ಹತ್ಯೆ ಮಾಡಿದ ಕುರಿಗಾಹಿಗಳಿಬ್ಬರ ಬಂಧನ

ಕಲಬುರಗಿ: ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೆ.22ರಂದು ನಡೆದಿದ್ದ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿಯ ಪ್ರಸಾದ ದಿಂಡೆ ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಹಣ ಇತರ ವಸ್ತು ದೋಚಲು ಮಾಡಿದ ಕೃತ್ಯ ಎಂಬುದು ತನಿಖೆಯಿಂದ ಪತ್ತೆಯಾಗಿದೆ. ಇದರಿಂದಾಗಿ ಆತನ ಆಪ್ತ ಸ್ನೇಹಿತೆ ಪ್ರಿಯಾಂಕ ವಿರುದ್ಧದ ಆರೋಪ ಸುಳ್ಳಾಗಿದೆ.

ಕಡಗಂಚಿ ಗ್ರಾಮದ ಕುರಿಗಾಹಿಗಳಾದ ಗಣೇಶ ಅಲ್ದಿ ಮತ್ತು ಶಾಂತಪ್ಪ ದಂಡಗೂಲೆ ಬಂಧಿತರು. ಕುರಿ ಕಾಯಲು ಬಂದಾಗ ಕ್ಯಾಂಪಸ್ನಲ್ಲಿ ಜೋಡಿಯಾಗಿ ಕುಳಿತ ಪ್ರೇಮಿಗಳನ್ನು ಗುರಿಯಾಗಿಸಿ ಸುಲಿಗೆ ಮಾಡುತ್ತಿದ್ದರು ಎಂದು ಎಸ್ಪಿ ಎನ್.ಶಶಿಕುಮಾರ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಿದ್ದ ಪ್ರಸಾದ ಕಲಬುರಗಿಗೆ ಬಂದ ಬಳಿಕ ಕಡಗಂಚಿ ಹತ್ತಿರದ ಸಿಯುಕೆ ಕ್ಯಾಂಪಸ್ಗೆ ಹೋಗಿದ್ದ. ಅಲ್ಲಿನ ಹೊಸ ಕಟ್ಟಡ ಮೇಲ್ಭಾಗದಲ್ಲಿ ಸ್ನೇಹಿತರು ಸೇರಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದ್ದರು. ಬಳಿಕ ಪ್ರಿಯಾಂಕ ಪಂಚಾಳ ಮತ್ತು ಪ್ರಸಾದ ಕ್ಯಾಂಪಸ್ನ ಹೊಸ ಕಟ್ಟಡ ಬಳಿ ಸಂಜೆ ಮಾತನಾಡುತ್ತ ಕುಳಿತಿದ್ದರು. ಅಲ್ಲಿಗೆ ಬಂದ ಇಬ್ಬರು ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.

ಈ ಹಿಂದೆ ಮೂರ್ನಾಲ್ಕು ಸಲ ಹೀಗೆ ಮಾಡಿದರೂ ಯಾರೂ ದೂರು ಕೊಟ್ಟಿರಲಿಲ್ಲ. ಇದು ಅವರ ಬಚಾವ್ಗೆ ಕಾರಣವಾಗಿತ್ತು. ಪ್ರಸಾದ ಬಳಿಯ ಬ್ಯಾಗ್, ಮೊಬೈಲ್ ಕಿತ್ತುಕೊಂಡಿದ್ದು, ಕಿರುಚಾಡಿದಾಗ ಚಾಕುವಿನಿಂದ ಇರಿದಿದ್ದಾರೆ. ಜತೆಗಿದ್ದ ಪ್ರಿಯಾಂಕಳನ್ನು ಎಳೆದಾಡಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಕಿರುಚಾಟ ಜೋರು ಮಾಡಿದಾಗ ಇಬ್ಬರು ಪರಾರಿಯಾಗಿದ್ದರು ಎಂದು ಎಸ್ಪಿ ಹೇಳಿದರು.

ಆಕೆ ಸ್ನೇಹಿತರು ಆಂಬುಲೆನ್ಸ್ನಲ್ಲಿ ಜಿಲ್ಲಾಸ್ಪತ್ರೆಗೆ ತಂದು ದಾಖಲಿಸಿದಾಗ ಪ್ರಸಾದ ಕೊನೆಯುಸಿರೆಳೆದಿದ್ದ. ಪ್ರಿಯಾಂಕ ಮತ್ತು ಪ್ರಸಾದ ಒಂದೇ ಊರಿನವರು. ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಇಬ್ಬರ ಮಧ್ಯೆ ಗಾಢವಾದ ಸ್ನೇಹ ಇತ್ತು. ಪ್ರಿಯಾಂಕ ಸಿಯುಕೆಯಲ್ಲಿ ಎಂಎ ಓದುತ್ತಿದ್ದರೆ, ಪ್ರಸಾದ ಕೆಲಸಕ್ಕಾಗಿ ಹೈದರಾಬಾದ್ಗೆ ಹೋಗಿದ್ದ. ಇಬ್ಬರು ಪ್ರೀತಿಸುತ್ತಿದ್ದರು. ಅನ್ಯ ಜಾತಿಯವರಾಗಿದ್ದರಿಂದ ಆಕೆ ಪ್ರಸಾದನನ್ನು ದೂರವಿರಿಸಲು ಯತ್ನಿಸುತ್ತಿದ್ದಳು. ಹೀಗಾಗಿ ಕೆಲವರ ಜತೆ ಸೇರಿ ಪ್ರಿಯಾಂಕ ಕೊಲೆ ಮಾಡಿಸಿರಬಹುದು ಎಂದು ಮೃತನ ಸಹೋದರ ನರೋಣಾ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಶಶಿಕುಮಾರ ತಿಳಿಸಿದರು.

