ಬೆಂಬಲ ಬೆಲೆಗೆ ವರ್ತಕರು ಖರೀದಿಸಲಿ

ಕಲಬುರಗಿ: ಸರ್ಕಾರ ನೀಡುವ ಬೆಂಬಲ ಬೆಲೆಯಲ್ಲಿಯೇ ವರ್ತಕರು ಮುಕ್ತ ಮಾರುಕಟ್ಟೆಯಲ್ಲಿ ಧಾನ್ಯ ಖರೀದಿಸುವಂತಾದರೆ ರೈತರ ಸಮಸ್ಯೆಗಳು ಶೀಘ್ರ ಪರಿಹಾರ ಕಾಣುತ್ತವೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ ಕಮ್ಮರಡಿ ಅಭಿಪ್ರಾಯ ಪಟ್ಟರು.

ಹೈದರಾಬಾದ್ ಕರ್ನಾಟಕ ಕೈಗಾರಿಕೋದ್ಯಮ ಸಂಸ್ಥೆ, ದಾಲ್ಮಿಲ್ ಅಸೋಸಿಯೇಶನ್, ಉತ್ತರ ಕರ್ನಾಟಕ ಎಪಿಎಂಸಿ ವರ್ತಕರ ಸಂಘದ ಸಹಯೋಗದಡಿ ಗಂಜ್ನ ಲಾಹೋಟಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಭಾವಾಂತರ ಯೋಜನೆ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರೈತನಿಗೆ ಒಂದಿಷ್ಟು ಲಾಭ ಬರುವಂತೆ ಸಮಗ್ರ ಲೆಕ್ಕಾಚಾರ ಹಾಕಿ ಸರ್ಕಾರಕ್ಕೆ ಶಿಫಾರಸು ಮಾಡುವ ಉದ್ದೇಶ ಆಯೋಗ ಹೊಂದಿದೆ. ಸರ್ಕಾರದ ಬೆಂಬಲ ಬೆಲೆಯಲ್ಲಿ ಖರೀದಿಸಿದರೆ ಶೇ.15 ಕಮೀಷನ್ ನೀಡಬಹುದು. ವರ್ತಕರು ಸಕಾರಾತ್ಮಕವಾಗಿ ಸ್ಪಂದಿಸಬೇಕು. ರಾಜ್ಯದಲ್ಲಿ ಹೆಚ್ಚು ಉತ್ಪಾದನೆ ಆಗುತ್ತಿರುವ ದ್ವಿದಳ ಧಾನ್ಯ ಭಾವಾಂತರ ಯೋಜನೆಯಡಿ ಖರೀದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಎಪಿಎಂಸಿ ಮೂಲಕವೇ ರೈತರು ನೇರವಾಗಿ ತಮ್ಮ ಉತ್ಪನ್ನ ಮಾರುವಂತಾಗಬೇಕು ಎಂದರು.

ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ.ಪಾಟೀಲ್ ಮಾತನಾಡಿ, ರೈತರು ಮಾರುಕಟ್ಟೆ ಜೀವನಾಡಿ ಆಗಿದ್ದಾರೆ. ಕೃಷಿ ಉತ್ಪನ್ನಕ್ಕೆ ಸಂಬಂಧಿಸಿದಂತೆ ಶೇ.28 ವರ್ತಕರು ಬದುಕುತ್ತಿದ್ದಾರೆ. ರೈತರಿಗೆ ಬೆಂಬಲ ಬೆಲೆ ನೀಡುವುದು, ವರ್ತಕರು ಖರೀದಿ ಕೇಂದ್ರಗಳಿಗೆ ಕಮೀಷನ್ ಕೊಡದಂತಹ ವಾತಾವರಣ ನಿರ್ಮಿಸುವುದು, ರೈತರು ತಮ್ಮ ಬೆಳೆಯನ್ನು ಎಪಿಎಂಸಿ ಮೂಲಕವೇ ಮಾರುವಂತಾಗಬೇಕು. ಮುಕ್ತ ಮಾರುಕಟ್ಟೆ ದರಕ್ಕೆ ವ್ಯತ್ಯಾಸದ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಹೇಳಿದರು.

ರಾಯಚೂರು ವರ್ತಕರ ಸಂಘದ ಅಧ್ಯಕ್ಷ ನಾಗನಗೌಡ ಮಾತನಾಡಿ, ರೈತರ ನೆರವಿಗೆ ಸರ್ಕಾರ ಬರುವ ಮನಸ್ಸಿದ್ದರೆ ಕೂಡಲೇ ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು. ಮಧ್ಯವರ್ತಿಗಳೇ ರೈತರ ಸಾವಿಗೆ ಕಾರಣವಾಗುವ ಸ್ಥಿತಿಯಿದೆ. ಇದರ ನಿಯಂತ್ರಣಕ್ಕೆ ಭಾವಾಂತರ ಯೋಜನೆಯಡಿ ವ್ಯತ್ಯಾಸ ಹಣ ಭರಿಸಬೇಕು ಎಂದು ಒತ್ತಾಯಿಸಿದರು.

