ಭಗವಂತನನ್ನು ಭಕ್ತಿಯಿಂದ ನಂಬಿದರೆ ಅನುಗ್ರಹ

ವಿಜಯವಾಣಿ ಸುದ್ದಿಜಾಲ ಅಫಜಲಪುರ
ಭಗವಂತ ಮತ್ತು ಧರ್ಮದ ವಿಷಯದಲ್ಲಿ ಆಸ್ತಿಕರು ದೃಢ ಭಾವನೆ ಹೊಂದಿರುತ್ತಾರೆ ಎಂದು ಶೃಂಗೇರಿ ಶಾರದ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು.

ಪಟ್ಟಣದಲ್ಲಿ ಗುರುವಾರ ನಡೆದ ಭವ್ಯ ವಿಜಯ ಯಾತ್ರೆ ನಂತರ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಆಸ್ತಿಕಮತ ನಿರ್ದಿಷ್ಟವಾದದ್ದು. ಭಗವಂತ ಅವತಾರ ಮಾಡಿದಾಗ ಅನೇಕ ದೇವತೆಗಳು ಅವತಾರ ಮಾಡುತ್ತಾರೆ. ಭಕ್ತಿಯಿಂದ ಭಗವಂತನನ್ನು ನಂಬಿದರೆ ನಮಗೆ ಅವನ ಅನುಗ್ರಹ ದೊರೆಯುತ್ತದೆ. ಆಸ್ತಿಕರು ಕರ್ಮವನ್ನು ಮಾಡಿ ಭಗವಂತನ ಅನುಗ್ರಹ ಪಡೆಯಬೇಕು ಎಂದರು.

ನಮ್ಮಲ್ಲಿರುವ ಅಜ್ಞಾನ ಹೋಗಲಾಡಿಸಿಕೊಂಡು ಜ್ಞಾನ ಪಡೆದು ಮೋಕ್ಷ ಪಡೆಯಬೇಕು. ಆತ್ಮವೇ ಜ್ಯೋತಿ, ಅದು ಎಲ್ಲದಕ್ಕಿಂತ ಮುಖ್ಯ. ನಮ್ಮಲ್ಲಿನ ಆತ್ಮ ಸ್ವರೂಪವನ್ನು ಶಂಕರರು ತೋರಿಸಿದ್ದಾರೆ. ವೇದಾಂತ ಸಿದ್ಧಾಂತವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಬ್ಬರನ್ನು ದೃಷ್ಟಿಯಲ್ಲಿಟ್ಟುಕೊಂಡು ಶಂಕರರು ಉಪದೇಶಗಳನ್ನು ಮಾಡಿದ್ದಾರೆ ಎಂದು ಹೇಳಿದರು.

ನಗರದಲ್ಲಿ ಸುಂದರವಾದ ಶಂಕರ ಮಠವನ್ನು ಭಕ್ತಾಧಿಗಳು ನಿರ್ಮಿಸಿರುವುದನ್ನು ನೋಡಿದರೆ ನಮ್ಮ ಹಿಂದಿನ ಗುರುಗಳು ಮಾಡಿರುವ ಪರಾಮನುಗ್ರಹವಾಗಿದೆ. ಇಲ್ಲಿನ ಶಂಕರ ಮಠದಲ್ಲಿ ನಮ್ಮ ಗುರುಗಳು ಕುಂಭಾಭಿಷೇಕ ಮಾಡಿ ಹೋಗಿದ್ದಾರೆ. ತಮ್ಮೆಲ್ಲರಿನ ಅನನ್ಯ ಭಕ್ತಿ ನೋಡಿ ನಮಗೆ ತುಂಬ ಸಂತೋಷವಾಗಿದೆ ಎಂದು ತಿಳಿಸಿದರು.

ಪಟ್ಟಣದ ಪ್ರಮುಖ ಬೀದಿಗಳಳಲ್ಲಿ ಜಗದ್ಗುರುಗಳ ಭವ್ಯ ಶೋಭಾಯಾತ್ರೆ ನಡೆಯಿತು. ಶೃಂಗೇರಿ ಶಾರದಾ ಪೀಠದ ಆಡಳಿತಧಿಕಾರಿ ಡಾ.ವಿ.ಆರ್. ಗೌರಿಶಂಕರ, ಜಿಪಂ ಸದಸ್ಯ ಅರುಣಕುಮಾರ ಪಾಟೀಲ್, ಪ್ರಮುಖರಾದ ಸಂಗ್ರಾಮಗೌಡ ಪಾಟೀಲ್, ಪಿ.ಎಚ್. ಕುಲಕರ್ಣಿ, ಡಿ.ಎಚ್. ಕುಲಕರ್ಣಿ, ಎಂ.ಬಿ. ಶಾಸ್ತ್ರಿ, ಅಂಜು ಕುಲಕರ್ಣಿ, ಪಾಂಡುರಂಗ ಮೋಹರಿರ, ಗುರುಭಟ್, ಉದಯಕುಮಾರ ಮೋರೆ, ರವಿ ಕುಲಕರ್ಣಿ, ದತ್ತಾತ್ರೇಯ ಕುಲಕರ್ಣಿ, ಅನಂತರಾವ ಕುಲಕರ್ಣಿ, ಆನಂದ ಆಲಮೇಲಕರ, ಭೀಮಾಶಂಕರ ಜೋಷಿ, ಸಂಜೀವಕುಮಾರ ನಿಂಬಾಳ, ರಾಜು ಪಾಟೀಲ್, ನಿಂಗರಾಜ ಅತನೂರೆ, ಹರ್ಷ ಕುಲಕರ್ಣಿ, ಉದಯಕುಮಾರ ಮೋರೆ, ಚಂದು ಕರಜಗಿ ಇದ್ದರು.2