರ್ನಾಟಕ ರಾಜ್ಯ ಬೇಡಿಕೆ ಎಂದು ಪ್ರತಿಪಾದಿಸಿದರು. ಹೋರಾಟ ಮುಂದುವರಿಸುತ್ತೇವೆ, ನಿಲ್ಲಿಸುವುದಿಲ್ಲ ಎಂದು ಹೇಳಿದರು. ಮುಂಜಾಗ್ರತಾ ಕ್ರಮವಾಗಿ ಪಟೇಲ್ ವೃತ್ತದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರತ್ಯೇಕ ರಾಜ್ಯ ಕೇಳುವರಿಗೆ ಇತಿಹಾಸ ಗೊತ್ತಿಲ್ಲ
ಪ್ರತ್ಯೇಕ ರಾಜ್ಯ ಬೇಡಿಕೆ ಅಪ್ರಸ್ತುತ. ಯಾವುದೇ ಸಕಾರಣಗಳಿಲ್ಲದೆ ಪ್ರತ್ಯೇಕ ಬೇಡಿಕೆ ಮಂಡಿಸುವವರಿಗೆ ಕರ್ನಾಟಕ ಏಕೀಕರಣದ ಇತಿಹಾಸ ಗೊತ್ತಿದ್ದಂತೆ ಕಾಣುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಕಲಬುರಗಿಯಲ್ಲಿ ನಡೆದ ರಾಜ್ಯೋತ್ಸವದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ, ರಾಜ್ಯದ ಹಲವು ಮುಖಂಡರು, ಗಣ್ಯರ, ಹೋರಾಟಗಾರರು ಕಷ್ಟಪಟ್ಟು ಕರ್ನಾಟಕ ರಾಜ್ಯವನ್ನು ಏಕೀಕರಣಗೊಳಿಸಿದ್ದಾರೆ. ಹೈಕ ಭಾಗವು ಆರ್ಥಿಕ, ಶೈಕ್ಷಣಿಕ ಇತರ ಕ್ಷೇತ್ರಗಳಲ್ಲಿ ಪ್ರಗತಿ ಆಗಬೇಕಾಗಿದೆ. ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಕೇಂದ್ರ ಸರ್ಕಾರವು 371(ಜೆ) ಕಲಂ ರೂಪಿಸಿ ಕೊಡುಗೆ ನೀಡಿದೆ. ಅದರ ಸಮರ್ಪಕ ಅನುಷ್ಠಾನಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಅಭಿವೃದ್ಧಿ ವಿಷಯವಾಗಿದ್ದರೆ ಸ್ಪಂದಿಸುತ್ತೇವೆ ಎಂದು ಖರ್ಗೆ ಹೇಳಿದರು