ಹೆಸರು, ಉದ್ದು ಖರೀದಿಯಲ್ಲಿ ಗೋಲ್ಮಾಲ್

ವಿಜಯವಾಣಿ ಸುದ್ದಿಜಾಲ ಚಿಂಚೋಳಿ
ನಿಡಗುಂದಾ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಹೆಸರು, ಉದ್ದು ಖರೀದಿ ಕೇಂದ್ರದಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ.ಬಾಲರಾಜ ಶುಕ್ರವಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಕೇಂದ್ರದಲ್ಲಿ ಕಾನೂನು ಬಾಹಿರವಾಗಿ 268 ಕ್ವಿಂಟಾಲ್ ಹೆಸರು, ಉದ್ದು ಖರೀದಿಸಲಾಗಿದೆ. ಇನ್ನು ಸುಮಾರು 20 ಲಕ್ಷ ಬೆಲೆ ಬಾಳುವ ಬೇಳೆ ದಾಸ್ತಾನು ಮಾಡದೆ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಸಂಘದ ಕಾರ್ಯದರ್ಶಿಗೆ ನೋಟಿಸ್ ನೀಡಿದ್ದು, ಸಂಬಂಧಿತ ಇಲಾಖೆಗೆ ಸಮಗ್ರ ಮಾಹಿತಿ ವರದಿ ನೀಡಿ ಮುಂದಿನ ಕ್ರಮಕ್ಕೆ ಸೂಚಿಸಲಾಗುವುದು ಎಂದರು.

ರೈತರಾದ ರವಿ ಸ್ವಾಮಿ, ರಾಜು ನಿಷ್ಠಿ, ಅಶೋಕರೆಡ್ಡಿ, ಬಸವರಾಜ ಸುಲೇಪೇಟ, ದೇವಿಂದ್ರ ಮುನ್ನೂರ, ಜಾವೀದ್ಮಿಯಾ ಪಟೇಲ್, ಶಿವಕುಮಾರ ತಳವಾರ, ಶಿವಶರಣಪ್ಪ ಬಿರಾದಾರ, ನಾಗೇಂದ್ರಪ್ಪ ಶಿರೋಳ್ಳಿ ಇತರರಿದ್ದರು.

ಅಷ್ಟಕ್ಕೂ ನಡೆದದ್ದಾರೂ ಏನು?: ನಿಡಗುಂದಾ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹೆಸರು, ಉದ್ದು ಖರೀದಿ ಕೇಂದ್ರ ಆರಂಭಿಸಿ 2080 ಕ್ವಿಂಟಾಲ್ ಖರೀದಿ ಗುರಿ ನೀಡಲಾಗಿತ್ತು. ಸುಮಾರು 1619 ಅರ್ಜಿ ಪಡೆದಿದ್ದು, ಇದುವರೆಗೆ 2078 ಕ್ವಿಂಟಾಲ್ ಖರೀದಿಸಲಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿ ಕಳೆದ 8ರಂದು ಖರೀದಿ ಸ್ಥಗಿತಗೊಳಿಸಲಾಗಿದೆ. 520 ರೈತರಿಂದ ಖರೀದಿಸಿದ ಸುಮಾರು 1530 ಕ್ವಿಂಟಾಲ್ ಹೆಸರು, ಉದ್ದನ್ನು ಚಿಂಚೋಳಿಯ ವೇರ್ಹೌಸ್ನಲ್ಲಿ ದಾಸ್ತಾನು ಮಾಡಲಾಗಿದೆ. ಇನ್ನುಳಿದಂತೆ 280 ಕ್ವಿಂಟಾಲ್ ನಿಡಗುಂದಾದ ಎಸ್ಟಿ ಭವನದಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಸಂಘದ ಕಾರ್ಯದರ್ಶಿ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಇಲ್ಲಿ 2078 ಕ್ವಿಂಟಾಲ್ನಲ್ಲಿ 1810 ಕ್ವಿಂಟಾಲ್ ಮಾತ್ರ ದಾಸ್ತಾನು ಇರುವುದು ಬೆಳಕಿಗೆ ಬಂದಿದೆ. ಇನ್ನುಳಿದ 268 ಕ್ವಿಂಟಾಲ್ ಧಾನ್ಯ ಎಲ್ಲಿದೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ಕ್ಷೇತ್ರದ ಬಹುತೇಕ ಖರೀದಿ ಕೇಂದ್ರಗಳಲ್ಲಿ ನಿಜವಾದ ರೈತರ ಉತ್ಪನ್ನ ಖರೀದಿಸದೆ ಉಳ್ಳವರಿಂದ ಲಂಚ ಪಡೆದು ಕಾನೂನು ಬಾಹಿರವಾಗಿ ಖರೀದಿಸಿ ಹಗಲು ದರೋಡೆ ನಡೆಸಲಾಗುತ್ತಿದೆ. ನಮ್ಮಂಥ ಬಡ ರೈತರ ಗೋಳು ಕೇಳುವವರು ಯಾರೂ ಇಲ್ಲ. ಕಳೆದ 20 ದಿನಗಳಿಂದ ಕೇಂದ್ರದ ಮುಂದೆ ನನ್ನ ಸರತಿ ಬರಬಹುದು, ಬೆಳೆ ಖರೀದಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಕುಳಿತ ನನಗೆ ಅನ್ಯಾಯವಾಗಿದೆ.
| ರವಿ ಸ್ವಾಮಿ ಕೊರಡಂಪಳ್ಳಿ, ರೈತ

ಉನ್ನತಾಧಿಕಾರಿಗಳ ಆದೇಶದಂತೆ ವಿಶೇಷ ತನಿಖಾ ತಂಡ ರಚಿಸಿ ಅವ್ಯವ್ಯಹಾರದ ಬಗ್ಗೆ ಎರಡು ದಿನಗಳಿಂದ ಪರಿಶೀಲಿಸಲಾಗಿದೆ. ಈ ಕುರಿತು ವರದಿ ಸಿದ್ಧಪಡಿಸಿ ಉನ್ನತ ಅಧಿಕಾರಿಗಳಿಗೆ ಹಾಗೂ ಸುಲೇಪೇಟ ಠಾಣೆಗೆ ಸಲ್ಲಿಸಿ ಮುಂದಿನ ಕ್ರಮಕ್ಕೆ ಸೂಚಿಸಲಾಗಿದೆ.
| ಹಂಪಣ್ಣ ನಾಯಕ, ಕೃಷಿ ಅಧಿಕಾರಿ ಸೇಡಂ