ಆಂತರಿಕ ಕೊಳೆ ತೊಳೆಯಲು ಪ್ರವಚನ ಅಗತ್ಯ

ವಿಜಯವಾಣಿ ಸುದ್ದಿಜಾಲ ಅಫಜಲಪುರ
ನಾವು ಪ್ರತಿನಿತ್ಯ ಬಾಹ್ಯ ಕೊಳೆಯನ್ನು ತೊಳೆಯುತ್ತೇವೆ. ನಮ್ಮಲ್ಲಿನ ಆಂತರಿಕ ಕೊಳೆಯನ್ನು ತೆಗೆಯಲು ಪ್ರವಚನ ಆಲಿಸಲು ಬಂದಿದ್ದೇವೆ. ಶ್ರದ್ದೆಯಿಂದ ಸಿದ್ದೇಶ್ವರ ಶ್ರೀಗಳ ಪ್ರವಚನ ಆಲಿಸಿ ನಮ್ಮೆಲ್ಲರ ದಿನನಿತ್ಯದ ಬದುಕನ್ನು ಸುಂದರವಾಗಿ ಮಾಡಿಕೊಳ್ಳಬೇಕು ಎಂದು ರಾಜ್ಯಸಭೆ ಮಾಜಿ ಸದಸ್ಯ ಬಸವರಾಜ ಪಾಟೀಲ್ ಸೇಡಂ ಹೇಳಿದರು.

ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿ ಒಂದು ತಿಂಗಳ ಕಾಲ ನಡೆಯುವ ವಿಜಯಪುರ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಯಾವ ಮನೆಯಲ್ಲಿ ಒಳ್ಳೆಯ ಮಾತು, ಪ್ರೀತಿ, ವಾತ್ಸಲ್ಯದ ವಾತಾವರಣ ಇರುತ್ತದೆ. ಆ ಮನೆಯಲ್ಲಿ ಪರಮಾತ್ಮನು ಇರುತ್ತಾನೆ. ಮಕ್ಕಳಿಗೆ ಮನೆಯಲ್ಲಿ ಒಳ್ಳೆಯ ಸಂಸ್ಕೃತಿ ಹಾಗೂ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಶಾಸಕ ಎಂ.ವೈ.ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ದಶಕದ ನಂತರ ಸಿದ್ದೇಶ್ವರ ಶ್ರೀಗಳು ಅಫಜಲಪುರಕ್ಕೆ ಪಟ್ಟಣಕ್ಕೆ ಆಗಮಿಸಿ, ಅಧ್ಯಾತ್ಮದ ಬದುಕನ್ನು ಕಲಿಸುತ್ತಿರುತ್ತಿರುವುದು ನಮ್ಮೆಲ್ಲರ ಸುದೈವದ ಸಂಗತಿ. 2ನೇ ಬಾರಿಗೆ ನಮ್ಮ ತಾಲೂಕಿನ ಜನರಿಗೆ ಶ್ರೀಗಳ ಪ್ರವಚನ ಆಲಿಸುವ ಸೌಭಾಗ್ಯ ದೊರೆತಿದೆ ಎಂದು ಖುಷಿ ವ್ಯಕ್ತಪಡಿಸಿದರು.

ವಿಜಯಪುರ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳು, ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಚಿನ್ಮಯಗಿರಿಯ ಶ್ರೀ ಸಿದ್ದರಾಮ ಶಿವಾಚಾರ್ಯರು, ಬಡದಾಳ ತೇರಿನ ಮಠದ ಶ್ರೀ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು, ಸೊನ್ನದ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು, ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಕುಮಾರ ಶಿವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಉದ್ಯಮಿ ರಾಜೇಂದ್ರ ಪಾಟೀಲ್ ರೇವೂರ, ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ರೈತ ಬೆಳೆದ ಎಲ್ಲ ಆಹಾರ ಧಾನ್ಯಗಳು ಪ್ರತಿಯೊಬ್ಬರಿಗೂ ಬೇಕು. ಆದರೆ ಕೃಷಿ ಕಾಯಕ ಮಾಡಲು ಯಾರು ಇಷ್ಟಪಡುವುದಿಲ್ಲ. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು. ರೈತರಿಗೆ ಗೌರವ ಸಿಗುವಂತ ಕೆಲಸ ನಡೆಯಬೇಕಿದೆ.
| ಬಸವರಾಜ ಪಾಟೀಲ್ ಸೇಡಂ ಮಾಜಿ ಸಂಸದ, ಕಲಬುರಗಿ