ವಿಜಯವಾಣಿ ಸುದ್ದಿಜಾಲ ದೇವಲಗಾಣಗಾಪುರ
ಸಖರಾಯಪಟ್ಟಣ ಅವಧೂತ ಶ್ರೀ ವೆಂಕಟಾಚಲ ಗುರುಮಹಾರಾಜರ ಸ್ಮರಣೆ ಮತ್ತು ಶ್ರೀ ಕೃಷ್ಣ ಯೋಗೀಂದ್ರ ಸರಸ್ವತಿ ಪರಮಹಂಸರ ಆರಾಧನೆ ನಿಮಿತ್ತ ಅಫಜಲಪುರ ತಾಲೂಕಿನ ದೇವಲಗಾಣಗಾಪುರದಲ್ಲಿ ಸೋಮವಾರದಿಂದ 20ರವರೆಗೆ ನಡೆಯಲಿರುವ ಅಖಂಡ ಗುರುಚರಿತ್ರೆ ಪಾರಾಯಣ ಯಜ್ಞ, ಸಾಧು ಸಂತರ ಸಮಾಗಮಕ್ಕೆ ಸಿದ್ಧತೆ ಪೂರ್ಣಗೊಂಡಿದೆ.
ಶಿವಾನಂದಾಶ್ರಮ ಆವರಣದಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ಅಖಂಡ ಹೋಮ, ಗುರುಚರಿತ್ರೆ ಪಾರಾಯಣ, ಅಖಂಡ ವೀಣಾ ಉತ್ಸವ, ಚಿದಂಬರ ಸ್ಮರಣೆ ಸೇರಿ ಹತ್ತು ಹಲವು ಧಾರ್ಮಿಕ- ಸಾಂಸ್ಕೃತಿಕ ವೈವಿಧ್ಯ ಸಂಪನ್ನಗೊಳ್ಳಲಿದೆ.
25 ಋತ್ವಿಜರ ತಂಡ ಮಹಾಹೋಮಕ್ಕೆ, 150 ಸ್ವಯಂ ಸೇವಕರು ಕರಸೇವೆಗೆ, 100ಕ್ಕೂ ಹೆಚ್ಚು ವಾರಕರಿ ಸಂಪ್ರದಾಯದ ಭಕ್ತರು ಅಖಂಡ ವೀಣಾನಾದ, ಜಪ ಯಜ್ಞಕ್ಕೆ ಅಣಿಯಾಗಿದ್ದಾರೆ ಎಂದು ಆರಾಧನಾ ಸಮಿತಿ ಮುಖ್ಯಸ್ಥ ಸಂತ ಶ್ರೀ ವಿದ್ಯಾಧೀಶರು ವಿಜಯವಾಣಿಗೆ ತಿಳಿಸಿದ್ದಾರೆ.
ಸಪ್ತಾಹದಾದ್ಯಂತ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧೆಡೆಯಿಂದ ಆಗಮಿಸಲಿರುವ ಭಕ್ತ ಸಮೂಹಕ್ಕೆ ಶುದ್ಧ ನೀರು, 3 ಹೊತ್ತು ಪ್ರಸಾದ, ಭೋಜನ ಮತ್ತು ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ವಿಆರ್ಎಲ್ ಲಾಜಿಸ್ಟಿಕ್ ಸಂಸ್ಥೆ ಲಾರಿಗಳು ಹಾಸನ, ಬೆಂಗಳೂರು ಮತ್ತು ಮೈಸೂರಿನಲ್ಲಿ ಸಂಗ್ರಹಿತ ಧವಸ ಧಾನ್ಯಗಳ ಸಾಗಣೆ ಸೇವೆ ನಿರ್ವಹಿಸಿ ಉತ್ಸವಕ್ಕೆ ವಿಶೇಷ ಸೇವೆ ಸಲ್ಲಿಸಿವೆ ಎಂದರು.
ಆರಾಧನಾ ಸ್ಥಳದಲ್ಲಿ ಮಾತ್ರವಲ್ಲದೆ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಾಲಯದಲ್ಲೂ ಮಹಾ ಪ್ರಸಾದ ವಿತರಣೆ ನಡೆಯಲಿದೆ. ಇದಕ್ಕಾಗಿ ಅಧಿಷ್ಠಾನಂ ಟ್ರಸ್ಟ್ ಅಧ್ಯಕ್ಷ ಎಚ್.ಎಸ್. ಮಂಜುನಾಥ ಮೂರ್ತಿ ನೇತೃತ್ವದ ಸಮಿತಿ ಸೇವಾಬದ್ಧವಾಗಿದೆ ಎಂದು ವಿದ್ಯಾಧೀಶರು ವಿವರಿಸಿದರು. ವಿವರಕ್ಕೆ 94480 64012, 89711 25996ಗೆ ಸಂಪರ್ಕಿಸಬಹುದು.
ಕಲಿಯುಗದಲ್ಲಿ ಭಗವಂತನ ನಾಮಸ್ಮರಣೆಗೆ ವಿಶೇಷ ಲವಿದೆ. ಜಾತಿ, ಮತ, ಪಂಥ ಭೇದವಿಲ್ಲದೆ ಗಾಣಗಾಪುರದಲ್ಲಿ ಲಕ್ಷಾಂತರ ಜನ ಸಂಗಮಿಸುತ್ತಿರುವುದು ಸಂತ ಸಮಾಗಮಕ್ಕೆ ಶಕ್ತಿ ತುಂಬಿದೆ.
| ಸಂತ ಶ್ರೀ ವಿದ್ಯಾಧೀಶ ಆರಾಧನಾ ಸಮಿತಿ ಮುಖ್ಯಸ್ಥ