ಸೇವೆಗೆ ಹಿಂಬಾಲಿಸುವ ಯಶಸ್ಸು

ವಿಜಯವಾಣಿ ಸುದ್ದಿಜಾಲ ಕಲಬುರಗಿ
ರೋಗಿಗಳ ಹಾಗೂ ನೋವು ಎಂದು ಹೇಳಿ ಬರುವವರ ಸೇವೆಯನ್ನು ನಿಷ್ಠೆ, ಪ್ರಾಮಾಣಿಕತೆ ಜತೆಗೆ ಪ್ರಾಂಜಲ ಮನಸ್ಸಿನಿಂದ ಮಾಡಿದರೆ ಯಶಸ್ಸು, ಹೆಸರು ಹೀಗೆ ಎಲ್ಲವೂ ಹಿಂಬಾಲಿಸಿಕೊಂಡು ಬರುತ್ತದೆ ಎಂದು ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್. ಸಚ್ಚಿದಾನಂದ ನವ ವೈದ್ಯರಿಗೆ ಕಿವಿಮಾತು ಹೇಳಿದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್.ನಿಜಲಿಂಗಪ್ಪ ದಂತ ವೈದ್ಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಬಿಡಿಎಸ್ ಹಾಗೂ ಎಂಡಿಎಸ್ ಪೂರ್ಣಗೊಳಿಸಿದ ಪದವೀಧರರಿಗೆ ಪದವಿ ಪ್ರದಾನ ಹಾಗೂ ವಾರ್ಚಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರು ಬದ್ಧತೆ, ನೈತಿಕೆಯಿಂದ ಕೆಲಸ ಮಾಡುವ ವೃತ್ತಿಗೌರವ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಸರಳತೆ, ಪರಿಪೂರ್ಣತೆ ಮೈಗೂಡಿಸಿಕೊಂಡು ನಗು ಮತ್ತು ಮಾನವೀಯತೆ ಎಂಬ ಆಭರಣಗಳನ್ನು ವೈದ್ಯರು ಸದಾ ಧರಿಸಿರಬೇಕು. ಯಶಸ್ವಿ ಮತ್ತು ಮಾದರಿ ವೈದ್ಯರಾಗಿ ಹೆತ್ತವರು, ಕಲಿಸಿದ ಶಿಕ್ಷಕರು, ಅತಿಥಿಗಳನ್ನು ಗೌರವಿಸಬೇಕು. ತಾಳ್ಮೆ ಮೈಗೂಡಿಸಿಕೊಳ್ಳಬೇಕು ಎಂದು ಫೈವ್ ಪಿಗಳ ಮಹತ್ವವನ್ನು ವಿವರಿಸಿದರು.

ವೈದ್ಯರಾಗುವುದು ಹೆಮ್ಮೆ ಸಂಗತಿ. ಎಲ್ಲರಿಗೂ ಈ ಭಾಗ್ಯ ಸಿಗಲ್ಲ. ತಂತ್ರಜ್ಞಾನ ಬಳಸಿ ನೀವು ಕಲಿತಿರುವ ದಂತ ವೈದ್ಯ ವಿಜ್ಞಾನ ಬೆರೆಸಿಕೊಂಡು ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಬೇಕು. ದಂತ ವೈದ್ಯರ ಕೊರತೆ ನೀಗಿಸಲು ಮುಂದಾಗಬೇಕು ಎಂದು ಪದವಿ ಪೂರ್ಣಗೊಳಿಸಿದ ದಂತ ವೈದ್ಯರಿಗೆ ಕಿವಿಮಾತು ಹೇಳಿದರು.

ಎಚ್ಕೆಇ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಾ.ಶಿವಾನಂದ ದೇವರಮನಿ, ಕಾರ್ಯದರ್ಶಿ ಡಾ.ನಾಗೇಂದ್ರಪ್ಪ ಮಂಠಾಳೆ, ಜಂಟಿ ಕಾರ್ಯದರ್ಶಿ ಗಂಗಾಧರ ಎಲಿ, ಆಡಳಿತ ಮಂಡಳಿ ಸದಸ್ಯರಾದ ಡಾ.ಶರಣಬಸಪ್ಪ ಬಿ.ಕಾಮರಡ್ಡಿ, ಶರದ್ ರಾಂಪುರೆ, ಸತೀಶಚಂದ್ರ ಹಡಗಲಿಮಠ, ಅರುಣಕುಮಾರ ಎಂ.ವೈ.ಪಾಟೀಲ್, ಡಾ.ವಿಜಯಲಕ್ಷ್ಮೀ, ಬಸವರಾಜ ಪಾಟೀಲ್, ಅನುರಾಧಾ ದೇಸಾಯಿ, ಸಂಪತ್ಕುಮಾರ ಲೋಯಾ, ವಿಜಯಕುಮಾರ ದೇಶಮುಖ, ನಿತೀನ್ ಜವಳಿ, ಉದಯಕುಮಾರ ಚಿಂಚೋಳಿ, ಅನಿಲಕುಮಾರ ಮರಗೋಳ, ಪ್ರಾಚಾರ್ಯ ಡಾ.ಜಯಶ್ರೀ ಮುದ್ದಾ, ಉಪ ಪ್ರಾಚಾರ್ಯ ಸತೀಶ ಪಾಟೀಲ್ ಇತರರಿದ್ದರು. ಡಾ.ಸುಧಾ ಹಾಲಕಾಯಿ ನಿರೂಪಣೆ ಮಾಡಿದರು.

ತಮ್ಮ 50ನೇ ವರ್ಷದಲ್ಲಿ ಪಿಜಿ ಪೂರ್ಣಗೊಳಿಸಿದ ಡಾ.ಆಕೀಬ್ ಹಾಸ್ಮಿ, ಟಾಪರ್ ಮೇಘಾ ಶಾಮ ಕುಲಕರ್ಣಿ ಸೇರಿ 2013ನೇ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದವರಿಗೆ ಪದವಿ ಪ್ರದಾನ ಮಾಡಲಾಯಿತು.

ಕೇಂದ್ರ ಸರ್ಕಾರ ಎಂಸಿಐ ರದ್ದುಗೊಳಿಸಲಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಡೆಂಟಲ್ ಕೌನ್ಸಿಲ್, ಹೋಮಿಯೋಪತಿ ಕೌನ್ಸಿಲ್ ಹೀಗೆ ಎಲ್ಲವನ್ನು ತೆಗೆದು ಹಾಕಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಸೇವೆ ಒಂದೇ ಸೂರಿನಲ್ಲಿ ತರಲು ಮುಂದಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ.
| ಡಾ.ಎಸ್.ಸಚ್ಚಿದಾನಂದ ಕುಲಪತಿ, ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