ಕ್ರಿಮಿನಾಶಕ ಸೇವಿಸಿ 50ಕ್ಕೂ ಹೆಚ್ಚು ಹಂದಿ ಸಾವು

ಯಡ್ರಾಮಿ: ಪಟ್ಟಣ ಹೊರವಲಯದ ಹೊಲದಲ್ಲಿ ರೈತರಿಟ್ಟಿರುವ ಕೀಟನಾಶಕ (ಹಂದಿ ಪುಡಿ) ಸೇವಿಸಿದ 50ಕ್ಕೂ ಹೆಚ್ಚು ಹಂದಿಗಳು ಶುಕ್ರವಾರ ಅಸುನೀಗಿವೆ.

ಹೊಲಗಳಿಗೆ ನುಗ್ಗಿ ಬೆಳೆಹಾನಿ ಮಾಡುತ್ತವೆ ಎಂದು ಹಂದಿಗಳನ್ನು ಕೊಲ್ಲಲು ರೈತರು ಹೊಲಗಳಲ್ಲಿ ಹಂದಿ ಪುಡಿ ಇಟ್ಟಿದ್ದಾರೆ. ಇದನ್ನು ಸೇವಿಸಿದ ಹಂದಿಗಳು ಪಟ್ಟಣದ ವಿವಿಧ ಭಾಗಗಳಲ್ಲಿ ಬೆಳಗ್ಗೆ ಸಾವನ್ನಪ್ಪಿವೆ.

ಗ್ರಾಪಂ ಸದಸ್ಯ ಮಡಿವಾಳಪ್ಪಗೌಡ ಜವಳಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಬೆಳೆ ರಕ್ಷಣೆಗೆ ಸಾಕಷ್ಟು ದಾರಿಗಳಿವೆ. ಅದನ್ನು ಬಿಟ್ಟು ಕ್ರಿಮಿನಾಶಕ ಹಾಕಿ ಪ್ರಾಣಿಗಳನ್ನು ಕೊಲ್ಲುವುದು ಸರಿಯಲ್ಲ. ಬೇಕಿದ್ದರೆ ನಿಮ್ಮ ಹೊಲಕ್ಕೆ ಪ್ರಾಣಿಗಳು ನುಗ್ಗದಂತೆ ಬೇಲಿ ಹಾಕಿಕೊಳ್ಳಿ ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಕಸ ವಿಲೇವಾರಿ ವಾಹನದಲ್ಲಿ ಸತ್ತ ಹಂದಿಗಳನ್ನು ಕೊಂಡೊಯ್ದು ಹೊರವಲಯದ ಬಯಲು ಜಾಗದಲ್ಲಿ ದೊಡ್ಡದಾದ ಗುಂಡಿ ತೋಡಿ ಹೂಳಲಾಯಿತು.

ಗ್ರಾಪಂ ಸದಸ್ಯರಾದ ಚಾಂದಸಾಬ್ ಚೌದ್ರಿ, ಶ್ರೀಶೈಲ ದೊರಿ, ಸಿಬ್ಬಂದಿ ವೀರೇಶ ಕುಂಬಾರ, ಮಡಿವಾಳಪ್ಪ ಗುರುಶೆಟ್ಟಿ, ಬಸವರಾಜ ಯತ್ನಾಳ, ಜಟ್ಟೆಪ್ಪ, ಅಜರ್ುನ ಜಾಧವ್, ರಾಜು ಗೆಜ್ಜಿ ಇತರರಿದ್ದರು.

ಯಡ್ರಾಮಿ ಸೇರಿ ಸುತ್ತಲಿನ ಆಗ್ರೋ ಅಂಗಡಿಗಳವರು ರೈತರಿಗೆ ಯಾವುದೇ ಪ್ರಾಣಿಗಳನ್ನು ಕೊಲ್ಲುವ ಕ್ರಿಮಿನಾಶಕ ಕೊಡಬಾರದು. ಇನ್ನು ಕ್ರಿಮಿನಾಶಕ ಅಂಗಡಿಗಳಿಗೆ ಪ್ರಾಣಿ ಕೊಲ್ಲುವ ಔಷಧ ಮಾರಾಟ ಮಾಡಬಾರದು ಎಂದು ನೋಟಿಸ್ ಜಾರಿ ಮಾಡಲಾಗುವುದು.
| ನಾಗೇಂದ್ರಪ್ಪ ಕೂಡಿ ಪಿಡಿಒ, ಯಡ್ರಾಮಿ ಗ್ರಾಪಂ