ಸುಲಿಗೆ ಮಾಡಿದ ಮೊಬೈಲ್ ಗಣೇಶ ಬೇರೊಬ್ಬರಿಗೆ ಮಾರಿದ್ದ. ಅದರ ಸುಳಿವು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು. ಮಹಾರಾಷ್ಟ್ರದಲ್ಲಿದ್ದಾರೆ ಎಂಬ ಮಾಹಿತಿಯಂತೆ ಡಿವೈಎಸ್ಪಿಗಳಾದ ಎಸ್.ಎಸ್.ಹುಲ್ಲೂರ, ಟಿ.ಎಸ್.ಸುಲ್ಪಿ ನೇತೃತ್ವದಲ್ಲಿ ಸಿಪಿಐ ಎಚ್.ಬಿ.ಸಣಮನಿ, ಪಿಎಸ್ಐ ಸುರೇಶ ಬಾಬು, ಸಿಬ್ಬಂದಿ ಪುಂಡಲೀಕ, ಶಶಿಕುಮಾರ, ಶಿವಾಜಿ, ಅಂಬಾರಾಯ, ಶೇಖರ, ಸಿದ್ದರಾಮ, ರವೀಂದ್ರ, ರಾಜೇಂದ್ರ, ಶ್ರೀಶೈಲ, ಸುಧಾಕರ, ಭೀಮಣ್ಣ, ಮಲ್ಲಿಕಾರ್ಜುನ, ಚನ್ನವೀರ, ಚಂದ್ರಕಾಂತ, ದಶರಥ, ಬೀರಣ್ಣ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಸುಲಿಗೆ ಮಾಡಲು ಯತ್ನಿಸಿದ್ದೇವು. ಕಿರುಚಾಡಿದಾಗ ಚಾಕುವಿನಿಂದ ಇರಿದೇವು ಎಂದು ಒಪ್ಪಿಕೊಂಡಿದ್ದಾರೆ. ಬಂಧಿತರನ್ನು ಇಬ್ಬರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.

ಜೋಡಿ ಹಕ್ಕಿಗಳೇ ಇವರ ಟಾರ್ಗೆಟ್
ಸಿಯುಕೆಯಲ್ಲಿ ನಡೆದಿದ್ದು ಲಾಭಕ್ಕಾಗಿ ನಡೆದ ಕೊಲೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಕಡಗಂಚಿಯ ಕುರಿಗಾಹಿಗಳಾದ ಗಣೇಶ ಮತ್ತು ಶಾಂತಪ್ಪ ಪ್ರೇಮಿಗಳನ್ನೇ ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತ ಬಂದಿದ್ದರು. ಕ್ಯಾಂಪಸ್ನಲ್ಲಿ ಕುರಿಗಳನ್ನು ಮೇಯಿಸಲು ಬಂದಾಗ ಸಂಜೆ ಹೊತ್ತಿನಲ್ಲಿ ಜೋಡಿ ಕುಳಿತಿದ್ದನ್ನು ನೋಡಿ ಹೊಂಚು ಹಾಕಿ ದಾಳಿ ಮಾಡುತ್ತಿದ್ದರು. ಈ ಹಿಂದೆ ಹಲವು ಸಲ ಸುಲಿಗೆ ಮಾಡಿ ಸಣ್ಣಪುಟ್ಟ ವಸ್ತು, ಸರಗಳನ್ನು ಕಿತ್ತುಕೊಂಡಿದ್ದರು. ಆದರೆ ಯಾರೂ ದೂರು ನೀಡಿರಲಿಲ್ಲ. ಪೊಲೀಸರಿಗೆ ದೂರು ನೀಡಿದರೆ ನೀವಿಬ್ಬರು ಕುಳಿತುಕೊಂಡಿದ್ದು ಹೇಳುತ್ತೇವೆ ಎಂದು ಹೆದರಿಸುತ್ತಿದ್ದರು ಎಂದು ಎಸ್ಪಿ ಹೇಳಿದರು.