ಕೈಗಾರಿಕೆ, ಪ್ರವಾಸೋದ್ಯಮ ಪ್ರಗತಿಗೆ ಪ್ರಸ್ತಾವನೆ ಸಲ್ಲಿಸಿ

ಕಲಬುರಗಿ: ಹೈದರಾಬಾದ್ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಕೈಗೆತ್ತಿಕೊಳ್ಳಬೇಕಿರುವ ಯೋಜನೆಗಳ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.

ಹೈಕ ವಿಮೋಚನಾ ದಿನ ನಿಮಿತ್ತ ಸರ್ದಾರ್ ವಲ್ಲಭಭಾಯಿ ಪಟೇಲ್ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಜಿಲ್ಲಾ ಪೊಲೀಸ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದ ಅವರು, ಕೈಗಾರಿಕೆ ಹಾಗೂ ಪ್ರವಾಸೋದ್ಯಮದಲ್ಲಿ ಪ್ರಗತಿ ಸಾಧಿಸಲು ವಿಫುಲ ಅವಕಾಶಗಳಿವೆ ಎಂದರು.

ಚೀನಾ ಜತೆ ಕೈಗಾರಿಕೆ ಉತ್ಪನ್ನಗಳ ಆರೋಗ್ಯಕರ ಸ್ಪರ್ಧೆಗೆ ಹಲವು ಪ್ರಮುಖ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಅದರಂತೆ 9 ಕ್ಲಸ್ಟರ್ಗಳನ್ನು ರಾಜ್ಯದಲ್ಲಿ ಸ್ಥಾಪಿಸುತ್ತಿದ್ದು, ಕಲಬುರಗಿಯಲ್ಲಿ ಸೋಲಾರ್ ಕೈಗಾರಿಕೆ ಉತ್ಪನ್ನಗಳ ತಯಾರಿಕೆ ಘಟಕ, ಬೀದರ್ನಲ್ಲಿ ಕೃಷಿ ಮತ್ತು ತೋಟಗಾರಿಕೆ ಯಂತ್ರೋಪಕರಣ ತಯಾರಿಕೆ ವಲಯ, ಕೊಪ್ಪಳದಲ್ಲಿ ವಿದ್ಯುನ್ಮಾನ ಆಟಿಕೆ ತಯಾರಿಕೆ ಹಾಗೂ ಬಳ್ಳಾರಿಯಲ್ಲಿ ವಸ್ತ್ರೋದ್ಯಮದ ಕ್ಲಸರ್ ಸ್ಥಾಪಿಸಲಾಗುವುದು. ಸ್ಥಳೀಯರಿಗೆ ಕೌಶಲ ಅಭಿವೃದ್ಧಿ ತರಬೇತಿ ಮೂಲಕ ಉದ್ಯಮಗಳಲ್ಲಿ ಸ್ಥಳೀಯ ಸಂಪನ್ಮೂಲ ಬಳಸಿ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಸಚಿವರಾದ ಡಿ.ಕೆ.ಶಿವಕುಮಾರ, ಎಂ.ಸಿ.ಮನಗೂಳಿ, ಪ್ರಿಯಾಂಕ್ ಖರ್ಗೆ, ಶಾಸಕರಾದ ಡಾ.ಅಜಯಸಿಂಗ್, ಡಾ.ಉಮೇಶ ಜಾಧವ್, ಎಂ.ವೈ.ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ, ಸುಭಾಷ ಗುತ್ತೇದಾರ್, ಬಸವರಾಜ ಮತ್ತಿಮೂಡ, ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಬಿಜೆಪಿ ನಗರ ಜಿಲ್ಲಾಧ್ಯಕ್ಷರಾದ ಎಂಎಲ್ಸಿ ಬಿ.ಜಿ.ಪಾಟೀಲ್, ಮೇಯರ್ ಶರಣಕುಮಾರ ಮೋದಿ, ಹೈಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ್, ಆರ್ಸಿ ಸುಬೋಧ ಯಾದವ್, ಐಜಿಪಿ ಮನೀಷ್ ಕರ್ಬೆಕರ್, ಡಿಸಿ ಆರ್.ವೆಂಕಟೇಶಕುಮಾರ, ಸಿಇಒ ಹೆಪ್ಸಿಬಾರಾಣಿ ಕೊರ್ಲಪಾಟಿ, ಎಸ್ಪಿ ಶಶಿಕುಮಾರ ಎನ್., ಹೆಚ್ಚುವರಿ ಡಿಸಿ ಭೀಮಾಶಂಕರ ತೆಗ್ಗೆಳ್ಳಿ, ಸಹಾಯಕ ಆಯುಕ್ತರಾದ ಆರ್.ರಾಚಪ್ಪ, ಡಾ.ಸುಶೀಲಾ, ಮಾಜಿ ಸಚಿವ ರೇವೂನಾಯಕ ಬೆಳಮಗಿ, ಮಾಜಿ ಎಂಎಲ್ಸಿಗಳಾದ ಇಕ್ಬಾಲ್ ಅಹ್ಮದ್ ಸರಡಗಿ, ಅಲ್ಲಮಪ್ರಭು ಪಾಟೀಲ್, ಹೈಕ ವಿಮೋಚನಾ ಸಮಿತಿ ಅಧ್ಯಕ್ಷ ಶಶೀಲ್ ನಮೋಶಿ, ಸಂಚಾಲಕ ಲಕ್ಷ್ಮಣ ದಸ್ತಿ, ಪ್ರಮುಖರಾದ ಬಸವರಾಜ ಡಿಗ್ಗಾವಿ, ಡಾ.ವಿಕ್ರಂ ಪಾಟೀಲ್, ಬಸವರಾಜ ಬಿರಾದಾರ ಸೊನ್ನ, ಶರಣು ಭೂಸನೂರ, ಮಾಜಿ ಮೇಯರ್ ಭೀಮರಡ್ಡಿ ಪಾಟೀಲ್ ಕುರಕುಂದಾ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್, ಪ್ರಧಾನ ಕಾರ್ಯದರ್ಶಿ ದೇವೇಗೌಡ ತೆಲ್ಲೂರ, ಶಿವಾನಂದ ದ್ಯಾಮಗೊಂಡ, ನಾಸೀರ್ ಹುಸೇನ್, ಶರಣು ಅಣವಾರ ಇತರರಿದ್ದರು. ಎಎಸ್ಪಿ ಲೋಕೇಶ ಬಿ.ಜೆ ನೇತೃತ್ವದಲ್ಲಿ ಆರ್ಪಿಐ ಚನ್ನಬಸಪ್ಪ ಪರೇಡ್ ನಡೆಸಿಕೊಟ್ಟರು.

