ವಿವಾದಿತ ವೀಡಿಯೊ; ಬಾಬಾಖಾನ್ ಸೆರೆ

ಕಲಬುರಗಿ: ವಿವಾದಾತ್ಮಕ ಹೇಳಿಕೆ ನೀಡಿ ಒಂದು ಸಮುದಾಯದವರ ಭಾವನೆಗೆ ಧಕ್ಕೆ ತಂದಿರುವ ಆರೋಪದ ಮೇರೆಗೆ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಬಾಬಾ ಖಾನ್ರನ್ನು ಪೊಲೀಸರು ಬುಧವಾರ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಬಾಬಾಖಾನ್ ಮಾತನಾಡಿದ್ದಾರೆ ಎನ್ನಲಾದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಮಾತನಾಡುತ್ತ ಪ್ರಾರ್ಥನಾ ಮಂದಿರಗಳಿಗೆ ವಿದ್ಯುತ್ ದೀಪಾಲಂಕಾರ ಮೊದಲಾದವನ್ನು ಮಾಡುವುದರ ಬದಲಿಗೆ ಆ ಹಣವನ್ನು ಬಡವರಿಗೆ, ನಿರ್ಗತಿಕರಿಗೆ ನೀಡುವ ಮೂಲಕ ನೆರವಾಗಬೇಕು ಎಂದು ಹೇಳಿದ್ದಾರೆ. ಇದು ಇನ್ನೊಂದು ಗುಂಪಿನವರನ್ನು ಕೆರಳುವಂತೆ ಮಾಡಿದೆ.

ಹೇಳಿಕೆ ಖಂಡಿಸಿ ಸೋಮವಾರ ಮತ್ತು ಮಂಗಳವಾರ ದರ್ಗಾ ಹಾಗೂ ರೋಜಾ ಪ್ರದೇಶದಲ್ಲಿ ಜನರು ಬಾಬಾಖಾನ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಅಲ್ ಅದೀಸ್ ಸಮುದಾಯದವರಿಗೆ ಪ್ರಾರ್ಥನಾ ಮಂದಿರಗಳ ಬಗ್ಗೆ ನಂಬಿಕೆ ಇರಲ್ಲ. ಹೀಗಾಗಿ ಅವರ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿ ರೋಜಾ ಠಾಣೆಗೆ ದೂರು ನೀಡಿದ್ದರಿಂದ ಮಂಗಳವಾರ ಪ್ರಕರಣ ದಾಖಲಾಗಿದೆ.

ಎಎಸ್ಪಿ ಲೋಕೇಶ ಜಗಲಾಸರ್ ಅವರು ಬಾಬಾಖಾನ್ ಅವರನ್ನು ವಿಚಾರಣೆೆಗೆ ಒಳಪಡಿಸಿದರು. ಬಳಿಕ ಬಂಧಿಸಿದ್ದಲ್ಲದೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಎಸ್ಪಿ ಶಶಿಕುಮಾರ ತಿಳಿಸಿದ್ದಾರೆ.