ರೌಡಿ ಶೀಟರ್ ಸಹಚರರ ಬಂಧನ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ರೌಡಿ ಶೀಟರ್ ಪ್ರದೀಪ್ ಭಾವೆ ಕಡೆಯವರು ಬೋರಾಬಾಯಿ ನಗರದಲ್ಲಿ ಆರ್ಜಿ ನಗರ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮತ್ತೆ ಮೂವರನ್ನು ಬಂಧಿಸಲಾಗಿದೆ. ಇದರಿಂದಾಗಿ ಬಂಧಿತರ ಸಂಖ್ಯೆ 23ಕ್ಕೆ ಏರಿದಂತಾಗಿದೆ.

ಪ್ರದೀಪ್ ಸಹಚರರಾಗಿರುವ ಪ್ರವೀಣ್, ಅನಿಲ್ ಅಲಿಯಾಸ್ ಚೌಪಟ್ಟಿ ಅನಿಲ್ ಮತ್ತು ಶರಣಬಸಪ್ಪ ಅಲಿಯಾಸ್ ಸಾಹುಕಾರ ಶಾಣು ಬಂಧಿತರು ಎಂದು ಎಸ್ಪಿ ಶಶಿಕುಮಾರ ಮತ್ತು ಎಎಸ್ಪಿ ಲೋಕೇಶ ಬಿ.ಜಗಲಾಸರ್ ತಿಳಿಸಿದ್ದಾರೆ.

ಪ್ರದೀಪ್ ಹಲವಾರು ಸಲ ರೌಡಿ ಪರೇಡ್ಗೆ ಬಂದಿರಲಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳ ಸೂಚನೆಯಂತೆ ರೌಡಿ ಪರೇಡ್ಗೆ ಮುಂದಿನ ಸಲ ತಪ್ಪಿಸಬಾರದು ಎಂದು ಬುದ್ಧಿ ಹೇಳಲು ಪಿಎಸ್ಐ ಮಹಾಂತೇಶ ಪಾಟೀಲ್ ಹಾಗೂ ಸಿಬ್ಬಂದಿ ತೆರಳಿದ್ದರು.

ಆಗ ಪೊಲೀಸರೊಂದಿಗೆ ಪ್ರದೀಪ್, ಆತನ ತಾಯಿ, ಸಹೋದರಿ, ಸೋದರತ್ತೆ ಅನುಚಿತವಾಗಿ ವರ್ತಿಸಿದ್ದರು. ಜತೆಗಿದ್ದವರೆಲ್ಲರೂ ಸೇರಿ ಹಲ್ಲೆ ಮಾಡಿದ್ದರು. ನಂತರ ಪ್ರದೀಪ್ ತಲೆಮರೆಸಿಕೊಂಡು ತಮಿಳುನಾಡಿನ ಕೃಷ್ಣಗಿರಿಯಲ್ಲಿದ್ದ. ಅಲ್ಲಿಗೆ ಹೋಗಿ ಬಂಧಿಸಿಕೊಂಡು ಬಂದು ಇಲ್ಲಿನ ಗ್ರೀನ್ಸಿಟಿಯಲ್ಲಿ ಅಡಗಿಸಿಟ್ಟಿದ್ದ ಆಯುಧಗಳನ್ನು ಜಪ್ತಿ ಮಾಡಲು ಹೋದಾಗ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿ ಪೊಲೀಸರ ಗುಂಡೇಟು ತಿಂದು ಸಿಕ್ಕಿಬಿದ್ದಿದ್ದಾನೆ.

ಕಳ್ಳನ ಮನೆಯಲ್ಲಿ ಠಿಕಾಣಿ
ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸೆವನ್ ಸ್ಟಾರ್ ಪ್ರದೀಪ್ ಜೈಲು ಸೇರಿ ಸಹ ಕೈದಿಗಳೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಹೀಗೆ ಪರಿಚಯವಾದವರ ಪೈಕಿ ತಮಿಳುನಾಡಿನ ಕೃಷ್ಣಗಿರಿಯ ಕೈದಿಯೊಬ್ಬನ ಜತೆ ಸ್ನೇಹ ಬೆಳೆಸಿದ್ದ. ಪೊಲೀಸರ ಮೇಲೆ ಹಲ್ಲೆ ಮಾಡಿದ ನಡೆದ ಬಳಿಕ ಪ್ರದೀಪ್ ಕೈದಿಯಾಗಿದ್ದ ಕೃಷ್ಣಗಿರಿಯ ಕಳ್ಳನ ಮನೆಯಲ್ಲಿ ತಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಉರುಳು ಮತ್ತಷ್ಟು ಬಿಗಿ
ಗುಂಡೇಟು ತಿಂದು ಆಸ್ಪತ್ರೆ ಸೇರಿರುವ ಪ್ರದೀಪ್ ವಿರುದ್ಧ ಕೊಲೆ ಯತ್ನ, ಅಪಹರಣ, ರಾಷ್ಟ್ರ ಪಕ್ಷಿ ಹಿಂಸೆ, ಬಾಲಕರ ಮೇಲೆ ದೌರ್ಜನ್ಯ, ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ, ಕರ್ನಾಟಕ ಸಾರ್ವಜನಿಕ ಆಸ್ತಿ ಧ್ವಂಸ, ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋ ಹರಿಬಿಟ್ಟಿರುವುದು ಸೇರಿ 26 ಪ್ರಕರಣ ದಾಖಲಾಗಿವೆ. ಪ್ರತಿ ಹಂತದಲ್ಲೂ ಪ್ರದೀಪ್ ವಿರುದ್ಧ ಒಂದೊಂದು ಕೇಸ್ ದಾಖಲು ಮುಂದುವರಿದಂತೆ ಆತನ ಉರುಳು ಬಿಗಿಯಾಗುತ್ತಲೇ ನಡೆದಿದೆ.