ಇದಕ್ಕೂ ಮುನ್ನ ಎಸ್ವಿಪಿ ವೃತ್ತದಲ್ಲಿರುವ ವಿಮೋಚನಾ ರೂವಾರಿ ಸರ್ದಾರ್​ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಸಿಎಂ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ವಿಮೋಚನಾ ಹೋರಾಟಗಾರರ ಸ್ಮರಿಸಿದ ಸಿಎಂ
ಸ್ವಾತಂತ್ರೃ ನಂತರ ಹೈದರಾಬಾದ್ ನಿಜಾಮ ಉಸ್ಮಾನ್ ಅಲಿ ಖಾನ್ ಭಾರತ ಒಕ್ಕೂಟ ವ್ಯವಸ್ಥೆಗೆ ಸೇರಲು ನಿರಾಕರಿಸಿದ್ದಲ್ಲದೆ ರಜಾಕಾರರ ದೌರ್ಜನ್ಯದಿಂದ ರೋಸಿ ಹೋಗಿದ್ದ ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ರಮಾನಂದ ತೀರ್ಥರ ಜತೆ ಅಪ್ಪಾರಾವ ಪಾಟೀಲ್, ಚಂದ್ರಶೇಖರ ಪಾಟೀಲ್, ಕೊಯಿಲೂರು ಮಲ್ಲಪ್ಪ, ಸರ್ದಾರ್ ಶರಣಗೌಡ ಇನಾಮದಾರ, ಚನ್ನಬಸಪ್ಪ ಕುಳಗೇರಿ, ದತ್ತಾತ್ರೇಯ ಅವರಾದಿ ಮೊದಲಾದವರು ಚಳವಳಿ ನಡೆಸಿ ಹೈಕ ಭಾಗವನ್ನು ನಿಜಾಮ ಕಪಿಮುಷ್ಠಿಯಿಂದ ಮುಕ್ತಿಗೊಳಿಸಲು ಹೋರಾಡಿದರು ಎಂದು ಸಿಎಂ ಕುಮಾರಸ್ವಾಮಿ ಸ್ಮರಿಸಿದರು. ನಿಜಾಮ ಸಕರ್ಾರದ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಆಪರೇಷನ್ ಪೋಲೊ ನಡೆಸಿ ಹೈಕ ಸ್ವಾತಂತ್ರೃದ ರೂವಾರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಕಾರ್ಯ ಅಮೋಘವಾಗಿದೆ ಎಂದು ನೆನಪಿಸಿಕೊಂಡರು.

