ಬೊಕ್ಕಸಕ್ಕಾದ ನಷ್ಟ ತನಿಖೆ ನಡೆಸಿ ವಸೂಲಿ ಮಾಡಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಅಫಜಲಪುರ ತಾಲೂಕಿನ ಭೀಮಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಎಂ.ವೈ.ಪಾಟೀಲ್ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಬಿಜೆಪಿ ಒಬಿಸಿ ಘಟಕ ರಾಜ್ಯ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಆರೋಪಿಸಿದ್ದಾರೆ.

ತಾಲೂಕಿನ ಭೀಮಾ ನದಿಯ ದಂಡೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯಲು ಈ ಇಬ್ಬರೂ ಕಾರಣರಾಗಿದ್ದಾರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಅಕ್ರಮ ಮರಳು ದಂಧೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ 181 ಕೋಟಿ ರೂ. ನಷ್ಟವಾಗಿದ್ದು, ಇದರ ಬಗ್ಗೆ ನ್ಯಾಯಾಂಗ್ ಇಲ್ಲವೇ ಉನ್ನತ ಮಟ್ಟದ ತನಿಖೆ ನಡೆಸಬೇಕು. ಹಾನಿಗೆ ಕಾರಣರಾದ ಗುತ್ತಿಗೆದಾರರು, ಕಂದಾಯ, ಗಣಿ ಭೂ ವಿಜ್ಞಾನ ಅಧಿಕಾರಿಗಳು, ಪೊಲೀಸರು ಹಾಗೂ ಜನಪ್ರತಿಧಿಗಳಿಂದ ನಷ್ಟ ವಸೂಲಿ ಮಾಡಬೇಕು. ಇಲ್ಲವಾದರೆ ಗಂಭೀರ ಪರಿಣಾಮ ಎದುರಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ನೇತೃತ್ವದಲ್ಲಿ ಹೋರಾಟ ನಡೆದ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ದಾಳಿ ನಡೆಸಿ ಅಕ್ರಮ ಮರಳುಗಾರಿಕೆ ನಿಲ್ಲಿಸುತ್ತಿರುವುದನ್ನು ಸ್ವಾಗತಿಸುತ್ತೇವೆ. ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲ್ ಸಹೋದರ ರುದ್ರಗೌಡ ಗೌರ ಗ್ರಾಪಂ ಅಧ್ಯಕ್ಷರಾಗಿದ್ದಾಗ ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ. ಹಿಂದೆ ಕೃಷಿ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿದವರು, ಈಗ ಆಗಿಲ್ಲ ಎನ್ನುತ್ತಿದ್ದಾರೆ ಮಾತು ಬದಲಿಸುತ್ತಿರುವ ಅವರು ಅಧ್ಯಕ್ಷ ಸ್ಥಾನಕ್ಕೆ ಮೊದಲು ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.

ಮುಖಂಡರಾದ ಪ್ರೇಮಕುಮಾರ ರಾಠೋಡ, ಶಾಂತಯ್ಯ ಸ್ವಾಮಿ, ಕಲ್ಯಾಣರಾವ ನಾಗೋಜಿ, ಸಣ್ಣಮನಿ, ಭಾಷಾಸಾಬ ಸುದ್ದಿಗೋಷ್ಠಿಯಲ್ಲಿದ್ದರು.