ಯಾದಗಿರಿ ವರ್ತಕರ ಸಂಘದ ಅಧ್ಯಕ್ಷ ಸೋಮನಾಥ ಜೈನ, ಬೀದರ್ ಚೇಂಬರ್ ಅಧ್ಯಕ್ಷ ಬಿ.ಜಿ.ಶೆಟಕಾರ, ಗದಗ ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಶಂಕ್ರಣ್ಣ ಗದ್ದಿಗೇರಿ, ಪ್ರಾಂತ ರೈತ ಸಂಘದ ಮುಖ್ಯಸ್ಥ ಮಾರುತಿ ಮಾನ್ಪಡೆ, ಬಸವರಾಜ ಇಂಗಿನ್, ಶ್ರೀಮಂತ ಉದನೂರ ಮಾತನಾಡಿದರು. ವರ್ತಕರಾದ ಶಶಿಕಾಂತ ಪಾಟೀಲ್, ಶಿವರಾಜ ಇಂಗಿನಶೆಟ್ಟಿ, ಉದ್ಯಮಿ ಡಾ.ಎಸ್.ಎಸ್.ಪಾಟೀಲ್, ಸುರೇಶ ನಂದ್ಯಾಳ, ಚಾಮರಾಜ ಮಾಲಿಪಾಟೀಲ್, ಹನುಮಂತಗೌಡ ಬೆಳಗುಂಪಿ, ಶಿವಕುಮಾರ ಶೆಟ್ಟಿ, ಜಂಟಿ ಕೃಷಿ ನಿದರ್ೇಶಕ ಡಾ.ರಿತೇಂದ್ರನಾಥ ಸುಗೂರು, ಕಲಬುರಗಿ ಎಪಿಎಂಸಿ ಕಾರ್ಯದಶರ್ಿ ಎಂ.ಎಸ್.ರಾಜಶ್ರೀ, ರಾಧಾಕೃಷ್ಣ ರಘೋಜಿ, ಚಂದ್ರಶೇಖರ ತಳ್ಳಳ್ಳಿ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು, ವಿಜಯಪುರ, ಗದಗ, ಹುಬ್ಬಳ್ಳಿ, ರಾಣಿಬೆನ್ನೂರ, ಇಂಡಿ, ತಾಳಿಕೋಟೆ ಸೇರಿ ಜಿಲ್ಲೆಯ ಎಲ್ಲ ತಾಲೂಕು ವರ್ತಕರ ಸಂಘದ ಅಧ್ಯಕ್ಷರು ಭಾಗವಹಿಸಿದ್ದರು.

ರಾಜ್ಯದಲ್ಲೀಗ ಸರ್ಕಾರ ಯಾವ ಪಕ್ಷದ್ದೂ ಇಲ್ಲ. ಎಲ್ಲ ಪಕ್ಷಗಳೂ ಲೋಕಸಭೆ ಚುನಾವಣೆಯತ್ತ ದೃಷ್ಟಿ ನೆಟ್ಟಿವೆ. ಹೈಕ ಭಾಗದ ಎಲ್ಲ ಶಾಸಕರನ್ನು ಕರೆದೊಯ್ದು ಮುಖ್ಯಮಂತ್ರಿಗೆ ಭೇಟಿಯಾದರೆ ಕೆಲಸ ಶೀಘ್ರವಾಗುತ್ತದೆ. ಸರ್ಕಾರದ ಕಬ್ಬಿಣ ಕಾದಿದೆ. ಈಗಲೇ ಬಡಿಯಬೇಕು. ವ್ಯಾಪಾರಸ್ಥರು ಬರೀ ಸಮಾವೇಶ ಮಾಡುವುದರಿಂದ ಪ್ರಯೋಜನವಿಲ್ಲ. ಚುನಾವಣೆ ಬಂದಾಗ ಮಾತ್ರ ರಾಜಕಾರಣಿಗಳು ವ್ಯಾಪಾರಸ್ಥರ ಮಾತು ಕೇಳುತ್ತಾರೆ ಎಂಬುದನ್ನು ನೆನಪಿನಲ್ಲಿಡಿ.
| ಬಿ.ಜಿ.ಶೆಟಕಾರ, ಬೀದರ್ ಜಿಲ್ಲಾ ಚೇಂಬರ್ ಅಧ್ಯಕ್ಷ