371(ಜೆ) ತಿದ್ದುಪಡಿಗೆ ಖರ್ಗೆ ಧರಂ ಕೊಡುಗೆ ಅಪಾರ
ಸಂವಿಧಾನದ 371(ಜೆ) ವಿಧಿ ಜಾರಿ ಮೂಲಕ ಹೈಕ ಯುವಕರಿಗೆ ಉದ್ಯೋಗ ಮತ್ತು ವೃತ್ತಿಪರ ಕೋರ್ಸ್​ಗಳಲ್ಲಿ ಮೀಸಲು ಕೊಡಿಸುವ ಮೂಲಕ 20 ಸಾವಿರ ಜನರಿಗೆ ಸರ್ಕಾರಿ ಉದ್ಯೋಗ ಸಿಕ್ಕಿವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. ಸಂವಿಧಾನ ತಿದ್ದುಪಡಿ ಮಾಡಿಸುವಲ್ಲಿ ಸಂಸದ ಮಲ್ಲಿಕಾಜರ್ುನ ಖರ್ಗೆ ಹಾಗೂ ಮಾಜಿ ಸಿಎಂ ಧರ್ಮಸಿಂಗ್ ಶ್ರಮ ಅಪಾರವಾಗಿದೆ. ಅದಕ್ಕಾಗಿ ಹೋರಾಟ ನಡೆಸಿದ ವೈಜನಾಥ ಪಾಟೀಲ್ ಪ್ರೇರಣೆಯಾದರು ಎಂದರು.

ಎಚ್ಕೆಆರ್ಡಿಬಿ ಇನ್ನಷ್ಟು ಬಲಪಡಿಸಲು ಕ್ರಮ
ಹೈಕ ಪ್ರದೇಶಾಭಿವೃದ್ಧಿ ಮಂಡಳಿ ಇನ್ನಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು. ಅಗತ್ಯಬಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದರು. ಮಂಡಳಿಗೆ ಈವರೆಗೆ 2880 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, 2411.41 ಕೋಟಿ ವೆಚ್ಚವಾಗಿದೆ. ಮಂಜೂರಾಗಿರುವ 13,691 ಕಾಮಗಾರಿಗಳಲ್ಲಿ 8146 ಪೂರ್ಣಗೊಂಡಿವೆ. ಉಳಿದವು ಪ್ರಗತಿಯಲ್ಲಿವೆ. ಈ ಯೋಜನೆಗಳ ಅನುಷ್ಠಾನದಲ್ಲಿಯೂ ಸಿಬ್ಬಂದಿ ಕೊರತೆ ಮತ್ತಿತರ ಹಲವಾರು ತೊಡಕುಗಳಿರುವುದು ಗಮನಕ್ಕೆ ಬಂದಿದೆ. ಆದ್ಯತೆ ಮೇಲೆ ಬಗೆಹರಿಸಲಾಗುವುದು ಎಂದರು.