ಐಬಿಗೆ ಜಮೀನು ಕೊಟ್ಟಿದ್ದು ಮಾಲೀಕಯ್ಯ: ಸ್ಟೇಷನ್ ಗಾಣಗಾಪುರದಲ್ಲಿ ಐಬಿ ನಿರ್ಮಾಣದಲ್ಲಿ ಮಾಲೀಕಯ್ಯ ಗುತ್ತೇದಾರರ ವೈಯಕ್ತಿಕ ಹಿತಾಸಕ್ತಿ ಇದೆ ಎಂದು ಆರೋಪಿಸಿರುವ ಕಾಂಗ್ರೆಸಿಗರಿಗೆ ತಿರುಗೇಟು ನೀಡಿದ ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್, ಗಾಣಗಾಪುರ ಭಕ್ತರಿಗಾಗಿ ಮಾಲೀಕಯ್ಯ ತಮ್ಮ ಸ್ವಂತ ಜಮೀನನ್ನು ಸರ್ಕಾರಕ್ಕೆ ನೀಡಿ ಐಬಿ ನಿರ್ಮಿಸಿದ್ದಾರೆ. ಆದರೆ ಎಂ.ವೈ.ಪಾಟೀಲ್ ಮತ್ತವರ ಪುತ್ರ ಅರುಣಕುಮಾರ ಪಾಟೀಲ್ ಅವರೇ ಅಗತ್ಯವಿಲ್ಲದ ದೇಸಾಯಿ ಕಲ್ಲೂರಿನಲ್ಲಿ ಐಬಿ ನಿರ್ಮಿಸಿ ಅಲ್ಲಿನ ಸಲಕರಣೆಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಸ್ಟೇಷನ್ ಗಾಣಗಾಪುರದಲ್ಲಿ ಬಸ್ ನಿಲ್ದಾಣ, ಸಮುದಾಯ ಆಸ್ಪತ್ರೆ ನಿರ್ಮಿಸಲು ಜಾಗ ದೇಣಿಗೆ ನೀಡಿದ್ದು ಗುತ್ತೇದಾರ್ ಕುಟುಂಬ. ತಾಲೂಕಿಗೆ ಮಾದರಿಯಾಗಿರುವ ಅತನೂರಿನಲ್ಲಿ ಆದರ್ಶ ಶಾಲೆ, ಅಲ್ಪಸಂಖ್ಯಾತರ ಶಾಲೆ, ಆಸ್ಪತ್ರೆ ನಿರ್ಮಿಸಲು ಸ್ಥಳವನ್ನು ದೇಣಿಗೆ ನೀಡಿದ್ದು ನಮ್ಮ ಚಿಕ್ಕಪ್ಪ. ಹೀಗಿರುವಾಗ ಗುತ್ತೇದಾರರಿಗೆ ಬೇರೊಬ್ಬರ ಆಸ್ತಿ ದುರುಪಯೋಗ ಮಾಡಿಕೊಳ್ಳುವ ಅಗತ್ಯ ಎಲ್ಲಿಂತ ಬಂತು ಎಂದು ನಿತೀನ್ ಪ್ರಶ್ನಿಸಿದರು.

ಅರುಣಕುಮಾರ ಪಾಟೀಲ್ ಈಗ ಬಿಜೆಪಿಯಲ್ಲಿಲ್ಲ, ನೈತಿಕತೆ ಇದ್ದರೆ ಜಿಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆ ಎದುರಿಸಲಿ. ಮಾತೆತ್ತಿದ್ರೆ ಉಸ್ತುವಾರಿ ಸಚಿವರಿಗೆ ಹೇಳುತ್ತೇವೆ ಎನ್ನುವ ಮೊದಲು ಸಚಿವ ಹೆಸರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಾವು ಮೊದಲು ಕಾಂಗ್ರೆಸಿನಲ್ಲಿದ್ದೇವು. ಸಚಿವರೊಂದಿಗೆ ಹತ್ತು ವರ್ಷ ಕೆಲಸ ಮಾಡಿದ್ದೇನೆ. ವೈಯಕ್ತಿಕವಾಗಿ ನಮಗೆ ಗೊತ್ತಿದ್ದಾರೆ. ಇಂತವರ ಮಾತಿಗೆ ಮಣೆ ಹಾಕಬಾರದು. ಹೆಸರು ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಸಚಿವರು ಗಮನಹರಿಸಲಿ.
| ನಿತೀನ್ ಗುತ್ತೇದಾರ್ ಜಿಪಂ ಮಾಜಿ ಅಧ್ಯಕ್ಷ