ಕಲಬುರಗಿ ಕ್ಯಾನ್ಸರ್ ಕೇಂದ್ರಕ್ಕೆ ರು. 45 ಕೋಟಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದಲ್ಲಿರುವ ವಿಟಿಎಸ್ ಸ್ಮಾರಕ ಕಿದ್ವಾಯಿ ಗ್ರಂಥಿ ಕ್ಯಾನ್ಸರ್ ಆಸ್ಪತ್ರೆಗೆ ಇನ್ನಷ್ಟು ಮೂಲಸೌಕರ್ಯ ಕಲ್ಪಿಸುವುದರ ಜತೆಗೆ ಪರಿಣಾಮಕಾರಿ ಚಿಕಿತ್ಸೆಗೆ ಪೂರಕವಾಗಿ ಯಂತ್ರೋಪಕರಣಗಳ ಖರೀದಿಗೆ ಕೇಂದ್ರ ಸರ್ಕಾರ ಶೀಘ್ರವೇ 45 ಕೋಟಿ ವಿಶೇಷ ಅನುದಾನ ನೀಡಲಿದೆ ಎಂದು ಕಿದ್ವಾಯಿ ನಿರ್ದೇಶಕ ಡಾ.ಸಿ.ರಾಮಚಂದ್ರ ಹೇಳಿದರು.

ಜಿಮ್ಸ್ ಕ್ಯಾಂಪಸ್ನ ವಿಠ್ಠಲರಾವ ತುಕಾರಾಮ ಸುತ್ರಾವೆ ಸ್ಮಾರಕ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಹೊಂದಿಕೊಂಡಂತೆ ಇನ್ಫೋಸಿಸ್ 6 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಧರ್ಮಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಮಾತನಾಡಿ, ಈ ವಿಶೇಷ ಅನುದಾನದಲ್ಲಿ ಪೆಟ್ ಸಾ್ಕೃನ್, ಇನ್ನೊಂದು ಲೀನಿಯರ್ ಯಂತ್ರ ಜತೆಗೆ ಹಲವು ಯಂತ್ರಗಳನ್ನು ಖರೀದಿಸಲಾಗುವುದು. ಇದರಿಂದಾಗಿ ಈ ಭಾಗದ ಜನರಿಗೆ ಹೈಟೆಕ್ ಕ್ಯಾನ್ಸರ್ ಚಿಕಿತ್ಸೆ ಉಚಿತವಾಗಿ ಸಿಗಲಿದೆ ಎಂದರು.

ಕಲಬುರಗಿ ಕ್ಯಾನ್ಸರ್ ಕೇಂದ್ರಕ್ಕೆ ವಾರದೊಳಗೆ ಅಗತ್ಯ ವೈದ್ಯರನ್ನು ನಿಯೋಜನೆ ಜತೆಗೆ ಇನ್ನಷ್ಟು ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು. ಸಿಬ್ಬಂದಿ ಬದ್ಧತೆ ಮತ್ತು ಸೇವಾ ಮನೋಭಾವದೊಂದಿಗೆ ರೋಗಿಗಳ ಆರೈಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕರ್ತವ್ಯದ ನಿರ್ಲಕ್ಷೃ ತೋರಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಡಾ.ರಾಮಚಂದ್ರ, ಬಯೋಮೆಟ್ರಿಕ್ ಹಾಜರಾತಿ ಜತೆಗೆ ಒಂದೇ ಪ್ರವೇಶ ದ್ವಾರ ಮಾಡಲಾಗುವುದು ಎಂದರು.

ಇನ್ಫೋಸಿಸ್ ಉಪಾಧ್ಯಕ್ಷ ಬಿನೋದ್ ಹಂಪಾಪುರ ಅವರು ಧರ್ಮಶಾಲಾ ಕಟ್ಟಡ ಉದ್ಘಾಟಿಸಿ ಸೇವೆಗೆ ಸಮರ್ಪಿಸಿದರು. ಇನ್ಫೋಸಿಸ್ ಖರೀದಿ ವಿಭಾಗ ಮುಖ್ಯಸ್ಥ ಸಂಜಯ ಭಟ್, ಜಿಮ್ಸ್ ನಿರ್ದೇಶಕ ಡಾ.ಉಮೇಶ, ಕಲಬುರಗಿ ಕಿದ್ವಾಯಿ ಕ್ಯಾನ್ಸರ್ ಸೆಂಟರ್ ಮುಖ್ಯಸ್ಥ ಡಾ.ಗುರುರಾಜ ದೇಶಪಾಂಡೆ ಇತರರಿದ್ದರು. ಡಾ.ನವೀನ್ ಸ್ವಾಗತಿಸಿದರು. ಡಾ.ಶ್ರುತಿ ವಂದಿಸಿದರು.

ರೋಗಿಗಳ ಸಹಾಯಕರಿಗೆ ಹೈಟೆಕ್ ಧರ್ಮಶಾಲೆ
ಇನ್ಫೋಸಿಸ್ ಫೌಂಡೇಷನ್ ಹಾಗೂ ಕಿದ್ವಾಯಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಒಡಂಬಡಿಕೆಯಂತೆ ಕಲಬುರಗಿಯಲ್ಲಿ 6 ಕೋಟಿ ವೆಚ್ಚದಲ್ಲಿ ಧರ್ಮಶಾಲೆ ನಿರ್ಮಿಸಲಾಗಿದೆ. ರೋಗಿಗಳ ಸಹಾಯಕರು ತಂಗಲು ಬೇಕಿರುವ ಎಲ್ಲ ಸವಲತ್ತು ಹೊಂದಿರುವ ಹೈಟೆಕ್ ಧರ್ಮಶಾಲೆ ಇದಾಗಿದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿಯಿಂದ ಬರುವ ರೋಗಿಗಳ ಸಹಾಯಕರಿಗೆ ಇದು ಅನುಕೂಲ ಕಲ್ಪಿಸಲಿದೆ. ಇನ್ಫೋಸಿಸ್ ಫೌಂಡೇಷನ್ 2001ರಿಂದ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಜತೆ ಹಲವಾರು ಯೋಜನೆಗಳಲ್ಲಿ ಕೆಲಸ ನಿರ್ವಹಿಸುತ್ತಿದೆ. ಧರ್ಮಶಾಲಾದಲ್ಲಿ ಸುಮಾರು 1000 ರೋಗಿಗಳ ಸಹಾಯಕರು ವಾಸವಿರಲು ವ್ಯವಸ್ಥೆ ಇದೆ. ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಆವರಣದಲ್ಲಿ ಫೌಂಡೇಷನ್ ಆಪರೇಷನ್ ಥಿಯೇಟರ್ ನಿರ್ಮಿಸಿಕೊಟ್ಟಿದೆ. ಇನ್ನೊಂದು ಒಪಿಡಿ ವಿಭಾಗ ನಿರ್ಮಿಸಿಕೊಡಲು ಒಪ್ಪಿಕೊಂಡಿದೆ ಎಂದು ಡಾ.ರಾಮಚಂದ್ರ ವಿವರಿಸಿದರು.